ಹೊಸನಗರ

ಹೊಸನಗರ: ಸಾವಿರಾರು ಭಕ್ತರ ಸಮ್ಮುಖದಲ್ಲಿ ಹಿಂದೂ ಮಹಾಸಭಾ ಗಣೇಶನ ಅದ್ದೂರಿ ವಿಸರ್ಜನಾ ಮೆರವಣಿಗೆ

ಹೊಸನಗರ ಹಿಂದೂ ಮಹಾಸಭಾ ಗಣಪತಿಯ ವಿಸರ್ಜನಾ ಪೂರ್ವ ಶೋಭಾಯಾತ್ರೆಯು ಸೋಮವಾರ ಸಂಜೆ ಅತ್ಯಂತ ವೈಭವದಿಂದ ಜರುಗಿತು.

ಹಿಂದೂ ಮಹಾಸಭಾ ಗಣೇಶನ ಅದ್ದೂರಿ ವಿಸರ್ಜನಾ ಮೆರವಣಿಗೆ HMS

ಹೊಸನಗರ: ಪಟ್ಟಣದ ಅಂಚೆ ಕಚೇರಿ ಸಮೀಪ ಕಳೆದ 15 ದಿನಗಳಿಂದ ಪ್ರತಿಷ್ಠಾಪಿಸಲಾಗಿದ್ದ ಹಿಂದೂ ಮಹಾಸಭಾ ಗಣಪತಿಯ ವಿಸರ್ಜನಾ ಪೂರ್ವ ಶೋಭಾಯಾತ್ರೆಯು ಸೋಮವಾರ ಸಂಜೆ ಅತ್ಯಂತ ವೈಭವದಿಂದ ಜರುಗಿತು.

WhatsApp Group Join Now
Telegram Group Join Now
Instagram Group Join Now

ಕಳೆದ ಎರಡು ವಾರಗಳಿಂದ ಪ್ರತಿದಿನ ಸಂಜೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಯಕ್ಷಗಾನ ಕಲಾವಿದರು ಮತ್ತು ಕಲಾ ತಂಡಗಳಿಗೆ ಸನ್ಮಾನ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಗಮನ ಸೆಳೆದಿದ್ದ ಗಣೇಶೋತ್ಸವಕ್ಕೆ, ಬೃಹತ್ ಮೆರವಣಿಗೆಯ ಮೂಲಕ ತೆರೆ ಎಳೆಯಲಾಯಿತು.

ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚಾರ:

ಸೋಮವಾರ ಸಂಜೆ 6 ಗಂಟೆಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಶೋಭಾಯಾತ್ರೆಗೆ ಅಧಿಕೃತ ಚಾಲನೆ ನೀಡಲಾಯಿತು. ಗಣಪತಿ ದೇವಸ್ಥಾನದ ರಸ್ತೆಯಿಂದ ಆರಂಭವಾದ ಮೆರವಣಿಗೆಯು ದ್ಯಾವರ್ಸ, ನೆಹರು ರಸ್ತೆ ಹಾಗೂ ಕೋರ್ಟ್ ಸರ್ಕಲ್ ಮಾರ್ಗವಾಗಿ ಚೌಡಮ್ಮ ರಸ್ತೆಯನ್ನು ತಲುಪಿತು. ಬಳಿಕ ಶಿವಪ್ಪನಾಯಕ ರಸ್ತೆ, ಮಸೀದಿ ರಸ್ತೆ, ಚರ್ಚ್ ರಸ್ತೆ, ಆರ್.ಕೆ. ರಸ್ತೆ, ಮಾರಿಗುಡ್ಡ ರಸ್ತೆ, ಮಾವಿನಕೊಪ್ಪ, ಶಿವಮೊಗ್ಗ ರಸ್ತೆ ಹಾಗೂ ಸಾಗರ ರಸ್ತೆ ಸೇರಿದಂತೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಅಹೋರಾತ್ರಿ ಸಾಗುವ ಈ ಮೆರವಣಿಗೆಯ ಬಳಿಕ, ಮಂಗಳವಾರ ಮುಂಜಾನೆ 6 ಗಂಟೆಗೆ ಇಲ್ಲಿನ ಸಂತೆ ಮಾರುಕಟ್ಟೆ ಸಮೀಪದ ಗಣಪತಿ ಕೆರೆಯಲ್ಲಿ ಮೂರ್ತಿಯನ್ನು ವಿಸರ್ಜಿಸಲಾಗುತ್ತದೆ.

ಗಮನ ಸೆಳೆದ ಸೌಹಾರ್ದತೆ:

ಮೆರವಣಿಗೆಯುದ್ದಕ್ಕೂ ಭಕ್ತರಿಗಾಗಿ ವಿಶೇಷ ಆತಿಥ್ಯದ ವ್ಯವಸ್ಥೆ ಮಾಡಲಾಗಿತ್ತು. ಚೌಡಮ್ಮ ರಸ್ತೆಯ ಬಳಿ ಸ್ಥಳೀಯ ಆಟೋ ರಿಕ್ಷಾ ಮಾಲೀಕರ ಸಂಘದ ವತಿಯಿಂದ ಭಕ್ತರಿಗೆ ಲಘು ಉಪಹಾರದ ವ್ಯವಸ್ಥೆ ಕಲ್ಪಿಸಲಾಗಿತ್ತು. ವಿಶೇಷವಾಗಿ ಮಸೀದಿ ರಸ್ತೆಯಲ್ಲಿ ಶೋಭಾಯಾತ್ರೆ ಸಾಗುವಾಗ ಮುಸ್ಲಿಂ ಬಾಂಧವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಜನರಿಗೆ ಕೇಕ್ ಹಾಗೂ ತಂಪು ಪಾನೀಯಗಳನ್ನು ವಿತರಿಸಿ, ನಾವೆಲ್ಲರೂ ಒಂದೇ ಎಂಬ ಭಾವೈಕ್ಯತೆಯ ಸಂದೇಶವನ್ನು ಸಾರಿದರು.

ಕಲಾ ತಂಡಗಳ ಮೆರುಗು, ಜನಸಾಗರದ ಉತ್ಸಾಹ:

ಗಣೇಶ್ ಮಧುಕರ್ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಈ ಬೃಹತ್ ಶೋಭಾಯಾತ್ರೆಯಲ್ಲಿ ಸಾವಿರಾರು ಸಾರ್ವಜನಿಕರು ಪಾಲ್ಗೊಂಡು ಸಂಭ್ರಮಿಸಿದರು. ಮೆರವಣಿಗೆಯಲ್ಲಿ ತಟ್ಟಿರಾಯ, ಆಕರ್ಷಕ ಗೊಂಬೆ ಕುಣಿತ, ವಿವಿಧ ಮಹಿಳಾ ಕಲಾ ತಂಡಗಳ ಕೋಲಾಟ ಹಾಗೂ ಡ್ರಮ್ಸ್ ವಾದನಗಳು ನೋಡುಗರ ಗಮನ ಸೆಳೆದವು. ಕಲಾ ತಂಡಗಳ ತಾಳಕ್ಕೆ ತಕ್ಕಂತೆ ಯುವಕರು ಹಾಗೂ ಭಕ್ತಾದಿಗಳು ಹೆಜ್ಜೆ ಹಾಕಿ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]

error: Content is protected !!