ರಿಪ್ಪನ್‌ಪೇಟೆ: ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ವತಿಯಿಂದ 71ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ನೀಡಲಾಗುವ ಪ್ರತಿಷ್ಠಿತ ‘ಕರುನಾಡ ಕನ್ನಡ ಕಣ್ಮಣಿ’ ರಾಜ್ಯ ಪ್ರಶಸ್ತಿಯನ್ನು ಹೊಸನಗರ ತಾಲ್ಲೂಕಿನ ಪ್ರತಿಭಾವಂತ ಗ್ರಾಮೀಣ ಗಾಯಕಿ ಸುಧಾ ಬಸವರಾಜ್ (ಸುಧಾಗೌಡ) ಅವರು ಸ್ವೀಕರಿಸಿದ್ದಾರೆ. ಇತ್ತೀಚೆಗೆ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರಿಗೆ ಈ ಗೌರವವನ್ನು ನೀಡಿ ಸನ್ಮಾನಿಸಲಾಯಿತು.
ಗ್ರಾಮೀಣ ಪ್ರತಿಭೆಯ ಸಂಗೀತ ಪಯಣ:
ಗ್ರಾಮೀಣ ಭಾಗದಲ್ಲಿ ಎಲೆಮರೆಯ ಕಾಯಿಯಂತೆ ಇದ್ದುಕೊಂಡೇ ತಮ್ಮ ಸುಮಧುರ ಕಂಠದ ಮೂಲಕ ಜಾನಪದ ಗೀತೆಗಳು, ಭಾವಗೀತೆಗಳು ಹಾಗೂ ಚಲನಚಿತ್ರ ಗೀತೆಗಳನ್ನು ಹಾಡುತ್ತಾ ಸುಧಾ ಅವರು ಸಂಗೀತ ಪ್ರಿಯರ ಮನಗೆದ್ದಿದ್ದಾರೆ.
ಕೇವಲ ವೈಯಕ್ತಿಕ ಗಾಯನಕ್ಕೆ ಸೀಮಿತವಾಗದೆ, ತಮ್ಮದೇ ಆದ ಪುಟ್ಟ ಸಂಗೀತ ಕಲಾವಿದರ ತಂಡವನ್ನು (ಆರ್ಕೆಸ್ಟ್ರಾ) ಕಟ್ಟಿಕೊಂಡು ಮದುವೆ, ಗಣೇಶೋತ್ಸವ ಸೇರಿದಂತೆ ಹಲವು ಶುಭ ಸಮಾರಂಭಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನೀಡುವ ಮೂಲಕ ಮನೆಮಾತಾಗಿದ್ದಾರೆ.
ಮಲೆನಾಡಿನ ಕಲಾವಿದರ ಹರ್ಷ:
ಗ್ರಾಮೀಣ ಭಾಗದ ಕಲಾವಿದೆಯೊಬ್ಬರ ಈ ನಿರಂತರ ಸಂಗೀತ ಸೇವೆ ಮತ್ತು ಸಾಧನೆಯನ್ನು ಗುರುತಿಸಿ ದಾವಣಗೆರೆಯ ಕಲಾಕುಂಚ ಸಂಸ್ಥೆಯು ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಿರುವುದು ಮಲೆನಾಡಿನ ಸಮಸ್ತ ಸಂಗೀತ ಕಲಾವಿದರು ಹಾಗೂ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

