ಹೊಸನಗರ ; ತಾಲ್ಲೂಕಿನ ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಾನು ಅಧ್ಯಕ್ಷನಾಗುವ ಮುಂಚೆ ಭ್ರಷ್ಟಾಚಾರ ನಡೆದಿದೆ ಎಂದು ಇಂದಿನ ಅಧ್ಯಕ್ಷ ಪ್ರವೀಣ್ಕುಮಾರ್ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿಬಿಟ್ಟು ಇಲ್ಲಸಲ್ಲದ ಆರೋಪ ಮಾಡಿದ್ದು ನಾವು ಆರು ಮಂದಿ ಗ್ರಾಮ ಪಂಚಾಯತಿ ಸದಸ್ಯರು ಪ್ರಮಾಣ ಮಾಡಲು ಸಿದ್ದ ಅಥವಾ ತನಿಖೆಗೂ ಸಿದ್ದ ಎಂದು ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಕಾಲಸಸಿ ಸತೀಶ್ ತಿಳಿಸಿದರು.
ಅವರು ಇಂದು ಗ್ರಾಮ ಪಂಚಾಯತಿ ಸದಸ್ಯರಾದ ಬೇಬಿ, ಓಂಕೇಶ ಗೌಡ, ಹೆಚ್.ಬಿ. ಶ್ರೀಧರ, ನಿರ್ಮಾಲ ರಾಘವೇಂದ್ರ, ದಿವ್ಯ ಬೃಂದಾವನ ಪ್ರವೀಣ್ ನೇತೃತ್ವದಲ್ಲಿ ತಾಲ್ಲೂಕು ಪಂಚಾಯತಿ ಎಡಿ ರಾಜೇಂದ್ರ ಕುಮಾರ್ರಿಗೆ ಮನವಿ ಪತ್ರ ಸಲ್ಲಿಸಿ ಅಧ್ಯಕ್ಷ ಪ್ರವೀಣ್ಕುಮಾರ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬುಧವಾರ ಬೆಳಿಗ್ಗೆ ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಯನ್ನು ಏರ್ಪಡಿಸಲಾಗಿದ್ದು ಈ ಸಭೆಗೆ ನಾವುಗಳು ಅನಿವಾರ್ಯ ಕಾರಣಗಳಿಂದ ಗೈರಾಗಿದ್ದೆವು, ಆದರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರವೀಣ್ಕುಮಾರ್ ನಮ್ಮ ಬಗ್ಗೆ ಕೀಳು ಮಟ್ಟದ ಹೇಳಿಕೆ ನೀಡಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿಬಿಟ್ಟಿದ್ದಾರೆ. ಇವರು ವೈಯಕ್ತಿಕವಾಗಿ ನಮ್ಮ ಬಗ್ಗೆ ಹೇಳಿಕೆ ನೀಡಿದ್ದು ನಮ್ಮ ಗೌರವಕ್ಕೆ, ಸದಸ್ಯತ್ವಕ್ಕೆ ದಕ್ಕೆ ತಂದಿದ್ದಾರೆ. ಅದೂ ಅಲ್ಲದೇ ಯಾವುದೇ ಸಾಕ್ಷ್ಯಾಧಾರಗಳಿಲ್ಲದೇ ನಮ್ಮನ್ನು ಭ್ರಷ್ಟಾಚಾರಿಗಳೆಂದು ಹೇಳಿಕೆ ನೀಡಿದ್ದು ಅವರಿಗೆ ಸಾಮಾನ್ಯ ಸಭೆ ನಡೆಸುವುದೇ ಗೊತ್ತಿಲ್ಲ. ಅವರು ನಮ್ಮ ಬಗ್ಗೆ ಇಲ್ಲಸಲ್ಲದ ಭಾವನೆ ಮೂಡುವಂತೆ ಹೇಳಿಕೆ ನೀಡಿದ್ದು ಅವರೇ ಜನರಿಗೆ ತಪ್ಪು ಮಾಹಿತಿ ನೀಡಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದರು.
ಅದು ಅಲ್ಲದೇ ಅವರು ಹೊಸನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ 108 ಡ್ರೈವರ್ ಆಗಿ ಕೆಲಸ ನಿರ್ವಹಿಸುತ್ತಿದ್ದು ಇದರ ಜೊತೆಗೆ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಎರಡು ಕಡೆಯ ಸಂಭಾವನೆ ಪಡೆಯುತ್ತಿದ್ದಾರೆ. ಇದು ಕಾನೂನು ಬಾಹಿರ. ತಕ್ಷಣ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





