ರಿಪ್ಪನ್‌ಪೇಟೆ ; ನವೋದಯ ಉಚಿತ ಶಿಬಿರ ಪ್ರೇರಣಾದಾಯಕ ತರಗತಿ ಎಂದು ಹಿರಿಯೂರಿನ ಯಾಜ್ಞವಲ್ಕ್ಯ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಎಂ.ಪಿ ನವೀನ್ ಕುಮಾರ್ ಹೇಳಿದರು.
ಹುಂಚದಲ್ಲಿ ನಡೆಯುತ್ತಿರುವ ನವೋದಯ ಉಚಿತ ಶಿಬಿರದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಉತ್ಸಾಹದಾಯಕ ಹಾಗೂ ಮಾರ್ಗದರ್ಶಕ ತರಗತಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಅವರು, ನವೋದಯ ಪ್ರವೇಶ ಪರೀಕ್ಷೆ (JNVST)ಗೆ ವಿದ್ಯಾರ್ಥಿಗಳು ಹೇಗೆ ತಯಾರಿ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಸವಿವರವಾಗಿ ತಿಳಿಸಿ, ಪರೀಕ್ಷೆಯ ವಿನ್ಯಾಸ, ಸಮಯ ನಿರ್ವಹಣೆ, ಮತ್ತು 69 ದಿನಗಳ ಉಳಿದ ಅವಧಿಯಲ್ಲಿ ಪರಿಣಾಮಕಾರಿ ಅಧ್ಯಯನ ವಿಧಾನಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ತರಗತಿಯಲ್ಲಿ ಅವರು ಮೂರು ಪ್ರಮುಖ ಕೌಶಲ್ಯಗಳಾದ Alert Skill (ಎಚ್ಚರ ಕೌಶಲ್ಯ) – ಕಲಿಕೆಯ ಸಮಯದಲ್ಲಿ ಪೂರ್ಣ ಗಮನ.
Revision Skill (ಪುನರಾವರ್ತನೆ ಕೌಶಲ್ಯ) – ಕಲಿತ ವಿಷಯ ಪುನಃ ಓದು. Doubt Clear Skill (ಸಂದೇಹ ನಿವಾರಣಾ ಕೌಶಲ್ಯ) – ಸಂದೇಹಗಳನ್ನು ತಕ್ಷಣ ನಿವಾರಣೆ ಇವುಗಳ ಕುರಿತು ವಿವರಿಸಿದ ಅವರು, ನಿರಂತರ ಅಭ್ಯಾಸವೇ ಯಶಸ್ಸಿನ ಬೀಗ ಎಂಬ ಸಂದೇಶವನ್ನು ವಿದ್ಯಾರ್ಥಿಗಳಿಗೆ ನೀಡಿದರು.
ಅಲ್ಲದೆ ಅವರು Sustainable Development of a Student ಕುರಿತು ಮಾತನಾಡಿ, Reading Skill (ಓದುವ ಕೌಶಲ್ಯ), Writing Skill (ಬರೆಯುವ ಕೌಶಲ್ಯ), Speaking Skill (ಮಾತನಾಡುವ ಕೌಶಲ್ಯ), Competition Skill (ಸ್ಪರ್ಧಾತ್ಮಕ ಕೌಶಲ್ಯ) ಈ ನಾಲ್ಕು ಕೌಶಲ್ಯಗಳ ಸಮತೋಲನವೇ ವಿದ್ಯಾರ್ಥಿಯ ಸಂಪೂರ್ಣ ಅಭಿವೃದ್ಧಿಗೆ ಅವಶ್ಯಕ ಎಂದು ಹೇಳಿದರು.

ನವೀನ್ ಕುಮಾರ್ ಎಂ.ಪಿ. ಅವರು ಬಿಇ, ಎಂಬಿಎ, ಬಿ.ಇಡಿ ಪದವೀಧರರಾಗಿದ್ದು, ಕಳೆದ ಹಲವು ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಬೋಧನಾ ಕಾರ್ಯದ ಮೂಲಕ ವಿದ್ಯಾರ್ಥಿಗಳಲ್ಲಿ ಸ್ಪೂರ್ತಿ ಮೂಡಿಸುವ ಕೆಲಸವನ್ನು ನಿಭಾಯಿಸುತ್ತಿದ್ದಾರೆ. ಈ ತರಗತಿಯಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ತಮ್ಮ ಗುರಿ ಸಾಧನೆಗೆ ಬದ್ಧತೆಯನ್ನು ತೋರಿದರು.
ನವೋದಯ ಶಿಬಿರ ಸಂಸ್ಥಾಪಕ ಪ್ರಕಾಶ್ ಜೋಯ್ಸ್ ಮಾತನಾಡಿ, ನವೋದಯ ಮತ್ತು ಮೊರಾರ್ಜಿ ವಸತಿ ಶಾಲೆಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅತ್ಯುತ್ತಮ ಶಿಕ್ಷಣ ಯೋಜನೆಗಳು. ನಮ್ಮ ಶಿಬಿರದ ಮೂಲ ಉದ್ದೇಶ, ಮಕ್ಕಳ ಕಲಿಕಾ ಜ್ಞಾನವನ್ನು ವೃದ್ಧಿಸುವುದು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗೆ ಬೇಕಾದ ಜ್ಞಾನ, ಸಲಹೆ, ಸೂಚನೆಗಳನ್ನು ಈ ಕಾರ್ಯಕ್ರಮದ ಮೂಲಕ ಮಕ್ಕಳಲ್ಲಿ ಮತ್ತು ಪೋಷಕರಲ್ಲಿ ಮನವರಿಕೆ ಮಾಡಿಕೊಡುವುದು. ದೂರದ ಚಿತ್ರದುರ್ಗದಿಂದ ಬಂದು, ಶಿಬಿರದ ಮಕ್ಕಳನ್ನು ಪ್ರೇರಣೆ ಮಾಡಿದ ನವೀನ್ ಕುಮಾರ್ ಎಂ.ಪಿ ಅವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದರು.

ನವೋದಯ ಮತ್ತು ಮೊರಾರ್ಜಿ ಉಚಿತ ತರಬೇತಿ ಶಿಬಿರ 2021 ಸ್ಥಾಪಿತವಾಗಿದ್ದು, ಮಲೆನಾಡಿನ ಭಾಗದ (ಪರೀಕ್ಷೆಗೆ ದಾಖಲಿಸಿದ) ವಿದ್ಯಾರ್ಥಿಗಳಿಗೆ ಉಚಿತವಾಗಿ ನವೋದಯ ಮತ್ತು ಮೊರಾರ್ಜಿ ಶಾಲೆಯ ಪರಿಚಯ, ಆಯ್ಕೆ ಪ್ರಕ್ರಿಯೆ ಮಾಹಿತಿ, ಕೋಚಿಂಗ್, ಮಾದರಿ ಪರೀಕ್ಷೆ, ಕಲಿಕಾ ಸಾಮಗ್ರಿಗಳು, ಸಮಯ ನಿರ್ವಹಣೆ ಮತ್ತು ಇತರೆ ಉಪಯುಕ್ತ ಮಾಹಿತಿಗಳನ್ನು ಉಚಿತವಾಗಿ ಕೊಡಲಾಗುತ್ತಿದೆ.
ಕಳೆದ ನಾಲ್ಕು ವರ್ಷದ ಶಿಬಿರದಲ್ಲಿ ಹುಂಚ, ಕೋಣಂದೂರು ಮತ್ತು ನೆಲವಾಗಿಲು ಶಿಬಿರದಿಂದ 375 ಮಕ್ಕಳು ಭಾಗವಹಿಸಿದ್ದು, ನಮ್ಮ ಶಿಬಿರದಿಂದ ಒಟ್ಟು 81 ಮಕ್ಕಳು – 11 ನವೋದಯ, 2 ಏಕಲವ್ಯ ಶಾಲೆ ಮತ್ತು 81 ಮೊರಾರ್ಜಿ ಶಾಲೆಗೆ ತೇರ್ಗಡೆಯಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಒಟ್ಟು 2.84 ಕೋಟಿ ರೂ. ಮೌಲ್ಯದ ಶೈಕ್ಷಣಿಕ ಉಪಯೋಗ ಪಡೆದುಕೊಂಡಿದ್ದಾರೆ.
ಪ್ರಸಕ್ತ ವರ್ಷದಲ್ಲಿ ಈ ಸಂಸ್ಥೆ ಹುಂಚ, ಕೋಣಂದೂರು, ಶಿಕಾರಿಪುರದ ನೆಲವಾಗಿಲು ಮತ್ತು ಸಾಗರ ತಾಲ್ಲೂಕಿನ ತ್ಯಾಗರ್ತಿ ಗ್ರಾಮಗಳಲ್ಲೂ ಕಾರ್ಯ ನಡೆಸುತ್ತಿದೆ. ಈ ವರ್ಷದ ಶಿಬಿರದಲ್ಲಿ ಒಟ್ಟು 180 ಹೆಚ್ಚು ಮಕ್ಕಳು ಭಾಗವಹಿಸಿದ್ದು, ಸ್ಪರ್ಧಾತ್ಮಕ ಪರೀಕ್ಷೆಗೆ ಉತ್ತಮ ತಯಾರಿ ನಡೆಸುತ್ತಿದ್ದಾರೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.