ಶಿವಮೊಗ್ಗ

ಕೊಂಕಣ ರೈಲ್ವೆ ಅಭಿವೃದ್ಧಿಗೆ ₹ 9 ಸಾವಿರ ಕೋಟಿ ಮೀಸಲು: ಸಚಿವ ವಿ. ಸೋಮಣ್ಣ ಘೋಷಣೆ

ಕೊಂಕಣ ರೈಲ್ವೆಯ ಬಾಕಿ ಉಳಿದಿರುವ ಕಾಮಗಾರಿಗಳಿಗಾಗಿ 9,000 ಕೋಟಿ ರೂಪಾಯಿ ಅನುದಾನವನ್ನು ಮಂಜೂರು ಮಾಡಲಾಗಿದೆ ಎಂದು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.

ಕೊಂಕಣ ರೈಲ್ವೆ ಅಭಿವೃದ್ಧಿಗೆ ₹ 9 ಸಾವಿರ ಕೋಟಿ ಮೀಸಲು V Somanna

ಶಿವಮೊಗ್ಗ: ರಾಜ್ಯದ ರೈಲ್ವೆ ವಲಯದ ಸಮಗ್ರ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಬದ್ಧವಾಗಿದ್ದು, ಕೊಂಕಣ ರೈಲ್ವೆಯ ಬಾಕಿ ಉಳಿದಿರುವ ಕಾಮಗಾರಿಗಳಿಗಾಗಿ 9,000 ಕೋಟಿ ರೂಪಾಯಿ ಅನುದಾನವನ್ನು ಮಂಜೂರು ಮಾಡಲಾಗಿದೆ ಎಂದು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now

ನಗರದ ಪ್ರವಾಸಿ ಮಂದಿರದಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ರೈಲ್ವೆ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಹಲವು ಯೋಜನೆಗಳಿಗೆ ಮರುಜೀವ ನೀಡಲಾಗುತ್ತಿದ್ದು, ರಾಜ್ಯಾದ್ಯಂತ ಒಟ್ಟು 52,000 ಕೋಟಿ ರೂಪಾಯಿ ಮೊತ್ತದ ರೈಲ್ವೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಮುಂದಿನ 25-30 ವರ್ಷಗಳ ಭವಿಷ್ಯದ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ಅವರು ವಿವರಿಸಿದರು.

ಟೆಂಡರ್ ರದ್ದು ಮತ್ತು ಹೊಸ ಸಮೀಕ್ಷೆಗಳು:

ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ಮಾರ್ಗದ ಕಾಮಗಾರಿಯಲ್ಲಿ ವಿಳಂಬ ಮಾಡಿದ್ದ ಗುತ್ತಿಗೆದಾರನನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದ್ದು, ಹಳೆಯ ಟೆಂಡರ್ ರದ್ದುಪಡಿಸಲಾಗಿದೆ. ಮುಂದಿನ ಎರಡು ತಿಂಗಳ ಒಳಗೆ ಹೊಸ ಟೆಂಡರ್ ಕರೆದು ಕಾಮಗಾರಿಗೆ ವೇಗ ನೀಡಲಾಗುವುದು. ಇದರ ಜತೆಗೆ ಶಿವಮೊಗ್ಗ-ಬೀರೂರು ಮಾರ್ಗದ ದ್ವಿಪಥ (ಡಬ್ಲಿಂಗ್) ಮತ್ತು ಶೃಂಗೇರಿ-ಶಿವಮೊಗ್ಗ ಹೊಸ ಮಾರ್ಗದ ಸಮೀಕ್ಷೆ ನಡೆಯುತ್ತಿದೆ ಎಂದರು.

2018ರಲ್ಲೇ ಒಪ್ಪಿಗೆ ಪಡೆದುಕೊಂಡಿದ್ದ ಶಿವಮೊಗ್ಗ-ಶೃಂಗೇರಿ-ಮಂಗಳೂರು ಯೋಜನೆಯ ಅಂತಿಮ ಸರ್ವೆ ಕಾರ್ಯ ಈ ವರ್ಷ (2025) ಶುರುವಾಗಿದೆ. 1511 ಕೋಟಿ ರೂ. ವೆಚ್ಚದ ತಾಳಗುಪ್ಪ-ಹೊನ್ನಾವರ ರೈಲ್ವೆ ಲೈನ್‌ಗೂ ಅನುಮೋದನೆ ಸಿಕ್ಕಿದೆ. ತಾಳಗುಪ್ಪ-ಹುಬ್ಬಳ್ಳಿ (178 ಕಿ.ಮೀ) ಹಾಗೂ ಭದ್ರಾವತಿ-ಚನ್ನಗಿರಿ (173 ಕಿ.ಮೀ) ಮಾರ್ಗದ ಸರ್ವೆ ಕಾರ್ಯ ಶೀಘ್ರವೇ ಶುರುವಾಗಲಿದೆ. ಜತೆಗೆ ಚಿಕ್ಕಮಗಳೂರು-ಶೃಂಗೇರಿ, ಹುಬ್ಬಳ್ಳಿ-ಅಂಕೋಲ ಮತ್ತು ಶಿವಮೊಗ್ಗ-ತೀರ್ಥಹಳ್ಳಿ-ಶೃಂಗೇರಿ ಮಾರ್ಗಗಳ ಸಮೀಕ್ಷೆಗೂ ಆದೇಶ ನೀಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ರೈಲ್ವೆ ನಿಲ್ದಾಣಗಳ ಆಧುನೀಕರಣ:

ಶಿವಮೊಗ್ಗ ಮತ್ತು ತುಮಕೂರು ರೈಲ್ವೆ ನಿಲ್ದಾಣಗಳನ್ನು ಹೈಟೆಕ್ ಆಗಿ ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗಿದ್ದು, ತುಮಕೂರಿಗೆ 100 ಕೋಟಿ ರೂ. ಹಾಗೂ ಶಿವಮೊಗ್ಗಕ್ಕೆ 50 ಕೋಟಿ ರೂ. ಅಂದಾಜು ವೆಚ್ಚ ನಿಗದಿಪಡಿಸಲಾಗಿದೆ. ಭದ್ರಾವತಿ ನಿಲ್ದಾಣವನ್ನೂ ಇದೇ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು. ಕಾಮಗಾರಿ ಮುಗಿದಿರುವ ಸಾಗರ ಮತ್ತು ತಾಳಗುಪ್ಪ ನಿಲ್ದಾಣಗಳು ಶೀಘ್ರದಲ್ಲೇ ಲೋಕಾರ್ಪಣೆಗೊಳ್ಳಲಿವೆ ಎಂದರು.

ಸುರಕ್ಷತೆ ಮತ್ತು ಮೂಲಸೌಕರ್ಯ:

ಶಿವಮೊಗ್ಗ ಟರ್ಮಿನಲ್ ನಿರ್ಮಾಣಕ್ಕೆ 97 ಕೋಟಿ ರೂ. ಬಿಡುಗಡೆಯಾಗಿದೆ. ಕೋಟೆಗಂಗೂರು ಕೋಚಿಂಗ್ ಡಿಪೋ ಮುಂದಿನ ವರ್ಷದ ಆರಂಭದಲ್ಲಿ ಉದ್ಘಾಟನೆಯಾಗಲಿದೆ. ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಅಗತ್ಯವಿದ್ದೆಡೆ ಸಾಕಷ್ಟು ಮೇಲ್ಸೇತುವೆ ಹಾಗೂ ಕೆಳಸೇತುವೆಗಳನ್ನು ನಿರ್ಮಿಸಲಾಗಿದೆ. ಇಲಾಖೆಯಲ್ಲಿ ತಂದಿರುವ ಕ್ರಾಂತಿಕಾರಿ ಬದಲಾವಣೆಗಳಿಂದಾಗಿ ರೈಲ್ವೆ ಅಪಘಾತಗಳ ಪ್ರಮಾಣ ಕೇವಲ ಶೇ. 0.01ಕ್ಕೆ ಇಳಿಕೆಯಾಗಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಆರಗ ಜ್ಞಾನೇಂದ್ರ, ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಉದಿತ್ ಮಿತ್ತಲ್, ಪ್ರಮುಖರಾದ ಎಸ್. ದತ್ತಾತ್ರಿ, ಎ.ಎಸ್. ನವೀನ್ ಮುಂತಾದವರು ಉಪಸ್ಥಿತರಿದ್ದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.

ಇ-ಮೇಲ್ : [email protected]

error: Content is protected !!