ರಿಪ್ಪನ್‌ಪೇಟೆ ; ನಾಲ್ಕು ಜಿಲ್ಲೆಗಳನ್ನು ಸಂಪರ್ಕಿಸುವ ಹೃದಯಭಾಗವಾಗಿರುವ ಇಲ್ಲಿನ ವಿನಾಯಕ ಸರ್ಕಲ್ ಸಾರ್ವಜನಿಕರ ಅನುಕೂಲಕ್ಕಾಗಿ ಅಗಲೀಕರಣಗೊಳಿಸುವುದರೊಂದಿಗೆ ರಾಜ್ಯದಲ್ಲಿ ಮಾದರಿ ಗ್ರಾಮವನ್ನಾಗಿಸುವ ಮಹಾದಾಸೆಯಿಂದಾಗಿ ರಿಪ್ಪನ್‌ಪೇಟೆ ವಿನಾಯಕ ವೃತ್ತವನ್ನು ವಿಸ್ತರಣೆ ಮಾಡಿ ವಿನಾಯಕ ಸರ್ಕಲ್ ನಾಮಫಲಕ ವಿದ್ಯುತ್ ದೀಪ ಅಳವಡಿಸುವ ಕುರಿತು ಶಾಸಕ ಗೋಪಾಲಕೃಷ್ಣ ಬೇಳೂರು ಲೋಕೋಪಯೋಗಿ ಇಲಾಖೆಯ ಮೆಸ್ಕಾಂ ಇಲಾಖೆಯ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿ ನೀಲನಕ್ಷೆಯಂತೆ ಶೀಘ್ರ ಕಾಮಗಾರಿ ಆರಂಭಿಸುವಂತೆ ಗುತ್ತಿಗೆದಾರನಿಗೆ ಸೂಚನೆ ನೀಡಿದರು.
ಇಂದು ಸಂಜೆ ಶಾಸಕ ಗೋಪಾಲಕೃಷ್ಣ ಬೇಳೂರು ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ಈಗಾಗಲೇ ವಿನಾಯಕ ಸರ್ಕಲ್ ಅಗಲೀಕರಣ ಮತ್ತು ಬಸ್ ಸೆಲ್ಟರ್ ನಿರ್ಮಾಣ ಹಾಗೂ ಬಾಕ್ಸ್ ಡ್ರೈನೇಜ್ ಮತ್ತು ಹೈಮಾಸ್ಟ್ ದೀಪ ಅಳವಡಿಕೆ ಸೇರಿದಂತೆ ವಿದ್ಯುತ್ ಕಂಬಗಳ ಸ್ಥಳಾಂತರಕ್ಕಾಗಿ 2 ಕೋಟಿ ರೂ. ಹಣವನ್ನು ಮಂಜೂರು ಮಾಡಿಸಲಾಗಿ ಟೆಂಡರ್ ಪ್ರಕ್ರಿಯೆ ಸಹ ಮುಗಿದಿದ್ದು ಮಳೆ ಕಡಿಮೆಯಾಗುತ್ತಿದ್ದಂತೆ ಕಾಮಗಾರಿ ಆರಂಭಿಸಲಾಗುವುದೆಂದು ವಿವರಿಸಿದರು.

ಮುಂದಿನ ಶೈಕ್ಷಣಿಕ ವರ್ಷದಲ್ಲಿ ರಿಪ್ಪನ್‌ಪೇಟೆಗೆ ಕೆ.ಪಿ.ಎಸ್. ಶಾಲೆ ಆರಂಭವಾಗುವುದರಿಂದಾಗಿ ಶಿವಮೊಗ್ಗ ರಸ್ತೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಜಾಗದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ಮಾಡುವ ಚಿಂತನೆ ನಡೆಸಿರುವುದಾಗಿ ವಿವರಿಸಿದ ಅವರು, ವಿನಾಯಕ ಸ್ವಾಮಿ ದೇವಸ್ಥಾನದ ಹಿಂಭಾಗದಲ್ಲಿ ಶಿಥಿಲಗೊಂಡ ಸಭಾಭವನವನ್ನು ಕೆಡವಿ ನೂತನ ಸಭಾಭವನ ನಿರ್ಮಿಸುವ ಕಾರ್ಯಕ್ಕೆ 25 ಲಕ್ಷ ರೂ. ಅನುದಾನ ನೀಡುವುದಾಗಿ ಸಮಿತಿಯವರಿಗೆ ತಿಳಿಸಿದ್ದು ದೇವಸ್ಥಾನಕ್ಕೂ ಹೆಚ್ಚಿನ ಅನುದಾನ ಕೊಡುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಹೊಸನಗರ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಮೌಳಿ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಉಬೇದುಲ್ಲಾ ಷರೀಫ್, ಹೋಬಳಿ ಘಟಕದ ಕಾಂಗ್ರೆಸ್ ಅಧ್ಯಕ್ಷ ಗಣಪತಿ ಗವಟೂರು, ಎ.ಪಿ.ಎಂ.ಸಿ. ಅಧ್ಯಕ್ಷ ಈಶ್ವರಪ್ಪಗೌಡ ಹಾರೋಹಿತ್ತಲು, ರವೀಂದ್ರ ಕೆರೆಹಳ್ಳಿ, ಡಿ.ಈ ಮಧುಸೂಧನ್, ಆಶೀಫ್‌ಭಾಷಾ, ನಿರೂಪ್ ಕುಮಾರ್, ಪ್ರಕಾಶ ಪಾಲೇಕರ್, ಗ್ರಾಮ ಪಂಚಾಯಿತ್ ಅಧ್ಯಕ್ಷೆ ಧನಲಕ್ಷ್ಮಿ, ವಿನೋಧ, ಅನುಪಮ, ಲೋಕೋಪಯೋಗಿ ಮತ್ತು ಮೆಸ್ಕಾಂ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಪಕ್ಷದ ಮುಖಂಡರು ಹಾಜರಿದ್ದರು.
ಕೇಬಲ್ ಕಳ್ಳರ ಬಂಧನ !
ರಿಪ್ಪನ್‌ಪೇಟೆ ; ಅರಸಾಳಿನಲ್ಲಿ ಕೇಬಲ್ ಕಳ್ಳತನ ಮಾಡಿಕೊಂಡು ಪರಾರಿಯಾಗುತ್ತಿದ್ದ ಇಬ್ಬರನ್ನು ರಿಪ್ಪನ್‌ಪೇಟೆ ಪೊಲೀಸ್ ಪತ್ತೆ ಮಾಡಿ ಬಂಧಿಸಿರುವ ಘಟನೆ ನಡೆದಿದೆ.
ಅರಸಾಳು ಮಂಜ ಮತ್ತು ನಾಗ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬೈಕ್ ಕಳ್ಳನ ಬಂಧನ !
ರಿಪ್ಪನ್‌ಪೇಟೆ ; ಪಟ್ಟಣದಲ್ಲಿ ನಿಲ್ಲಿಸಿದ್ದ ಬೈಕ್ ಅನ್ನು ಕಳವು ಮಾಡಿಕೊಂಡು ಪರಾರಿಯಾಗುತ್ತಿದ್ದ ಮಾವಿನಕಟ್ಟೆ ಹೂವಪ್ಪ ಎಂಬ ಆರೋಪಿಯನ್ನು ರಿಪ್ಪನ್‌ಪೇಟೆ ಪೊಲೀಸರು ಬಂಧಿಸಿರುವ ಘಟನೆ ವರದಿಯಾಗಿದೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





