ಹೊಸನಗರ ; ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ದಶಕಗಳ ಹಿಂದೆ ಕಂಡಿದ್ದ ಕನಸು ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘದ ಮೂಲಕ ಇಂದು ಸಾಕಾರಗೊಳ್ಳುತ್ತಿದೆ ಎಂದು ಪೊಲೀಸ್ ವೃತ್ತ ನಿರೀಕ್ಷಕ ಗುರಣ್ಣ ಎಸ್ ಹೆಬ್ಬಾಳ್ ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್(ರಿ), ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ತಾಲೂಕು ನವಜೀವನ ವೇದಿಕೆ ಇವರ ಸಹಯೋಗದಲ್ಲಿ ಪಟ್ಟಣದ ಗಾಯತ್ರಿ ಮಂದಿರದಲ್ಲಿ ನಡೆದ ಗಾಂಧಿ ಸ್ಮರಣೆ ಹಾಗು ದುಶ್ಚಟಗಳ ವಿರುದ್ದ ಜಾಗೃತಿ ಹಾಗು ವಿವಿಧ ಮಂಜೂರಾತಿ ವಿತರಣಾ ಪತ್ರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಾನವನ ಹುಟ್ಟಿನಿಂದ ಅಂತ್ಯದವರೆಗೂ ಸಂಘ ಹಲವು ವಿನೂತನ ಜನಪರ ಕಾರ್ಯಕ್ರಮ ಹಮ್ಮಿಕೊಳ್ಳುವ ನೂತನ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕೈಗೊಡಿಸಿದೆ. ದುಶ್ಚಟ ಕುರಿತು ಜನಜಾಗೃತಿ ಮೂಡಿಸುವುದು, ಅಶಕ್ತರಿಗೆ ಹಲವು ಯೋಜನೆಗಳ ಮೂಲಕ ಆರ್ಥಿಕ ಸ್ವಾವಲಂಬಿಯಾಗಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಣೆ ನೀಡುವ ಯೋಜನೆಯ ಕಾರ್ಯವೈಖರಿ ನಿಜಕ್ಕೂ ಶ್ಲಾಘನೀಯ ಎಂದರು.
ನಿವೃತ್ತ ಪ್ರಾಂಶುಪಾಲ ಡಾ. ಮಾರ್ಷಲ್ ಶರಾಂ ಗಾಂಧಿ ಅವರು ಬದುಕು ಹಾಗು ಹೋರಾಟ ಕುರಿತು ವಿಶೇಷ ಉಪನ್ಯಾಸ ನೀಡಿ, ಗಾಂಧಿಜಿ ಅವರ ಸಾಮಾಜಿಕ ಚಿಂತನೆ ಹಾಗು ಸರಳ ಜೀವನ ಶೈಲಿ ವಿಶ್ವ ನಾಗರೀಕ ಸಮಾಜಕ್ಕೆ ಮಾದರಿಯಾಗಿದೆ. ಆ ಕಾರಣಕ್ಕೆ ಜಗತ್ತಿನಲ್ಲಿ ಗಾಂಧಿಜಿ ಕುರಿತಂತೆ ಸುಮಾರು ಇಪ್ಪತೈದು ಸಾವಿರ ಹೆಚ್ಚು ಪುಸ್ತಕಗಳು ಮುದ್ರಣಗೊಂಡಿವೆ. ಹಲವು ವಿಶ್ವವಿದ್ಯಾಲಯಗಳು ಅವರ ಬದುಕು, ಬರಹಗಳಿಗೆ ವಿಶ್ವದರ್ಜೆಯ ಮಾನ್ಯತೆ ನೀಡಿವೆ. ಅವರ ಬದುಕು ಅನುಕರಣೀಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್‌ನ ಜಿಲ್ಲಾಧ್ಯಕ್ಷ, ವಕೀಲ ಮೋಹನ್ ಜಿ ಶೆಟ್ಟಿ, ಸಮಾಜಮುಖಿ ಸೇವೆಗೆ ಧರ್ಮಸ್ಥಳ ಸಂಘಗಳ ಯೋಜನೆಯು ದಾರಿದೀಪವಾಗಿದೆ. ಸಮಾಜ ಕಟ್ಟುವ ಕೆಲಸ ನಮ್ಮಿಂದಲೇ ಆರಂಭವಾಗಬೇಕು. ಗಾಂಧೀಜಿ ಕಂಡ ರಾಮರಾಜ್ಯ ಹಾಗು ಗ್ರಾಮರಾಜ್ಯದ ಕನಸನ್ನು ಪರಮಪೂಜ್ಯ ಡಾ.ವೀರೇಂದ್ರ ಹೆಗ್ಡೆ ಅವರು ನನಸಾಗಿಸಿದ್ದಾರೆ. ಶಿಕ್ಷಣವೇ ಶಕ್ತಿ ಹಾಗು ಶಿಕ್ಷಣ ಕ್ರಾಂತಿಯಿಂದಲೇ ಆರ್ಥಿಕ ಸ್ವಾವಲಂಬಿ ಬದುಕು ಎಂದು ಮನಗಂಡ ಶ್ರೀಗಳು ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿರುವುದು ದೇಶಾದ್ಯಂತ ಯೋಜನೆಯ ಉದ್ದೇಶ ಪ್ರಸರಣಕ್ಕೆ ಸಾಕ್ಷಿಯಾಗಿದೆ. ಇತ್ತೀಚಿಗೆ ಕೆಲ ಗೋಡ್ಸೆ ಮನಸ್ಸಿನ ಚಿಂತಕರು ವಿನಃಕಾರಣ ಶ್ರೀ ಕ್ಷೇತ್ರ ಹಾಗೂ ಅದರ ಯೋಜನೆ ಕುರಿತಾಗಿ ಪುಂಕಾನೂಪುಂಕವಾಗಿ ಆಧಾರ ರಹಿತ ಆರೋಪಗಳನ್ನು ಮಾಡಿದ್ದು, ಈಗ ಈ ಎಲ್ಲಾ ಆರೋಪಗಳಿಗೆ ತಕ್ಕೆ ಉತ್ತರ ಸಿಗುವ ಕಾಲ ಸನ್ನಿಹಿತವಾಗುತ್ತಿದೆ ಎಂದರು.
ಯೋಜನಾಧಿಕಾರಿ ಆರ್. ಪ್ರದೀಪ್ ಪ್ರಾಸ್ತಾವಿಕ ಮಾತನಾಡಿ, ತಾಲೂಕಿನಲ್ಲಿ ಪ್ರಸ್ತುತ 89. ಅಶಕ್ತ ಮಂದಿಗೆ ಒಂದು ಸಾವಿರ ರೂ. ಮಾಶಾಸನ ನೀಡಿದ್ದು, ಈವರೆಗೆ ಒಟ್ಟು 196 ಮಂದಿಗೆ ರೂ 53 ಲಕ್ಷ ಹಣ ವಿತರಿಸಲಾಗಿದೆ. ಒಟ್ಟು 6 ಕೆರೆ ಅಭಿವೃದ್ಧಿ ಕಾರ್ಯಕ್ಕೆ 43.64 ಲಕ್ಷ ರೂ. ಹಣ ವಿನಿಯೋಗಿಸಲಾಗಿದ್ದು, ಪ್ರಸಕ್ತ ಸಾಲಿನಲ್ಲಿ ಐದು ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ 5.50 ಲಕ್ಷ ರೂ. ಹಾಗು ಒಟ್ಟಾರೆ ಈವರೆಗೆ 127 ದೇವಸ್ಥಾನ ಜೀರ್ಣೋದ್ಧಾರಕ್ಕೆ ₹ 1.14.70,000 ಹಣ ವಿವರಿಸಲಾಗಿದೆ ಎಂದರು. ಅಲ್ಲದೆ, ಐದು ಹಿಂದೂ ರುದ್ರಭೂಮಿಗಳ ಅಭಿವೃದ್ಧಿಗೆ ₹ 7.78,260 ಹಾಗು ಒಂದು ಗೋಶಾಲೆ ಅಭಿವೃದ್ಧಿಗೆ ₹ ಐವತ್ತು ಸಾವಿರ ನೀಡಲಾಗಿದೆ. ತಾಂತ್ರಿಕ ಶಿಕ್ಷಣ ಕಲಿಕ ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ಯೋಜನೆ ಅಡಿಯಲ್ಲಿ ಪ್ರಸ್ತುತ 101 ವಿದ್ಯಾರ್ಥಿಗಳಿಗೆ ₹ 6.26,000 ಹಾಗು ಈವರೆಗೆ ಒಟ್ಟಾರೆ 506 ವಿದ್ಯಾರ್ಥಿಗಳಿಗೆ ₹ 62,74,000 ಹಣ ವಿತರಿಸಲಾಗಿದೆ. 16 ಶಾಲೆಗಳಿಗೆ 100 ಜೊತೆ ಬೆಂಚ್ ಡೆಸ್ಕ್ ಗಾಗಿ ₹ 7.12,000 ಹಾಗು ಜ್ಞಾನದೀಪ ಯೋಜನೆ ಅಡಿಯಲ್ಲಿ ಸರ್ಕಾರಿ ಕನ್ನಡ ಭಾಷಾ ಏಕೋಪಾಧ್ಯಯ ಈ ಬಾರಿ ತಲಾ ₹ ಒಂಬತ್ತು ಸಾವಿರದಂತೆ ಒಟ್ಟು ವಾರ್ಷಿಕ ₹ 72 ಸಾವಿರ, ಒಟ್ಟಾರೆ ₹ 7,20,000 ವಿತರಿಸಲಾಗಿದೆ ಎಂದರು.

ವೇದಿಕೆಯಲ್ಲಿ ಪ್ರಮುಖರಾದ ನಾಗರತ್ನ, ದೇವೇಂದ್ರ, ದೇವಾನಂದ್, ಬಿಇಒ ಚೇತನಾ, ನಾರಾಯಣ ಕಾಮತ್, ಮುರಳಿಧರ ಶೆಟ್ಟಿ, ವಸಂತ ರಾಮಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.