ರಿಪ್ಪನ್‌ಪೇಟೆ: ಇಲ್ಲಿನ ವ್ಯವಸಾಯ ಸೇವಾ ಸಹಕಾರ ಸಂಘದ (ವಿ.ಎಸ್.ಎಸ್.ಎನ್) ನ್ಯಾಯಬೆಲೆ ಅಂಗಡಿಯನ್ನು ಏಕಾಏಕಿ ಮುಚ್ಚಿರುವುದರಿಂದ ಪಡಿತರ ಚೀಟಿದಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ ಐದಾರು ದಶಕಗಳಿಂದ ಅಕ್ಕಿ, ಸಕ್ಕರೆ, ಸೀಮೆಎಣ್ಣೆ ಸೇರಿದಂತೆ ಸರ್ಕಾರದ ವಿವಿಧ ಪಡಿತರ ಸಾಮಗ್ರಿಗಳನ್ನು ವಿತರಿಸುತ್ತಿದ್ದ ಈ ಸೊಸೈಟಿ, ಅಕ್ಟೋಬರ್ ತಿಂಗಳ ಪಡಿತರವನ್ನು ನೀಡದೆ ದಿಢೀರ್ ಬಾಗಿಲು ಮುಚ್ಚಿದೆ. ಇದರಿಂದಾಗಿ ಸ್ಥಳೀಯ ಗ್ರಾಹಕರು ಪಡಿತರಕ್ಕಾಗಿ ಬೇರೆ ಅಂಗಡಿಗಳಿಗೆ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಾರ್ವಜನಿಕರು ಮಾಧ್ಯಮದವರ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಹೋರಾಟ ಮಾಡಿ ತೆರೆದ ಅಂಗಡಿ ಈಗ ದಿಢೀರ್ ಬಂದ್:
ಕೃಷಿ ಪತ್ತಿನ ಸೇವಾ ಸಹಕಾರ ಸಂಘದ ಅಡಿಯಲ್ಲಿ ಸುಮಾರು 40-50 ವರ್ಷಗಳಿಂದ ನ್ಯಾಯಬೆಲೆ ಅಂಗಡಿ ಕಾರ್ಯನಿರ್ವಹಿಸುತ್ತಿತ್ತು. ಈ ಹಿಂದೆ ದಾಸ್ತಾನು ಮಳಿಗೆಯಲ್ಲಿ ತೂಕ ಮತ್ತು ಅಳತೆಯಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ಅಂಗಡಿಯ ಪರವಾನಗಿಯನ್ನು ರದ್ದುಗೊಳಿಸಲಾಗಿತ್ತು. ಆ ಸಂದರ್ಭದಲ್ಲಿ ಸಂಘದವರು ಶತಾಯಗತಾಯ ಪ್ರಯತ್ನ ನಡೆಸಿ, ಜಿಲ್ಲಾಧಿಕಾರಿಗಳಿಂದ ವಿಶೇಷ ಆದೇಶ ತಂದು ಅಂಗಡಿಯನ್ನು ಪುನರಾರಂಭಿಸಿದ್ದರು. ಆದರೆ, ಇದೀಗ ಯಾವುದೇ ಮುನ್ಸೂಚನೆಯಿಲ್ಲದೆ ಅಂಗಡಿಯನ್ನು ಬಂದ್ ಮಾಡಿರುವುದು ಪಡಿತರದಾರರಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಸರತಿ ಸಾಲಿನಲ್ಲಿ ನಿಂತು ಗ್ರಾಹಕರ ಪರದಾಟ:
ಈ ಸಹಕಾರ ಸಂಘದ ವ್ಯಾಪ್ತಿಯಲ್ಲಿ 600ಕ್ಕೂ ಹೆಚ್ಚು ಪಡಿತರ ಕಾರ್ಡ್ದಾರರಿದ್ದಾರೆ. ಇದೀಗ ಈ ಅಂಗಡಿಯನ್ನು ರದ್ದುಗೊಳಿಸಿ, ಇಲ್ಲಿನ ಕಾರ್ಡ್ದಾರರನ್ನು ಬರುವೆ ಗ್ರಾಮದ ‘ಮಾತಾ ವಿವಿಧೋದ್ದೇಶ ಮಹಿಳಾ ಸಹಕಾರ ಸಂಘ’ ಹಾಗೂ ಸಾಗರ ರಸ್ತೆಯಲ್ಲಿರುವ ಮತ್ತೊಂದು ನ್ಯಾಯಬೆಲೆ ಅಂಗಡಿಗೆ ವರ್ಗಾಯಿಸಲಾಗಿದೆ. ಒಂದೇ ಬಾರಿಗೆ ಹೆಚ್ಚುವರಿ ಕಾರ್ಡ್‌ದಾರರು ಸೇರ್ಪಡೆಯಾಗಿರುವುದರಿಂದ, ಗ್ರಾಹಕರು ಪಡಿತರ ಪಡೆಯಲು ಎರಡೂ ಅಂಗಡಿಗಳ ಮುಂದೆ ದಿನಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲುವಂತಾಗಿದೆ.
ಈ ಅವ್ಯವಸ್ಥೆಯ ವಿರುದ್ಧ ಸ್ಥಳೀಯರಾದ ರಾಮಚಂದ್ರ, ಶೋಭಾ, ಸುಲೋಚನಾ, ಜಗದೀಶ, ಚಿದಾನಂದ, ಗುಲಾಬಿ, ಸೋಮಶೇಖರ, ಗಜೇಂದ್ರ, ಯೋಮಕೇಶ್, ಮುಸ್ತಾಫ್, ಷರೀಪಾಭಿ, ಫಾತಿಮಾ, ಆರೀಫ್ ಸೇರಿದಂತೆ ಹಲವು ಗ್ರಾಹಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸರ್ಕಾರ ತಕ್ಷಣವೇ ಈ ಸಮಸ್ಯೆಯತ್ತ ಗಮನಹರಿಸಿ, ಪಡಿತರ ವಿತರಣೆಗೆ ಸೂಕ್ತ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

