ರಿಪ್ಪನ್‌ಪೇಟೆ ; ಹೊಸನಗರ ತಾಲ್ಲೂಕಿನ ದೀವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಬಂಡಿ ರಾಮಚಂದ್ರ ಮತ್ತು ಆಡಳಿತ ಮಂಡಳಿಯ ದುರಾಡಳಿತದಿಂದಾಗಿ ಸರಿಯಾಗಿ ಲೆಕ್ಕಪರಿಶೋಧನೆ ಮಾಡದೇ ಇರುವುದು ಖಂಡಿಸಿ ಇದೇ ಬರುವ ಡಿಸೆಂಬರ್ 31 ರಿಂದ ದೀವರ ವಿದ್ಯಾವರ್ಧಕ ಸಂಘದ ಮುಂಭಾಗ ಏಕಾಂಗಿಯಾಗಿ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುವುದರೊಂದಿಗೆ ಸಹಕಾರಿ ನಿಯಮದಡಿ 64 ಕಾಯ್ದೆಯಡಿ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸುವಂತೆ ಮುಖ್ಯಮಂತ್ರಿಗಳಿಗೆ ಸಮಾಜದ ಮುಖಂಡ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಶಾಸಕ ಗೋಪಾಲಕೃಷ್ಣ ಬೇಳೂರು, ಮಾಜಿ ಶಾಸಕ ಡಾ.ಜಿ.ಡಿ.ನಾರಾಯಣಪ್ಪ, ಆರ್ಯ ಈಡಿಗ ಸಮಾಜದ ಸಂಸ್ಥಾನ ಮಠದ ಶ್ರೀ ರೇಣುಕಾನಂದ ಸ್ವಾಮೀಜಿಯವರಿಗೆ, ಹರತಾಳು ಹಾಲಪ್ಪರಿಗೆ ಪತ್ರ ಬರೆಯುವುದರೊಂದಿಗೆ ತನಿಖೆ ನಡೆಸುವಂತೆ ಆಗ್ರಹಿಸಿರುವುದಾಗಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಶಿವಮೊಗ್ಗ ಹೊಸನಗರ ದೀವರ ವಿದ್ಯಾವರ್ಧಕ ಸಂಘವು 1925ನೇ ಸುಮಾರಿಗೆ ಕುಂಭತ್ತಿ ಬೈರನಾಯ್ಕ, ಸಮಾಜದ ಮುಖಂಡರಾದ ಮಂಡಾನಿ ದುಗ್ಗನಾಯ್ಕ, ಕಾಪಿ ಬಿಳಿಯನಾಯ್ಕ, ಗುಡೋಡಿ ಗುಂಡನಾಯ್ಕ, ಆನೆಗದ್ದೆ ಮಂಜಪ್ಪ ಮಾಸ್ಟರ್, ಬೊಮ್ಮಣ್ಣ ಮಾಸ್ಟರ್, ಇವರುಗಳ ನೇತೃತ್ವದಲ್ಲಿ ಅಂದಿನ ಸಮಾಜದ ಮುಖಂಡರನ್ನು ಸಂಘಟಿಸಿ ಹೊಸನಗರದಲ್ಲಿ ದೀವರ ವಿದ್ಯಾವರ್ಧಕ ಸಂಘ ರಚನೆಯಾಗಿತ್ತು.

ಮುನಿಸಿಪಾಲಿಟಿಯಿಂದ ನಿವೇಶನ ಪಡೆದು ಸಂಘದ ಮನೆ ಎಂಬ ಹೆಸರಿನಲ್ಲಿ ಒಂದು ಕಟ್ಟಡವನ್ನು ನಿರ್ಮಿಸಿ ಕ್ರಮೇಣ ಈ ಕಟ್ಟಡವು ವಿದ್ಯಾರ್ಥಿನಿಲಯವಾಗಿ ರಚಿಸಲಾಗಿತ್ತು. ಬಹುಶಃ ರಾಜ್ಯದಲ್ಲಿಯೇ ಆಗಿನ ಕಾಲದ ಮೊದಲನೇ ವಿದ್ಯಾರ್ಥಿನಿಲಯ ಇದೇ ಅಗಿರಬಹುದು. ಈ ಸಂಘದ ಶ್ರೇಯೋಭಿವೃದ್ದಿಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಮಂಜಯ್ಯ ಹೆಗ್ಗಡೆಯವರು ಈ ವಿದ್ಯಾರ್ಥಿ ನಿಲಯಕ್ಕೆ ಒಂದು ಲಾರಿ ಲೋಡ್‌ನಷ್ಟು ಪಾತ್ರೆಗಳನ್ನು ಸಂಘಕ್ಕೆ ಕೊಟ್ಟಿದ್ದರು. ಅದೇ ವಿದ್ಯಾರ್ಥಿನಿಲಯದಲ್ಲಿ ನಾನು ಮತ್ತು ನನ್ನಂತಹ ಅನೇಖ ಸಮಾಜದ ಮಕ್ಕಳು ವಿದ್ಯಾಭ್ಯಾಸ ಮಾಡಿರುತ್ತಾರೆ. ಸಹಜವಾಗಿ ನಾನು ರಾಜಕಾರಣಕ್ಕೆ ಕಾಲಿಟ್ಟಾಗ ನಮ್ಮ ಸಮಾಜದವರು ಸೋತಾಗಲೂ ಗೆದ್ದಾಗಲು ನನಗೆ ಆಶೀರ್ವಾದ ಮಾಡಿದ ಋಣ ತೀರಿಸುವ ರೀತಿಯಲ್ಲಿ ಸದರಿ ಸಂಘದ ಜಾಗದಲ್ಲಿದ್ದ ಹಳೆಯ ಶಿಥಿಲ ಸಂಘದ ಮನೆಕಟ್ಟಡವನ್ನು ಕೆಡವಿ ಅದೇ ಸ್ಥಳದಲ್ಲಿ 20 ವಾಣಿಜ್ಯ ಮಳಿಗೆಗಳು ಮತ್ತು ವಿದ್ಯಾರ್ಥಿಗಳಿಗಾಗಿ 20 ಕೊಠಡಿಗಳನ್ನು ನಿರ್ಮಿಸಲು ಸಮಾಜದಯಾರಿಂದಲೂ ಸಹಾಯ ಪಡೆಯದೇ ನನ್ನ ಸ್ವಂತ ದುಡಿಮೆ ಮತ್ತು ಉತ್ಪತ್ತಿಯಿಂದ ಶರಾವತಿ ಕಾಂಪ್ಲೆಕ್ಸ್ ಕಟ್ಟಡವನ್ನು ನಿರ್ಮಿಸಿರುತ್ತೇನೆ.
ಆಗ ನನ್ನ ಮೇಲೆ ಸಾಕಷ್ಟು ಆರೋಪಗಳು ಬಂದಾಗ ನಾನು ಯುವಕ ಬಂಡಿ ರಾಮಚಂದ್ರನನ್ನು ಕರೆದು ಅವನನ್ನ ಅಧ್ಯಕ್ಷನಾಗಿ ಘೋಷಿಸಿ ಸಂಪೂರ್ಣ ಅಧಿಕಾರವನ್ನು ನೀಡಿ ಸುಮಾರು 20-25 ವರ್ಷಗಳಾದರೂ ಕೂಡಾ ಸಂಘದ ಲೆಕ್ಕಪತ್ರವನ್ನು ಸರಿಯಾಗಿ ನಿರ್ವಹಣೆ ಮಾಡದೇ ಸರ್ವ ಸದಸ್ಯರ ಸಭೆಯನ್ನು ಇದುವರೆಗೂ ಕರೆಯದಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.
ಸಂಘದ ಹೆಸರಿನಲ್ಲಿ ನಕಲಿ ಖಾತೆ ತೆರೆದು ಕೋಟ್ಯಾಂತರ ರೂಪಾಯಿ ಆವ್ಯವಹಾರ ನಡೆಸಿದಂತೆ ತೋರುತ್ತಿದೆ.ಸರ್ಕಾರದಿಂದ ಶಾಸಕರಿಂದ ಸಂಸದರಿಂದ ಸಾರ್ವಜನಿಕರಿಂದ ಕೇಂದ್ರ ಸಂಘದಿಂದ ಬಂದಿರುವ ಹಣವನ್ನು ದುರ್ಬಳಕೆ ಮಾಡಿಕೊಂಡಂತೆ ಕಾಣುತ್ತಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸುವ ಮೂಲಕ ಸಹಕಾರಿ ಕಾಯ್ದೆ 64 ರಡಿ ಸರ್ಕಾರ ತನಿಖೆ ನಡೆಸಿ ಸಂಘವನ್ನು ಅಮಾನತು ಪಡಿಸಿ ಆಡಳಿತಾಧಿಕಾರಿಯನ್ನು ನೇಮಿಸುವಂತೆ ಮತ್ತು ಹಾಲಿ ಅಧ್ಯಕ್ಷರಾಗಿರುವ ಬಂಡಿ ರಾಮಚಂದ್ರರವರು ತಕ್ಷಣ ರಾಜೀನಾಮೆ ನೀಡುವಂತೆ ಆಗ್ರಹಿಸಿ ಬರುವ ಡಿಸೆಂಬರ್ 31 ರಿಂದ ದೀವರ ವಿದ್ಯಾವರ್ಧಕ ಸಂಘದ ಮುಂಭಾಗ ಏಕಾಂಗಿಯಾಗಿ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುವುದಾಗಿ 95 ವರ್ಷದ ಹಿರಿಯ ಚೇತನ ಮಾಜಿ ಶಾಸಕ ಸ್ವಾಮಿರಾವ್ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಹಕಾರಿ ಸಚಿವರಿಗೆ ಹಿರಿಯರಾದ ಕಾಗೋಡು ತಿಮ್ಮಪ್ಪ ಮತ್ತು ಶಾಸಕ ಗೋಪಾಲಕೃಷ್ಣ ಬೇಳೂರು ರಾಜ್ಯ ಆರ್ಯ ಈಡಿಗ ಸಮಾಜದ ಅಧ್ಯಕ್ಷರಿಗೆ ಮಾಜಿ ಶಾಸಕ ಡಾ.ಜಿ.ಡಿ.ನಾರಾಯಣಪ್ಪ, ಆರ್ಯ ಈಡಿಗ ಸಮಾಜದ ಸಂಸ್ಥಾನ ಮಠದ ಶ್ರೀ ರೇಣುಕಾನಂದ ಸ್ವಾಮೀಜಿಯವರಿಗೆ, ಹರತಾಳು ಹಾಲಪ್ಪ ಹಾಗೂ ಜಿಲ್ಲಾ ಆರ್ಯ ಈಡಿಗಾ ಸಮಾಜದ ಅಧ್ಯಕ್ಷ ಹುಲ್ತಿಕೊಪ್ಪ ಶ್ರೀಧರ್ ಇವರಿಗೆ ಈಗಾಗಲೇ ಪತ್ರ ಬರೆಯುವ ಮೂಲಕ ಆಗ್ರಹಿಸಿರುವುದಾಗಿ ತಿಳಿಸಿದರು.
ಈ ಬಗ್ಗೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಹಾಗೂ ಸಹಕಾರಿ ಸಂಘಗಳ ಉಪನಿಂಬಂಧಕರು ತಾಲ್ಲೂಕು ಸಹಕಾರ ಸಂಘಗಳ ಸಹಾಯಕ ನಿರ್ದೇಶಕರು ಸಂಘದಲ್ಲಿ ಅವ್ಯವಹಾರದ ಕುರಿತು ತನಿಖೆ ನಡೆಸುವಲ್ಲಿ ಮುಂದಾಗುವ ಮೂಲಕ ವಯೋವೃದ್ದ ಬಿ.ಸ್ವಾಮಿರಾವ್ ಇವರ ಬೇಡಿಕೆಗೆ ಸ್ಪಂದಿಸಿ ನ್ಯಾಯ ಕೊಡಿಸುವತ್ತ ಮುಂದಾಗುವರೆ ಕಾದು ನೋಡಬೇಕಾಗಿದೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





