ಶಿವಮೊಗ್ಗ: ಶಿವಮೊಗ್ಗ–ಬೆಂಗಳೂರು ನಡುವೆ ರಾತ್ರಿ ರೈಲು ಸೇವೆಯನ್ನು ವಾರದ ಎಲ್ಲಾ ದಿನಗಳಲ್ಲೂ ಲಭ್ಯವಾಗುವಂತೆ ಮಾಡಬೇಕು, ಪ್ರಮುಖ ರೈಲುಗಳಲ್ಲಿ ಹೆಚ್ಚುವರಿ ಸಾಮಾನ್ಯ ಹಾಗೂ ಎಸಿ ಬೋಗಿಗಳನ್ನು ಅಳವಡಿಸಬೇಕು ಮತ್ತು ಹಬ್ಬದ ಅವಧಿಯಲ್ಲಿ ವಿಶೇಷ ರೈಲುಗಳನ್ನು ಓಡಿಸಬೇಕು ಎಂದು ಹೆಚ್.ಸಿ. ಯೋಗೇಶ್ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಶಿವಮೊಗ್ಗವು ಮಲೆನಾಡಿನ ಪ್ರಮುಖ ವಾಣಿಜ್ಯ, ಶೈಕ್ಷಣಿಕ, ವೈದ್ಯಕೀಯ ಹಾಗೂ ಆಡಳಿತಾತ್ಮಕ ಕೇಂದ್ರವಾಗಿದ್ದು, ಉದ್ಯೋಗ, ಶಿಕ್ಷಣ, ವ್ಯಾಪಾರ ಮತ್ತು ಚಿಕಿತ್ಸೆಯ ಅಗತ್ಯಕ್ಕಾಗಿ ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಜನರು ಶಿವಮೊಗ್ಗ–ಬೆಂಗಳೂರು ನಡುವೆ ಪ್ರಯಾಣಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರೈಲು ಸೇವೆಯನ್ನು ಮತ್ತಷ್ಟು ಬಲಪಡಿಸುವಂತೆ ಅವರು ಒತ್ತಾಯಿಸಿದ್ದಾರೆ.
16582 ರೈಲು ವಾರದ ಏಳು ದಿನವೂ ಸಂಚರಿಸಲಿ
ಪ್ರಸ್ತುತ ಸಂಚರಿಸುತ್ತಿರುವ 16582 ಶಿವಮೊಗ್ಗ ಟೌನ್–ಯಶವಂತಪುರ ಎಕ್ಸ್‌ಪ್ರೆಸ್ ರೈಲನ್ನು ವಾರದ ಎಲ್ಲಾ ಏಳು ದಿನಗಳಲ್ಲೂ ಓಡಿಸಬೇಕು ಎಂದು ಯೋಗೇಶ್ ಮನವಿ ಮಾಡಿದ್ದಾರೆ.
ರೈಲು ನಿರ್ದಿಷ್ಟ ದಿನಗಳಲ್ಲಿ ಮಾತ್ರ ಸಂಚರಿಸುವುದರಿಂದ ಉಳಿದ ದಿನಗಳಲ್ಲಿ ರಾತ್ರಿ ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿದೆ. ಇದೇ ವೇಳೆ 16228 ತಾಳಗುಪ್ಪ–ಮೈಸೂರು ಎಕ್ಸ್‌ಪ್ರೆಸ್ ಸೇರಿದಂತೆ ರಾತ್ರಿ ರೈಲುಗಳ ಸೇವೆಯನ್ನೂ ಪ್ರಯಾಣಿಕರ ಅಗತ್ಯಕ್ಕೆ ಅನುಗುಣವಾಗಿ ಬಲಪಡಿಸಬೇಕು ಎಂದು ತಿಳಿಸಿದ್ದಾರೆ.
ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹಿಂದಿರುಗುವ ಪ್ರಯಾಣಿಕರಿಗೂ ಅನುಕೂಲವಾಗುವಂತೆ ಎರಡೂ ದಿಕ್ಕುಗಳಲ್ಲಿ ಸೂಕ್ತ ಸಮಯಕ್ಕೆ ಪ್ರತಿದಿನ ರಾತ್ರಿ ರೈಲು ಸೌಲಭ್ಯ ಇರಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಜನಶತಾಬ್ದಿ, ಇಂಟರ್‌ಸಿಟಿಗೆ ಹೆಚ್ಚುವರಿ ಬೋಗಿ
12090 ಜನಶತಾಬ್ದಿ ಎಕ್ಸ್‌ಪ್ರೆಸ್ ಮತ್ತು 20690 ಯಶವಂತಪುರ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿರುವುದರಿಂದ ಹೆಚ್ಚುವರಿ ಸಾಮಾನ್ಯ ಹಾಗೂ ಎಸಿ ಬೋಗಿಗಳನ್ನು ಅಳವಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸಾಮಾನ್ಯ ಬೋಗಿಗಳಲ್ಲಿ ಪ್ರಯಾಣಿಸುವ ವಿದ್ಯಾರ್ಥಿಗಳು, ಉದ್ಯೋಗಿಗಳು, ಹಿರಿಯ ನಾಗರಿಕರು ಹಾಗೂ ಮಧ್ಯಮ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗದ ಪ್ರಯಾಣಿಕರಿಗೆ ಹೆಚ್ಚಿನ ಅವಕಾಶ ಕಲ್ಪಿಸಬೇಕು. ಕಾಯ್ದಿರಿಸುವಿಕೆಯ ಸ್ಥಿತಿ ಮತ್ತು ಪ್ರಯಾಣಿಕರ ಬೇಡಿಕೆಯನ್ನು ಪರಿಶೀಲಿಸಿ ಎಸಿ ಬೋಗಿಗಳ ಸಂಖ್ಯೆಯನ್ನೂ ಹೆಚ್ಚಿಸಬೇಕು ಎಂದು ತಿಳಿಸಿದ್ದಾರೆ.
ಹಬ್ಬದ ಅವಧಿಯಲ್ಲಿ ವಿಶೇಷ ರೈಲು
ದಸರಾ, ದೀಪಾವಳಿ, ಯುಗಾದಿ, ಸಂಕ್ರಾಂತಿ, ಕ್ರಿಸ್ಮಸ್, ಈದ್ ಸೇರಿದಂತೆ ಪ್ರಮುಖ ಹಬ್ಬಗಳು ಹಾಗೂ ಶಾಲಾ–ಕಾಲೇಜು ರಜೆಯ ಅವಧಿಯಲ್ಲಿ ಶಿವಮೊಗ್ಗ–ಬೆಂಗಳೂರು ನಡುವೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತದೆ.
ಇಂತಹ ಸಂದರ್ಭಗಳಲ್ಲಿ ವಿಶೇಷ ರೈಲುಗಳನ್ನು ಮುಂಚಿತವಾಗಿ ಘೋಷಿಸಿ ಓಡಿಸಬೇಕು. ಅಗತ್ಯವಿದ್ದರೆ ಹೆಚ್ಚುವರಿ ಸಾಮಾನ್ಯ ಮತ್ತು ಎಸಿ ಬೋಗಿಗಳನ್ನೂ ಜೋಡಿಸಬೇಕು ಎಂದು ಮನವಿ ಮಾಡಿದ್ದಾರೆ.
ಶಿವಮೊಗ್ಗ ರೈಲು ನಿಲ್ದಾಣಕ್ಕೆ ಎಸ್ಕಲೇಟರ್
ಶಿವಮೊಗ್ಗ ರೈಲು ನಿಲ್ದಾಣದಲ್ಲಿ ಹಿರಿಯ ನಾಗರಿಕರು, ದಿವ್ಯಾಂಗರು, ಗರ್ಭಿಣಿಯರು, ಮಕ್ಕಳು ಹಾಗೂ ಹೆಚ್ಚಿನ ಸಾಮಾನು ಹೊಂದಿರುವ ಪ್ರಯಾಣಿಕರಿಗೆ ಪ್ಲಾಟ್‌ಫಾರ್ಮ್‌ಗಳ ನಡುವೆ ಸಂಚರಿಸಲು ತೊಂದರೆಯಾಗುತ್ತಿರುವುದನ್ನು ಉಲ್ಲೇಖಿಸಿರುವ ಯೋಗೇಶ್, ಅಗತ್ಯವಿರುವ ಕಡೆಗಳಲ್ಲಿ ಎಸ್ಕಲೇಟರ್ ವ್ಯವಸ್ಥೆ ಕಲ್ಪಿಸಬೇಕು ಎಂದು ಕೋರಿದ್ದಾರೆ.
ಇದರ ಜೊತೆಗೆ ಲಿಫ್ಟ್ ಮತ್ತು ದಿವ್ಯಾಂಗ ಸ್ನೇಹಿ ಸೌಲಭ್ಯಗಳನ್ನು ಹೆಚ್ಚಿಸಿ ನಿಲ್ದಾಣವನ್ನು ಇನ್ನಷ್ಟು ಪ್ರಯಾಣಿಕ ಸ್ನೇಹಿಯಾಗಿ ಅಭಿವೃದ್ಧಿಪಡಿಸಬೇಕು ಎಂದು ಮನವಿ ಮಾಡಿದ್ದಾರೆ.
ಸಮಗ್ರ ರೈಲ್ವೆ ಅಭಿವೃದ್ಧಿಗೆ ಒತ್ತಾಯ
ಶಿವಮೊಗ್ಗ ರೈಲ್ವೆ ಸಂಪರ್ಕದ ಅಭಿವೃದ್ಧಿಯಿಂದ ಪ್ರವಾಸೋದ್ಯಮ, ವ್ಯಾಪಾರ, ಶಿಕ್ಷಣ, ಉದ್ಯೋಗ ಹಾಗೂ ಪ್ರಾದೇಶಿಕ ಆರ್ಥಿಕ ಬೆಳವಣಿಗೆಗೆ ಅನುಕೂಲವಾಗಲಿದೆ. ಹೀಗಾಗಿ ರೈಲುಗಳ ಆವೃತ್ತಿ, ಬೋಗಿಗಳ ಲಭ್ಯತೆ, ಪ್ರಯಾಣಿಕರ ಸುರಕ್ಷತೆ ಮತ್ತು ನಿಲ್ದಾಣದ ಮೂಲಸೌಕರ್ಯವನ್ನು ಸಮಗ್ರವಾಗಿ ಪರಿಶೀಲಿಸಿ ಅಭಿವೃದ್ಧಿಪಡಿಸಬೇಕು ಎಂದು ಹೆಚ್.ಸಿ. ಯೋಗೇಶ್ ಕೇಂದ್ರ ಸಚಿವರಿಗೆ ಮನವಿ ಮಾಡಿದ್ದಾರೆ.

