ಹುಂಚದಲ್ಲಿ ನವೋದಯ ಶಾಲೆ ಉಚಿತ ತರಬೇತಿ ಶಿಬಿರ ಉದ್ಘಾಟನೆ | ವಿದ್ಯಾರ್ಥಿಗಳ ಕಲಿಕೆಯಲ್ಲಿ ಏಕಾಗ್ರತೆ ಅಗತ್ಯ ; ಮಂಜಪ್ಪ ಗುಳುಕೊಪ್ಪ

Written by Mahesha Hindlemane

Published on:

ರಿಪ್ಪನ್‌ಪೇಟೆ ; ವಿದ್ಯಾರ್ಥಿಗಳ ಕಲಿಕೆಯಲ್ಲಿ ಏಕಾಗ್ರತೆ ಅಗತ್ಯವಾಗಿದೆ.ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಆಭ್ಯಾಸ ಮಾಡಿದಲ್ಲಿ ಮಾತ್ರ ಗುರಿ ತಲುಪಲು ಸಾದ್ಯ ಶಿಕ್ಷಣ ಶ್ರೇಷ್ಟ ನಾಗರೀಕರನ್ನಾಗಿ ಮಾಡುತ್ತದೆಂದು ನಿವೃತ್ತ  ಶಿಕ್ಷಕ ಮಂಜಪ್ಪ ಗುಳುಕೊಪ್ಪ ಹೇಳಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಹುಂಚ ಶ್ರೀಪದ್ಮಾಂಬ ಪ್ರೌಢಶಾಲೆಯ ಶ್ರೀರಂಗರಾವ್ ಸಭಾಭವನದಲ್ಲಿ ಭಾನುವಾರ ಮಿಲನ ಆಲೂಮ್ನಿ ಅಸೋಸಿಯೇಷನ್‌ ವತಿಯಿಂದ ಆಯೋಜಿಸಲಾದ 5ನೇ ವರ್ಷದ ನವೋದಯ ಮತ್ತು ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಪ್ರವೇಶ ಪರೀಕ್ಷೆಯ ಉಚಿತ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಪೋಷಕವರ್ಗ ಮತ್ತು ಶಿಕ್ಷಕವರ್ಗ ಸದಾ ಶ್ರಮಿಸುವಂತಾಗಬೇಕು. ಮಕ್ಕಳ ದೈನಂದಿನ ಬೆಳವಣಿಗೆ ಹಾಗೂ ಶಿಕ್ಷಣದ ಕಡೆ ಜಾಗೃತರಾಗಿದ್ದಾಗ ಮಾತ್ರ ವಿದ್ಯಾರ್ಥಿಗಳು ಪ್ರಗತಿ ಹೊಂದಲು ಸಾಧ್ಯವೆಂದ ಅವರು, ಪಟ್ಟಣದಲ್ಲಿನ ಮಕ್ಕಳಿಗೆ ಇಂತಹ ಸೌಲಭ್ಯಗಳು ದೊರಕುತ್ತಿದ್ದು ಗ್ರಾಮಾಂತರದಲ್ಲಿನ ಮಕ್ಕಳು ಈ ಸೌಲಭ್ಯದಿಂದ ವಂಚಿತರಾಗುವಂತಾಗಿತು. ಅದನ್ನು ಮನಗಂಡ ಇಲ್ಲಿನ ಪ್ರಕಾಶ್ ಜೋಯ್ಸ್ ತಮ್ಮ ಸ್ವಂತ ಖರ್ಚಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡುವ ಮೂಲಕ ಅವರನ್ನು ಮೊರಾರ್ಜಿ ನವೋದಯ ವಸತಿ ಶಾಲೆಯ ಪರಿಚಯ ಅಯ್ಕೆ ಪ್ರಕ್ರಿಯೆ ಮಾಹಿತಿ ಕೋಚಿಂಗ್ ಕೊಡುವ ಮೂಲಕ ಸ್ಪರ್ಧಾತ್ಮಕ ಪರಿಕ್ಷೆಯನ್ನು ಎದರಿಸುವ ಬಗ್ಗೆ ಮಕ್ಕಳಿಗೆ ಉಪಯುಕ್ತ ಮಾಹಿತಿಯನ್ನು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಉಚಿತವಾಗಿ ನೀಡುತ್ತಿರುವುದರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

ಸ್ಪರ್ಧಾತ್ಮಕ ಪರೀಕ್ಷೆಗಳು ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾಗಿದ್ದು, ಹಳೆ ನವೋದಯ ವಿದ್ಯಾರ್ಥಿ ಬಳಗ ಮತ್ತು ಹುಂಚ ಯುವ ತಂಡ, ಕಳೆದ 5 ವರ್ಷದಿಂದ ಗ್ರಾಮೀಣ ಭಾಗದ ಮಕ್ಕಳು ಮತ್ತು ಪೋಷಕರಲ್ಲಿ, ನವೋದಯ ಮತ್ತು ಮೊರಾರ್ಜಿ ಶಾಲೆಗಳ ಬಗ್ಗೆ ಅರಿವು ಮೂಡಿಸಿದ್ದು, ಈ ತಂಡದ ಕಾರ್ಯವನ್ನು ಅವರು ಈ ಸಂದರ್ಭದಲ್ಲಿ ಶ್ಲಾಘಿಸಿದರು.

ಶಿಬಿರದ ಕಾರ್ಯಕ್ರಮ ಉದ್ದೇಶಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ನವೋದಯ ಮತ್ತು ಮೊರಾರ್ಜಿ ಶಿಬಿರದ ಸಂಸ್ಥಾಪಕ ಪ್ರಕಾಶ್ ಜೋಯ್ಸ್ ಕಾಗ್ನಿಝoಟ್ ಬೆಂಗಳೂರು ಮಾತನಾಡಿ, ನವೋದಯ ಮತ್ತು ಮೊರಾರ್ಜಿ ವಸತಿ ಶಾಲೆಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅತ್ಯುತ್ತಮ ಶಿಕ್ಷಣ ಯೋಜನೆಗಳು. ನಮ್ಮ ಶಿಬಿರದ ಮೂಲ ಉದ್ದೇಶ, ಮಕ್ಕಳ ಕಲಿಕಾ ಜ್ಞಾನವನ್ನು ವೃದ್ಧಿಸುವುದು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗೆ ಬೇಕಾದ ಜ್ಞಾನ, ಸಲಹೆ, ಸೂಚನೆಗಳನ್ನು ಈ ಕಾರ್ಯಕ್ರಮದ ಮೂಲಕ ಮಕ್ಕಳಲ್ಲಿ ಮತ್ತು ಪೋಷಕರಲ್ಲಿ ಮನವರಿಕೆ ಮಾಡಿಕೊಡುವುದು ಎಂದರು.

ಹಾಗೆಯೇ 5 ವರ್ಷದ ಶಿಬಿರದ ಈ ಯಶಸ್ಸಿನಲ್ಲಿ ಭಾಗಿಯಾದ ಶ್ರೀ ಜೈನ ಮಠ ಹುಂಚ, ಪದ್ಮoಬಾ ಪ್ರೌಢ ಶಾಲೆ, ಗ್ರಾಮ ಪಂಚಾಯತ್, ಮಿಲನ ಆಲೂಮ್ನಿ ಅಸೋಸಿಯೇಷನ್ – ನವೋದಯ ಬಳಗ ಮತ್ತು ಸಹಕಾರ ನೀಡಿದ ಊರಿನ ಎಲ್ಲಾ ಗ್ರಾಮಸ್ಥರಿಗೆ ಕೃತಜ್ಞತೆ ಸಲ್ಲಿಸಿದರು.

ನವೋದಯ ಮತ್ತು ಮೊರಾರ್ಜಿ ಉಚಿತ ತರಬೇತಿ ಶಿಬಿರ 2021 ಸ್ಥಾಪಿತವಾಗಿದ್ದು, ಮಲೆನಾಡಿನ ಭಾಗದ (ಪರೀಕ್ಷೆಗೆ ದಾಖಲಿಸಿದ) ವಿದ್ಯಾರ್ಥಿಗಳಿಗೆ ಉಚಿತವಾಗಿ ನವೋದಯ ಮತ್ತು ಮೊರಾರ್ಜಿ ಶಾಲೆಯ ಪರಿಚಯ, ಆಯ್ಕೆ ಪ್ರಕ್ರಿಯೆ ಮಾಹಿತಿ, ಕೋಚಿಂಗ್, ಮಾದರಿ ಪರೀಕ್ಷೆ, ಕಲಿಕಾ ಸಾಮಗ್ರಿಗಳು, ಸಮಯ ನಿರ್ವಹಣೆ ಮತ್ತು ಇತರೆ ಉಪಯುಕ್ತ ಮಾಹಿತಿಗಳನ್ನು ಉಚಿತವಾಗಿ ಕೊಡಲಾಗುತ್ತಿದೆ.

ಕಳೆದ ನಾಲ್ಕು ವರ್ಷದ ಶಿಬಿರದಲ್ಲಿ ಹುಂಚ, ಕೋಣಂದೂರು ಮತ್ತು ನೆಲವಾಗಿಲು ಶಿಬಿರದಿಂದ 375 ಮಕ್ಕಳು ಭಾಗವಹಿಸಿದ್ದು, ನಮ್ಮ ಶಿಬಿರದಿಂದ ಒಟ್ಟು 81 ಮಕ್ಕಳು, 11 ನವೋದಯ, 2 ಏಕಲವ್ಯ ಶಾಲೆ ಮತ್ತು 81 ಮೊರಾರ್ಜಿ ಶಾಲೆಗೆ ತೇರ್ಗಡೆ ಆಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಒಟ್ಟು 2.84 ಕೋಟಿ  ರೂ. ಮೌಲ್ಯದ ಶೈಕ್ಷಣಿಕ ಉಪಯೋಗ ಪಡೆದುಕೊಂಡಿದ್ದಾರೆ ಎಂದರು.

ಶಿಕಾರಿಪುರ ಪಶು ಅಸ್ಪತ್ರೆಯ ವೈದ್ಯಾಧಿಕಾರಿ ಡಾ.ಆಶೋಕ್ ಮಾತನಾಡಿ, ಸಂಸ್ಥೆಯ ಸಂಸ್ಥಾಪಕ ಪ್ರಕಾಶ್ ಜೋಯ್ಸ್ ಅವರ ತಂಡದ ಐದು ವರ್ಷದ ಪ್ರಯತ್ನದಿಂದ ಗ್ರಾಮೀಣ ಭಾಗದ ಜನರಲ್ಲಿ ಸ್ಪರ್ಧಾತ್ಮಕ ಶಿಕ್ಷಣದ ಕಲ್ಪನೆ ಮೂಡುವಂತಾಗಿದೆ. ಐದು ವರ್ಷದಲ್ಲಿ 375 ಮಕ್ಕಳು ತರಬೇತಿಯಲ್ಲಿ ಹಾಜರಾಗಿ 81 ಮಕ್ಕಳು ತೇರ್ಗಡೆಯಾಗಿದ್ದು ಗುಣಮಟ್ಟದ ಶಿಕ್ಷಣ ಪಡೆಯುತ್ತಿದ್ದಾರೆ. ತಮ್ಮ ಮಕ್ಕಳು ಉನ್ನತ ಹುದ್ದೆ ಮತ್ತು ವ್ಯಾಸಂಗ ಮಾಡುವ ಸದ್ದುದೇಶದಿಂದಾಗಿ ಪೋಷಕರಿಗೆ ಉತ್ತಮ ಅವಕಾಶವಾಗಿದೆ ಎಂದು ಹೇಳಿದರು.

ಹುಂಚ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ನಿತೀಶ್ ಮಾತನಾಡಿ, ಮಕ್ಕಳನ್ನು ಶಾಲೆಗೆ ಸೇರಿದರೆ ಸಾಲದು  ಮಕ್ಕಳಲ್ಲಿನ ಆಸಕ್ತಿಯನ್ನು ಗುರುತಿಸಿ ಪ್ರೋತ್ಸಾಹಿಸುವ ಗುರುತರ ಜವಾಬ್ದಾರಿಯು ಶಿಕ್ಷಕರ ಮತ್ತು ಪೋಷಕವರ್ಗದವರಾಗಿದೆ ಎಂದು ಹೇಳಿ, ಸರ್ಕಾರ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಒತ್ತು ನೀಡಲಾಗಿದೆ. ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿ, ಗ್ರಾಮೀಣ ಪ್ರದೇಶದಲ್ಲಿ ಇಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಕ್ಕಳಿಗೆ ತರಬೇತಿ ನೀಡಿದರೆ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗುವುದೆಂದರು.

ಶಿಬಿರದ ಮೂಲಕ ಸಾಧನೆ ಮಾಡಿದ ಮಕ್ಕಳು ಮತ್ತು ಪೋಷಕರು ತಮ್ಮ ಸಂತೋಷ ಮತ್ತು ಅನಿಸಿಕೆಯನ್ನು ಈ ಸಂದರ್ಭದಲ್ಲಿ ಹಂಚಿಕೊಂಡರು.

ಪ್ರಸಕ್ತ ಸಾಲಿನ ಶಿಬಿರಕ್ಕೆ ಹುಂಚ ಸುತ್ತಮುತ್ತಲಿನ 22ಕ್ಕೂ ಹೆಚ್ಚು ಶಾಲೆಗಳಿಂದ ಒಟ್ಟು 60 ಮಕ್ಕಳು ಶಿಬಿರಕ್ಕೆ ಹೆಸರು ನೋಂದಾಯಿಸಿದ್ದು ಶಿಬಿರ ಆಗಸ್ಟ್ ತಿಂಗಳಿಂದ ಪ್ರಾರಂಭವಾಗಲಿದ್ದು, ಸತತ ನಾಲ್ಕು ತಿಂಗಳು, ಪ್ರತಿ ಭಾನುವಾರ ಮಕ್ಕಳಿಗೆ ಪ್ರವೇಶ ಪರೀಕ್ಷೆಗೆ ಉತ್ತಮ ತರಬೇತಿಯನ್ನು ಇಲ್ಲಿ ನೀಡಲಾಗುತ್ತದೆ.

ವಿಶೇಷವಾಗಿ ಈ ಕಾರ್ಯಕ್ರಮಕ್ಕೆ ವಿಜೇಂದ್ರ ಭಟ್, ವಸಿಷ್ಠ ಫಾರ್ಮ್ ಕಾಳಿಗುಂಡಿ ಅವರು ಎಲ್ಲಾ ಸನ್ಮಾನಿತರು ಮತ್ತು ಮಕ್ಕಳಿಗೆ ಸಸಿ ಕೊಟ್ಟು, ಮಕ್ಕಳಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸಿದರು.

ಈ ಸಮಾರಂಭದಲ್ಲಿ ಶಿಬಿರದ ಯಶಸ್ಸಿಗೆ ಕಾರಣರಾದ ಶಿಬಿರದ ಸಂಚಾಲಕರಾದ ಪ್ರಕಾಶ್ ಜೋಯ್ಸ್, ಅಭಿಷೇಕ್, ಸಂಜಯ್, ನಾಗೇಶ್ ನಾಯ್ಕ್, ವೃಷಭ, ಶ್ರೀಕಾಂತ್, ಪೂರ್ಣೇಶ್, ಶಿವರಾಜ್, ಶಿಕ್ಷಕರಾದ ಪ್ರಶಾಂತ್, ಇಂದಿರಾ, ಆಶಾ, ಮಧುಶ್ರೀ, ಪ್ರದೀಪ್, ಹಳೆ ನವೋದಯ ವಿದ್ಯಾರ್ಥಿಗಳಿಗಳಾದ ನವೀನ್ ಕುಮಾರ್ ಎಂ ಪಿ , ಕೆ ಎಂ ಸುನಿಲ್,  ಕೆ ಪಿ ಸುನಿಲ್ ಇವರೆಲ್ಲರ ಸಾಮಾಜಿಕ ಕಳಕಳಿ, ಕಾರ್ಯವನ್ನು ಶ್ಲಾಘಿಸಿ, ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಹುಂಚ ಜೈನ ಮಠದ ಕಾರ್ಯ ನಿರ್ವಾಹಕರಾದ ಅಶೋಕ್ ಕುಮಾರ್, ಡಾ. ನಿತೀಶ್ ಕುಮಾರ್, ಲಕ್ಷ್ಮಮ್ಮ, ಆಭೀಷೇಕ್, ಸಂಜಯ್, ನಾಗೇಶ್‌ನಾಯ್ಕ್, ಪೂರ್ಣೇಶ್, ಸುನೀಲ್, ಪ್ರಹ್ಲಾದ್ ಇನ್ನಿತರರು ಉಪಸ್ಥಿತರಿದ್ದರು. ಶಿಕ್ಷಕಿ ಆಶಾ ಸ್ವಾಗತಿಸಿದರು. ಪ್ರಶಾಂತ್, ಆಶಾ ಮತ್ತು ಮಧುಶ್ರೀ ಕಾರ್ಯಕ್ರಮ ನಿರೂಪಿಸಿದರು.

Leave a Comment