ಹೊಸನಗರ ; ಸಹಕಾರಿ ಕ್ಷೇತ್ರದಲ್ಲಿ ಮುಲಾಜು ಇರಬಾರದು. ಪ್ರಾಮಾಣಿಕತೆ, ನಿಷ್ಠುರತೆ ಹೊಂದಿದಲ್ಲಿ ಮಾತ್ರವೇ ಸಂಘ ಲಾಭ ಗಳಿಸಲು ಸಾಧ್ಯವೆಂದು ಜಿಲ್ಲಾ ಶಿಕ್ಷಣ ಡಯಟ್ ಪ್ರಾಚಾರ್ಯ, ನಿಕಟಪೂರ್ವ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಆರ್. ಕೃಷ್ಣಮೂರ್ತಿ ತಿಳಿಸಿದರು.
ಪಟ್ಟಣದ ಗಾಯತ್ರಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ 2024-25ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಮುಖಂಡರು ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಶಿಕ್ಷಕರ ಸಂಘವೊಂದಕ್ಕೆ ಬಿಇಒ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವುದು ಇಲ್ಲಿ ಮಾತ್ರವೇ. ಇದು ಮುಂಬರುವ ದಿನಗಳಲ್ಲಿ ಬದಲಾಗಬೇಕು. ಸಂಘದ ಸದಸ್ಯರಲ್ಲಿ ಒಬ್ಬರನ್ನು ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುವಂತೆ ಅವರು ಸಲಹೆ ನೀಡಿದರು.
ಸಂಘ ತನ್ನ ಠೇವಣಿದಾರರಿಗೆ ಶೇ. 9.2 ಹೆಚ್ಚಿನ ಬಡ್ಡಿ ನೀಡುತ್ತಿದೆ. ಪ್ರಸಕ್ತ ಸಾಲಿನಿಂದ ಮರುಕಳಿಸುವ ಠೇವಣಿ ಸಂಗ್ರಹಕ್ಕೆ ಮುಂದಾಗಿದೆ. ಇದು ಮುಂಬರುವ ದಿನಗಳಲ್ಲಿ ಸಂಘದ ಆರ್ಥಿಕ ಸದೃಢತೆಗೆ ಸಹಕಾರಿ ಆಗಲಿದೆ ಎಂದರು.
ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಆರ್.ಸುರೇಶ್ ಮಾತನಾಡಿ, ಅಗತ್ಯ ಸಮಯದಲ್ಲಿ ಶಿಕ್ಷಕರಿಗೆ ಸಂಘವು ಸಾಲ ನೀಡುವ ಮೂಲಕ ಆರ್ಥಿಕ ಬೆಂಬಲ ನೀಡುತ್ತಿದೆ. ಕಳೆದ ನಾಲ್ಕು ದಶಕಗಳ ಹಿಂದೆ ಸ್ಥಾಪನೆಗೊಂಡ ಸಹಕಾರಿ ಸಂಘವಿಂದು ರೂ 6.71 ಲಕ್ಷ ರೂ. ನಿವ್ವಳ ಲಾಭ ಗಳಿಸಿರುವುದು ಆಶಾದಾಯಕ ಬೆಳವಣಿಗೆ ಎಂದರು.
ಇದೇ ವೇಳೆ ಕಳೆದ ಶೈಕ್ಷಣಿಕ ಸಾಲಿನಲ್ಲಿ ಎಸ್ ಎಸ್ ಎಲ್ ಸಿ, ಪದವಿ ಶಿಕ್ಷಣದಲ್ಲಿ ಹೆಚ್ಚು ಅಂಕಗಳಿಸಿದ್ದ ಷೇರುದಾರರ ಮಕ್ಕಳಿಗೆ ಹಾಗು ಸಂಘಕ್ಕೆ ಹೆಚ್ಚು ಠೇವಣಿ ನೀಡಿದ ಷೇರುದಾರರನ್ನು ಸಂಘ ಆತ್ಮೀಯವಾಗಿ ಸನ್ಮಾನಿಸಿತು ಹಾಗು ಅನಾರೋಗ್ಯ ಪೀಡಿತ ಸದಸ್ಯರಿಗೆ ಆರ್ಥಿಕ ಸಹಾಯದ ಚೆಕ್ ವಿತರಿಸಿತು.
ಪ್ರಭಾರಿ ಬಿಇಒ ಆರ್.ಪಿ. ಚೇತನಾ ಕಾರ್ಯಕ್ರಮ ಉದ್ಘಾಟಿಸಿದರು. ಸಂಘದ ಉಪಾಧ್ಯಕ್ಷ ಡಿ.ಧರ್ಮಪ್ಪ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಸಹಕಾರ ಅಭಿವೃದ್ಧಿ ಅಧಿಕಾರಿ ಜೆ.ಸಿ. ವೆಂಕಟಾಚಲಪತಿ, ಕ್ಷೇತ್ರ ಸಂಪನ್ಮೂಲ ಅಧಿಕಾರಿ ಎಂ.ರಂಗನಾಥ, ಪಿ.ಎಂ.ಪೋಷಣ್ ಶಕ್ತಿ ನಿರ್ಮಾಣ್ ಯೋಜನೆಯ ತಾಲೂಕು ಪಂಚಾಯತಿ ಸಹಾಯಕ ನಿರ್ದೇಶಕ ಶೇಷಾಚಲ ಜಿ.ನಾಯ್ಕ, ಪ್ರಭಾರ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ವಿನಯ್ ಹೆಗ್ಡೆ ಕರ್ಕಿ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಂಡಿ ಸೋಮಶೇಖರ್, ಗೌರವಾಧ್ಯಕ್ಷ ಜಗದೀಶ್ ಕಾಗಿನಲ್ಲಿ, ವಿವಿಧ ಸಂಘಗಳ ಪ್ರಮುಖರಾದ ಗಂಗನಾಯ್ಕ್, ಶಿವಪ್ಪ, ಪೃಥ್ವಿರಾಜ್, ಬಸವಣ್ಯಪ್ಪ, ಪುಟ್ಟಸ್ವಾಮಿ ಕತ್ರಿಕೊಪ್ಪ, ಲಿಲ್ಲಿ ಡಿಸೋಜಾ, ರವಿ, ಧನಂಜಯ, ರಾಜುಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ನಿರ್ದೇಶಕರಾದ ಮಾವಿನಸರ ರವಿ, ಟಿ.ಎಸ್. ಮಹಾಂತೇಶ್, ಜಯಪ್ಪ, ಫಕೀರಪ್ಪ, ಕೃಷ್ಣಪ್ಪ ಅರ್ಕಾಚಾರಿ, ಮೇಘರಾಜ್, ಕೆ.ರವಿ, ಸುಜಾತ, ಉಮೇಶ್ ಚೊಟ್ಟಣ್ಣರ, ಪ್ರವೀಶ್, ಸುರೇಶ್, ಗಣೇಶ್, ಮಂಜುನಾಥ, ಅಶ್ವಥ್, ಆದಿತ್ಯ, ಲತಾ ನಾಗಭೂಷಣ ಇದ್ದರು.
ನಿರ್ದೇಶಕ ದೇವೇಂದ್ರಪ್ಪ ಸ್ವಾಗತಿಸಿ, ಶಿಕ್ಷಕಿ ಬಿ.ತಾಜುನ್ ನಿರೂಪಿಸಿದರು. ಸಂಘದ ಕಾರ್ಯದರ್ಶಿ ಹೆಚ್. ವೆಂಕಟೇಶ್ ವರದಿ ವಾಚಿಸಿದರು. ಅಕ್ಬರ್ ಭಾಷಾ ವಂದಿಸಿದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.