ಹೊಸನಗರ ; ಕಳೆದ ಎರಡ್ಮೂರು ವರ್ಷಗಳಿಂದ ನಿರಂತರವಾಗಿ ಕೆಲವು ವ್ಯಕ್ತಿಗಳು ತಾಲೂಕಿನ ಕಸಬಾ ಹೋಬಳಿ ಮುತ್ತೂರು ಗ್ರಾಮದ ಸರ್ವೆ ನಂಬರ್ 33ರ ಸುಮಾರು 15 ಎಕರೆಗೂ ಹೆಚ್ಚು ಮೀಸಲು ಅರಣ್ಯ ಪ್ರದೇಶವನ್ನು ಅಕ್ರಮವಾಗಿ ಒತ್ತುವರಿ ಮಾಡಿ ಕೃಷಿ ಚಟುವಟಿಕೆಗಳಿಗೆ ಮುಂದಾಗಿದ್ದಾರೆ. ಈ ಕುರಿತು ಅರಣ್ಯ ಇಲಾಖೆಗೆ ಒತ್ತುವರಿ ತೆರವಿಗೆ ಮನವಿ ಸಲ್ಲಿಸಿದ್ದರೂ ಅಧಿಕಾರಿ ವರ್ಗ ಸೂಕ್ತ ಕ್ರಮಕ್ಕೆ ಮುಂದಾಗದೇ ಮೀನಾ-ಮೇಷ ಎಣಿಸುತ್ತಿದೆ ಎಂದು ಬ್ರಹ್ಮೇಶ್ವರ ಗ್ರಾಮದ ವಾಸಿ ಜನಸಂಗ್ರಾಮ ಪರಿಷತ್ತಿನ ಸದಸ್ಯ ಹರೀಶ್. ಸಿ ಗಂಭೀರ ಆರೋಪ ಮಾಡಿದ್ದಾರೆ.

ಇದು ಕರ್ನಾಟಕ ಅರಣ್ಯ ಕಾಯ್ದೆ 1963 ನಿಯಮ 1969ರ ಹಾಗೂ ಅರಣ್ಯ ಸಂರಕ್ಷಣಾ ಕಾಯ್ದೆ 1980ರ ಸೆಕ್ಷನ್ 17ರ ಅಂತಿಯ ಅಧಿಸೂಚನೆ ಅರಣ್ಯ ಭೂಮಿ ನಕ್ಷೆಯ ಪ್ರಕಾರ ಸಂಪೂರ್ಣ ಉಲ್ಲಂಘನೆ ಆಗಿದೆ. ಈ ಹಿಂದೆ 2016-17ರಲ್ಲಿ ಈ ಪ್ರದೇಶದಲ್ಲಿ ಭೂ ಒತ್ತುವರಿ ಕುರಿತು ದೂರಿ ನೀಡಲಾಗಿ, ಇಲಾಖೆಯು ಸುಮಾರು 800 ಮೀಟರ್ ಉದ್ದಕ್ಕೆ ಕಂದಕ ತೋಡಿಸಿತ್ತು. ಅಲ್ಲದೆ, 2023-24ರಲ್ಲಿ ಇಲಾಖೆ ವತಿಯಿಂದ 2.80 ಲಕ್ಷ ರೂ. ಹಣ ಖರ್ಚು ಮಾಡಿ ಕಾಡುಜಾತಿಯ ಗಿಡಗಳನ್ನು ನೆಟ್ಟಿತ್ತು. ಆದರೆ, ಒತ್ತುವರಿದಾರರು ಈ ಗಿಡಗಳನ್ನು ಏಕಾಏಕೀ ಕಿತ್ತು ತೆರವುಗೊಳಿಸಿ ಮೀಸಲು ಅರಣ್ಯವನ್ನು ಅಕ್ರಮವಾಗಿ ಒತ್ತುವರಿ ಮಾಡಿದ್ದಾರೆ ಎಂದಿದ್ದಾರೆ.

ಮೇಲ್ನೋಟಕ್ಕೆ ಇಲಾಖೆಯ ಸಿಬ್ಬಂದಿಗಳು ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ದೂರಿರುವ ಹರೀಶ್, ಒತ್ತುವರಿ ತೆರವಿಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ. ತಪ್ಪಿದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.