ಗೌರಿ-ಗಣೇಶ ಹಬ್ಬದ ಪ್ರಯುಕ್ತ ಹೊಸನಗರದಲ್ಲಿ ಜನಜಾಗೃತಿ ಸಭೆ | ಸಮಾಜಘಾತಕ ಶಕ್ತಿಗಳ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ; ಎಸ್ಪಿ ಜಿ.ಕೆ.ಮಿಥುನ್ ಕುಮಾರ್

Written by Mahesha Hindlemane

Published on:

ಹೊಸನಗರ ; ಗೌರಿ-ಗಣೇಶ ಹಬ್ಬವನ್ನು ಜನತೆ ಶಾಂತಿ- ಸೌಹಾರ್ದಯುತವಾಗಿ ಆಚರಿಸಲು ಪೊಲೀಸ್ ಇಲಾಖೆ ಅಗತ್ಯ ಕ್ರಮಕೈಗೊಂಡಿದ್ದು, ನಿಮ್ಮ ವ್ಯಾಪ್ತಿಯಲ್ಲಿ ಯಾರಾದರೂ ಅನುಮಾನಸ್ಪಾದ ವ್ಯಕ್ತಿಗಳು ಕಂಡು ಬಂದಲ್ಲಿ ಹತ್ತಿರ ಪೊಲೀಸ್ ಠಾಣೆ ಮಾಹಿತಿ ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಸಾರ್ವಜನಿಕರಲ್ಲಿ ಮನವಿ ಮಾಡಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಇಲ್ಲಿನ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಮುಂಬರುವ ಗೌರಿ-ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ‌ ಪ್ರಯುಕ್ತ ಸೋಮವಾರ  ತಾಲೂಕು ಆಡಳಿತ, ಪೊಲೀಸ್ ಇಲಾಖೆ ಹಮ್ಮಿಕೊಂಡಿದ್ದ ಜನಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.

ಸಮಾಜಘಾತಕ ಶಕ್ತಿಗಳ ವಿರುದ್ದ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳುವ ಎಚ್ಚರಿಕೆ ನೀಡಿದ ಅವರು ಜನತೆ ಶಾಂತಿ ಸೌರ್ಹಾದತೆಯಿಂದ ಹಬ್ಬ ಆಚರಿಸುವಂತೆ ಕರೆ ನೀಡಿದರು.

ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಕ್ಷೇತ್ರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಅಧಿಕಾರಿ ವರ್ಗ ಸತತ ಮುಂಜಾಗ್ರತೆ ವಹಿಸಬೇಕು. ಪ್ರತಿಷ್ಠಿತ ಗಣಪತಿ ಪ್ರತಿಷ್ಠಾಪನೆ‌ ಸ್ಥಳಗಳಲ್ಲಿ ಯಾವುದೇ ರೀತಿಯ ಬೆಂಕಿ ಹಾಗು ವಿದ್ಯುತ್ ಅವಘಡ ನಡೆಯದಂತೆ ಎಚ್ಚರಿಕೆ ವಹಿಸಬೇಕು.

ಆರೋಗ್ಯ ಇಲಾಖೆ‌ ಅಗತ್ಯ ಅಂಬುಲೆನ್ಸ್ ಸೇವೆ ಹಾಗೂ ಮೆಸ್ಕಾಂ ಇಲಾಖೆ ನಿರಂತರ ವಿದ್ಯುತ್ ಪೂರೈಕೆ ಜೊತೆಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಮೂರ್ತಿ ವಿಸರ್ಜನೆಗೆ ಅನುಕೂಲವಾಗುವಂತೆ ಮೆರವಣಿಗೆ ಸಾಗುವ ಎಲ್ಲಾ ರಸ್ತೆಗಳಲ್ಲಿನ ಗುಂಡಿ ಮುಚ್ಚಲು ಇಂದಿನಿಂದಲೇ ತಯಾರಿ ನಡೆಸಿ ಎಂದು ಲೋಕೋಪಯೋಗಿ ಇಲಾಖೆಗೆ ಸೂಚನೆ ನೀಡಿದರು.

ವಿಸರ್ಜನೆ ವೇಳೆ ಅವಘಡ ತಪ್ಪಿಸಲು ಸೂಕ್ತ ಬೆಳಕಿನ ವ್ಯವಸ್ಥೆ, ಮುಳುಗು ತಜ್ಞರನ್ನು ನಿಯೋಜಿಸಲು ಸಲಹೆ ನೀಡಿದರು.

ಸಿಪಿಐ ಗುರಣ್ಣ ಎಸ್ ಹೆಬ್ಬಾಳ್ ಮಾತನಾಡಿ, ಈಗಾಗಲೇ ತಾಲೂಕಿನ ಸೂಕ್ಷ್ಮ ಹಾಗು ಅತಿಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿ ಅಳವಡಿಕೆಗೆ ಸೂಚನೆ ನೀಡಲಾಗಿದೆ. ತಾಲೂಕಿನ ರಿಪ್ಪನ್‌ಪೇಟೆ, ಕೆಂಚನಾಲ, ಗರ್ತಿಕೆರೆ, ಜಯನಗರದಂತಹ ಪ್ರದೇಶಗಳಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ನಿಯೋಜನೆಗೆ ಇಲಾಖೆ ಮುಂದಾಗಿದೆ ಎಂದು ಸಭೆಗೆ ತಿಳಿಸಿದರು. 

ಸಾಗರ ಉಪ ವಿಭಾಗಧಿಕಾರಿ ವೀರೇಶ್ ಕುಮಾರ್ ಮಾತನಾಡಿ, ನಗರ ಹಾಗು ಗ್ರಾಮೀಣ ಭಾಗದ ಜನತೆ ಶಾಂತಿಯುತವಾಗಿ ಹಬ್ಬ ಆಚರಿಸಲಿ. ಪಿಒಪಿ ಗಣಪತಿ ಮೂರ್ತಿಯ ಪ್ರತಿಷ್ಟಾಪನೆಯನ್ನು ನಿಷೇಧಿಸಲಾಗಿದೆ. ಗಣೇಶನ ಪ್ರತಿಷ್ಠಾಪನೆಗೆ ಅನುಮತಿ ಪಡೆಯುವುದು ಕಡ್ಡಾಯವಾಗಿದ್ದು ಇದಕ್ಕಾಗಿ ತಹಸೀಲ್ದಾರ್ ಕಚೇರಿಯಲ್ಲಿ ಏಕಗವಾಕ್ಷಿ ಸೇವೆ ಆರಂಭಗೊಂಡಿದೆ ಎಂದರು.

ಸಭೆಯಲ್ಲಿ ಸಾಗರ ಪೊಲೀಸ್ ಉಪವಿಭಾಗದ ಸಹಾಯಕ ಆಯುಕ್ತ ಡಾ.ಬೆನಕ ಪ್ರಸಾದ್, ತೀರ್ಥಹಳ್ಳಿ ಉಪ ವಿಭಾಗದ ಡಿವೈಎಸ್ಪಿ ಅರವಿಂದ ಎಸ್ ಕಲಗುಜ್ಜಿ, ರಿಪ್ಪನ್‌ಪೇಟೆ ಠಾಣೆಯ ಪಿಎಸ್ಐ ರಾಜುರೆಡ್ಡಿ, ನಗರ ಠಾಣೆಯ ಪಿಎಸ್ಐ ಶಿವಾನಂದ ಕೋಳಿ, ಅಗ್ನಿಶಾಮಕ ದಳದ ಸಹಾಯಕ ಠಾಣಾಧಿಕಾರಿ ಆನಂದಪ್ಪ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸುನೀಲ್, ತಾಲೂಕು ಆರೋಗ್ಯಾಧಿಕಾರಿ ಸುರೇಶ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್.ಬಿ.ಚಿದಂಬರ, ಮೆಸ್ಕಾಂ ಇಲಾಖೆಯ ಎಇಇ ಚಂದ್ರಶೇಖರ ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Comment