ರಿಪ್ಪನ್‌ಪೇಟೆ ; ಹೊರಗಿನ ಮಾಲಿನ್ಯ ಕಳೆಯಲು ಹೊರಟ ಮನುಷ್ಯ ತನ್ನ ಅಂತರಂಗದಲ್ಲಿಯೇ ಕತ್ತಲು ತುಂಬಿಕೊಂಡಿದ್ದಾನೆ. ಗೊತ್ತು ಗುರಿಗಳಿಲ್ಲದ ಜೀವನ ಮನುಷ್ಯ ಬದುಕಲು ಬೇಕಾದ ಜ್ಞಾನವನ್ನು ಪಡೆಯುತ್ತಿಲ್ಲ. ಅರಿವಿನ ಕಣ್ಣು ತೆರೆಯಿಸಲು ಧರ್ಮ ಮತ್ತು ಗುರು ಬೇಕು ಎಂಬುದನ್ನು ಅರಿತಾಗ ಬಾಳು ಸಾರ್ಥಕಗೊಳ್ಳುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಮಂಗಳವಾರ ಸಮೀಪದ ಶ್ರೀಮದ್ ರಂಭಾಪುರಿ ಖಾಸಾ ಶಾಖಾ ಮಳಲಿ ಸಂಸ್ಥಾನ ಮಠದಲ್ಲಿ ಜರುಗಿದ ಕಾರ್ತಿಕ ದೀಪೋತ್ಸವ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಕಾರ್ತಿಕ ಮಾಸ ಬೆಳಕಿನ ಹಬ್ಬ. ಹೊರಗಿರುವ ಕತ್ತಲೆಯನ್ನು ದೀಪ ಹಚ್ಚಿ ಕಳೆಯಬಹುದು. ಆದರೆ ಒಳಗಿರುವ ಅಜ್ಞಾನವೆಂಬ ಕತ್ತಲೆಯನ್ನು ಗುರುವಿನ ಮಾರ್ಗದರ್ಶನ ಮತ್ತು ಸಂಸ್ಕಾರದಿಂದ ಮಾತ್ರ ಬೆಳಕು ಕಾಣಲು ಸಾಧ್ಯ. ಜ್ಯೋತಿ ಬೆಳಗುತ್ತಿದೆ ಉರಿಯುತ್ತಿಲ್ಲ. ಆದರೆ ಮನುಷ್ಯ ಉರಿಯುತ್ತಿದ್ದಾನೆ ಬೆಳಗುತ್ತಿಲ್ಲ. ಬೆಳಗುವುದಕ್ಕೂ ಉರಿಯುವುದಕ್ಕೂ ಬಹಳಷ್ಟು ಅಂತರವಿದೆ. ಒಂದು ಬಾಳಿನ ವಿಕಾಸವಾದರೆ ಇನ್ನೊಂದು ನಾಶದ ಸಂಕೇತ. ಬದುಕು ಬಲಗೊಳ್ಳಬೇಕಲ್ಲದೇ ದುರ್ಬಲಗೊಳ್ಳಬಾರದು. ಹಚ್ಚುವುದಾದರೆ ದೀಪ ಹಚ್ಚಬೇಕು. ಬೆಂಕಿ ಹಚ್ಚಬಾರದು. ಆರಿಸುವುದಾದರೆ ಬೆಂಕಿ ಆರಿಸಬೇಕು ದೀಪ ಆರಿಸಬಾರದು ಎಂಬ ನೀತಿಯ ಸಂದೇಶವನ್ನು ಅರಿತು ಬಾಳಬೇಕಾಗುತ್ತದೆ. ಜಗ ಬೆಳಗಲು ಸೂರ್ಯ ಮನ ಬೆಳಗಲು ಗುರು ಬೇಕು. ಧರ್ಮ ಅರ್ಥ ಕಾಮ ಮತ್ತು ಮೋಕ್ಷ ಎಂಬ ಚತುರ್ವಿಧ ಪುರುಷಾರ್ಥಗಳಲ್ಲಿ ಒಂದನ್ನಾದರೂ ಸಂಪಾದಿಸಿಕೊಳ್ಳದಿದ್ದರೆ ಜೀವನ ನಿರರ್ಥಕವೆಂಬ ಎಚ್ಚರಿಕೆಯನ್ನು ಶ್ರೀ ಜಗದ್ಗುರು ರೇಣುಕಾಚಾರ್ಯರು ವೀರಶೈವ ಧರ್ಮ ಸಿದ್ಧಾಂತದ ಸಂವಿಧಾನದಲ್ಲಿ ನಿರೂಪಿಸಿದ್ದಾರೆ. ಭೌತಿಕ ಸಂಪನ್ಮೂಲಗಳಾಗಲಿ ಸಿರಿ ಸಂಪತ್ತಿನ ಸಂಗ್ರಹವಾಗಲಿ ಮನುಷ್ಯನಿಗೆ ಸಂತೃಪ್ತಿ ಸಮಾಧಾನ ತರಲಾರವು. ಇದರೊಂದಿಗೆ ಒಂದಿಷ್ಟಾದರೂ ಶಿವಜ್ಞಾನದ ಹಸಿವು ಇರಬೇಕಾಗುತ್ತದೆ. ಮಳಲಿ ಸಂಸ್ಥಾನ ಮಠದಲ್ಲಿ ಕಾರ್ತಿಕ ದೀಪೋತ್ಸವ ಧರ್ಮ ಸಮಾರಂಭ ವಿಜೃಂಭಣೆಯಿಂದ ಜರುಗುತ್ತಿರುವುದು ತಮಗೆ ಅಪಾರ ಸಂತೋಷ ತಂದಿದೆ ಎಂದ ಜಗದ್ಗುರುಗಳು ಡಾ|| ನಾಗಭೂಷಣ ಶಿವಾಚಾರ್ಯ ಸ್ವಾಮಿಗಳವರ ಕ್ರಿಯಾಶೀಲ ಬದುಕು ಮತ್ತು ಆದರ್ಶ ಚಿಂತನೆಗಳು ಮಠದ ಅಭಿವೃದ್ಧಿಗೆ ಮತ್ತು ಭಕ್ತರ ಕಲ್ಯಾಣಕ್ಕೆ ಸಾಕ್ಷಿಯಾಗಿವೆ ಎಂದರು.
ಪತ್ರಕರ್ತ ರಿಪ್ಪನ್‌ಪೇಟೆಯ ಆರ್.ಎನ್.ಪ್ರಶಾಂತ ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ, ಮಳಲಿ ಸಂಸ್ಥಾನಮಠದ ಧಾರ್ಮಿಕ ಇತಿಹಾಸ ಮೂಲ ಕರ್ತೃ ನಾಗಾರ್ಜುನ ಸ್ವಾಮಿಯ ಕ್ರಿಯಾಕರ್ತೃತ್ವ ಶಕ್ತಿ ಅಪಾರವಾದುದು. ನ್ಯಾಯ ಧರ್ಮ ನೀತಿಗಳ ಅರಿವು ಇಲ್ಲದಂತಾಗಿ ಮನುಷ್ಯ ಕವಲು ದಾರಿಯಲ್ಲಿ ಸಾಗುತ್ತಿದ್ದಾನೆ. ಮಲಿನಗೊಂಡ ಮನಸ್ಸು ಪರಿಶುದ್ಧಗೊಳ್ಳಲು ಗುರುವಿನ ಅರಿವಿನ ಬೋಧ ಬಹಳ ಮುಖ್ಯ. ಮಲೆನಾಡಿನ ಪ್ರಾಂತದಲ್ಲಿರುವ ಮಳಲಿಮಠ ಭಕ್ತರ ಬಾಳಿನ ಭಾಗ್ಯೋದಯಕ್ಕೆ ಸದಾ ಶ್ರಮಿಸುತ್ತಿದೆ. ಇದಕ್ಕೆಲ್ಲ ಮಳಲಿ ಸಂಸ್ಥಾನಮಠದ ಡಾ|| ನಾಗಭೂಷಣ ಶಿವಾಚಾರ್ಯರ ಪ್ರಾಮಾಣಿಕ ಪ್ರಯತ್ನ ಪರಿಶ್ರಮ ಕಾರಣವೆಂದರು.
ಬಂಕಾಪುರ ಅರಳೆಲೆ ಹಿರೇಮಠದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಸಜ್ಜನರ ಒಡನಾಟ ಉತ್ಕರ್ಷತೆಗೆ ಕಾರಣವಾದರೆ ದುರ್ಜನರ ಸಹವಾಸ ನಾಶಕ್ಕೆ ಮೂಲ. ಬೆಳಕಿದ್ದರೆ ಬಾಳಿನಲ್ಲಿ ಯಾವ ಭಯ ಭೀತಿ ಇರುವುದಿಲ್ಲ. ಜ್ಞಾನದ ಬೆಳಕು ಪಡೆಯಲು ಗುರುವಿನ ಕೃಪಾ ಕಾರುಣ್ಯ ಮುಖ್ಯವೆಂದರು. ಸಮಾರಂಭ ಉದ್ಘಾಟಿಸಿದ ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಮನುಷ್ಯ ದ್ವೇಷವನ್ನು ಕಳೆದುಕೊಳ್ಳದಿದ್ದರೆ ಬದುಕಿನಲ್ಲಿ ಸುಖ ಸಂತಸದ ಹೂವು ಅರಳುವುದಿಲ್ಲ. ಜಗತ್ತಿನಲ್ಲಿ ನಮಗೆ ಬೇಕಾದುದು ಮತ್ತು ಬೇಡವಾದುದು ಎರಡೂ ಇವೆ. ಯಾವುದನ್ನು ಅನುಸರಿಸಿ ಬಾಳಿದರೆ ನೆಮ್ಮದಿ ಸಿಗುವುದೋ ಆ ಹೆದ್ದಾರಿಯಲ್ಲಿ ಮುನ್ನಡೆಯಲು ಗುರು ಬೇಕು. ಮಳಲಿ ಸಂಸ್ಥಾನಮಠ ಮೊದಲಿನಿಂದಲೂ ಈ ಪವಿತ್ರ ಕಾರ್ಯ ಮಾಡುತ್ತಾ ಬಂದಿದೆ ಎಂದು ಹರುಷ ವ್ಯಕ್ತಪಡಿಸಿದರು.
ಶಿವಮೊಗ್ಗ ಡಿ.ಸಿ.ಸಿ.ಬ್ಯಾಂಕ ಅಧ್ಯಕ್ಷ ಡಾ.ಆರ್.ಎಂ.ಮಂಜುನಾಥಗೌಡ ಮಾತನಾಡಿ ಈ ಭಾಗದ ಜನತೆಗೆ ಮಳಲಿಮಠ ನೀಡುತ್ತಿರುವ ಸನ್ಮಾರ್ಗದರ್ಶನ ಜನತೆಯ ಅಭ್ಯುದಯಕ್ಕೆ ಕಾರಣವಾಗಿದೆ.
ಡಾ.ನಾಗಣಭೂಷಣ ಶಿವಾಚಾರ್ಯ ಸ್ವಾಮಿಗಳ ಕ್ರಿಯಾ ಕರ್ತೃತ್ವ ಶಕ್ತಿಯಿಂದ ಶ್ರೀ ಮಠ ಅಭ್ಯುದಯ ಕಾಣುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ ಮಳಲಿ ಸಂಸ್ಥಾನಮಠದ ಡಾ|| ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಮನುಷ್ಯ ಯಾವಾಗಲೂ ಆಶಾವಾದಿಗಳಾಗಿ ಬಾಳಬೇಕಲ್ಲದೇ ನಿರಾಶಾವಾದಿಗಳಾಗಬಾರದು. ಬಿಸಿಲಿನಿಂದ ಬಳಲಿ ಬಂದ ಜನರಿಗೆ ಮರ ನೆರಳನ್ನು ಕೊಡುತ್ತದೆ. ಕಲ್ಲು ಹೊಡೆಸಿಕೊಂಡ ಮರ ಪ್ರತಿಯಾಗಿ ಹಣ್ಣನ್ನು ಕೊಡುತ್ತದೆ. ನಿಂತ ನೆಲ ಮತ್ತು ನೆರಳು ಕೊಟ್ಟ ಮರವನ್ನು ನಾವಿಂದು ಕತ್ತರಿಸುತ್ತಿದ್ದೇವೆ. ಸಮಾಜ ಘಾತುಕ ಶಕ್ತಿಗಳ ವಿರುದ್ಧ ಹೋರಾಡಿ ಸತ್ಯ ಸಂಸ್ಕೃತಿ ಉಳಿಸುವ ಸಂಕಲ್ಪ ಕೈಗೊಳ್ಳಬೇಕಾಗಿದೆ. ಶ್ರೀ ರಂಭಾಪುರಿ ಜಗದ್ಗುರುಗಳ ಆಶೀರ್ವಾದ ಮತ್ತು ಪ್ರೋತ್ಸಾಹದಿಂದ ಮಳಲಿ ಸಂಸ್ಥಾನಮಠ ಉತ್ತಮ ಕಾರ್ಯ ಕೈಗೊಂಡಿದೆ ಎಂದರು.
ತೀರ್ಥಹಳ್ಳಿ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ, ಮಾಜಿ ಶಾಸಕ ಕಿಮ್ಮನೆ ರತ್ನಾಕರ, ಚನ್ನಬಸಪ್ಪಗೌಡರು, ಬಿ.ಯುವರಾಜ, ಉಮೇಶ ಮಸರೂರು, ಹೆಚ್.ವಿ. ಈಶ್ವರಪ್ಪಗೌಡ, ಸೋಮಶೇಖರಪ್ಪ, ಡಾ. ಎಂ.ಮಂಜುನಾಥ, ಗುರುನಾಥಗೌಡ, ಹೆಚ್.ಆರ್. ಗುರುನಾಥನಾಯ್ಕ, ಎನ್.ವರ್ತೇಶ, ಕೆ.ಆರ್.ಪ್ರಸಾದ, ಸುದೀಪಗೌಡ ಹೆಚ್.ಎಸ್., ಚಂದ್ರಶೇಖರ ಮೊದಲ್ಗೊಂಡು ಹಲವಾರು ಗಣ್ಯ ಅತಿಥಿಗಳು ಪಾಲ್ಗೊಂಡಿದ್ದರು. ಸಮಾಜದ ಧುರೀಣರಿಗೆ ಮತ್ತು ಸೇವೆ ಸಲ್ಲಿಸಿದ ಸದ್ಭಕ್ತರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆಯಿತ್ತು ಶುಭ ಹಾರೈಸಿದರು.
ಶಾಂತಪುರ, ಬಿಳಿಕಿ, ಬೀರೂರು, ಸಂಗೊಳ್ಳಿ, ಕೋಣಂದೂರು, ತೊಗರ್ಸಿ, ಕಡೇನಂದಿಹಳ್ಳಿ, ಹನಮಾಪುರ, ಹಾರನಹಳ್ಳಿ, ಸಿಂದಗಿ ಮಠದ ಶ್ರೀಗಳವರು ಉಪಸ್ಥಿತರಿದ್ದರು.
ಜಮ್ಮಲದಿನ್ನಿ ಬಿ.ಎಂ., ಸುರೇಶ ಗವಾಯಿಗಳು ಮತ್ತು ಶಿವಮೊಗ್ಗದ ನಾಗರತ್ನಾ ಚಂದ್ರಶೇಖರಯ್ಯ ಪ್ರಾರ್ಥನಾ ಭಕ್ತಿ ಗೀತೆಗಳನ್ನು ಹಾಡಿದರು. ತಾಲೂಕ ಪಂಚಾಯತ ಮಾಜಿ ಆಧ್ಯಕ್ಷ ವೀರೇಶ ಆಲುವಳ್ಳಿ ಸ್ವಾಗತಿಸಿದರು.
ಗಿಣಿವಾರದ ಕೊಡಚಾದ್ರಿ ಆಂಗ್ಲ ಮಾಧ್ಯಮ ವಸತಿ ಶಾಲೆಯ ವಿದ್ಯಾರ್ಥಿನಿಯರಿಂದ ಭರತ ನಾಟ್ಯ ಜರುಗಿತು. ಶಿವಮೊಗ್ಗದ ಶಾಂತಾ ಆನಂದ ನಿರೂಪಿಸಿದರು. ಕಗ್ಗಲಿ ಶಿವಪ್ರಕಾಶ ಪಾಟೀಲ ವಂದನಾರ್ಪಣೆ ಸಲ್ಲಿಸಿದರು.
ಸಮಾರಂಭದ ನಂತರ ಕಾರ್ತಿಕ ದೀಪೋತ್ಸವ ಹಾಗೂ ಅನ್ನ ದಾಸೋಹ ಜರುಗಿತು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





