ರಿಪ್ಪನ್‌ಪೇಟೆ ; ಶಿವಮೊಗ್ಗ ಜಿಲ್ಲಾ ಮಟ್ಟದ ವಿವಿಧ ತಾಲ್ಲೂಕಿನ ಗ್ರಾಮೀಣ ಭಾಗದ 5ನೇ ತರಗತಿಯ 150 ವಿದ್ಯಾರ್ಥಿಗಳು ಪಿಎಂಶ್ರೀ ನವೋದಯ ವಿದ್ಯಾಲಯಕ್ಕೆ ಭಾನುವಾರ ಪ್ರವಾಸ ಕೈಗೊಂಡರು. ಪಿಎಂಶ್ರೀ ನವೋದಯ ಶಿವಮೊಗ್ಗ ಹಾಗೂ ಹಳೆ ವಿದ್ಯಾರ್ಥಿಗಳ – ಮಿಲನ ಅಲ್ಯೂಮ್ನಿ ಅಸೋಸಿಯೇಷನ್‍ನ ಮಾರ್ಗದರ್ಶನದಲ್ಲಿ ನಡೆಸುವ – ನವೋದಯ ಉಚಿತ ತರಬೇತಿ ಶಿಬಿರದ ವತಿಯಿಂದ ಈ ಪ್ರವಾಸ ಹಮ್ಮಿಕೊಳ್ಳಲಾಗಿತ್ತು.

ವಿದ್ಯಾರ್ಥಿಗಳು ಕ್ಯಾಂಪಸ್‍ನ ನೋಟ, ಶಾಲೆಯ ವ್ಯವಸ್ಥೆಗಳು ಮತ್ತು ಸೌಲಭ್ಯಗಳನ್ನು ಪರಿಶೀಲಿಸಿದರು. ಅತ್ಯುತ್ತಮ ಶಿಕ್ಷಣದ ಕೇಂದ್ರ ಬಿಂದುವಾದ ಶಾಲೆಯ ಅನುಭವ ಪಡೆದು, ಅಲ್ಲಿನ ಮಕ್ಕಳ ಜೊತೆ ಪರೀಕ್ಷೆಯ ತಯಾರಿ ಬಗ್ಗೆ ಸಂವಾದ ನಡೆಸಿದರು.
ಈ ಪ್ರವಾಸ ಮತ್ತು ಸಂವಾದದ ಕಾರ್ಯಕ್ರಮದಲ್ಲಿ ಪ್ರಸ್ತುತ ಪ್ರಾಚಾರ್ಯ ಕೆ.ಎಂ ಜೋಸ್ ಮಾತನಾಡಿ, ಪಿಎಂಶ್ರೀ ನವೋದಯ ಶಾಲೆ, ಶಿವಮೊಗ್ಗ ಜಿಲ್ಲೆಯ ಅತ್ಯಂತ ಉತ್ತಮ ಮತ್ತು ಶ್ರೇಷ್ಠ ಶಾಲೆ. ಇಲ್ಲಿನ ಮಕ್ಕಳು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬದುಕು ರೂಪಿಸಿಕೊಂಡಿದ್ದಾರೆ. ನೀವೆಲ್ಲರು ಪರೀಕ್ಷೆಗೆ ಉತ್ತಮ ತೆಯ್ಯಾರಿ ನಡೆಸಿ ಮತ್ತು ನಮ್ಮ ನವೋದಯ ಶಾಲೆಗೆ ತೇರ್ಗಡೆ ಆಗಬೇಕೆಂದರು.
ನವೋದಯ ಹಳೆ ವಿದ್ಯಾರ್ಥಿ ಮತ್ತು ಹಿರಿಯೂರು ಸಿಬಿಎಸ್ಇ ಶಾಲೆಯ ಪ್ರಾಂಶುಪಾಲ ನವೀನ್ ಕುಮಾರ್ ಮಕ್ಕಳಿಗೆ – ನವೋದಯ ಎಂಬುದು ಶಾಲೆಯಲ್ಲ, ಅದು ಜೀವನವನ್ನು ಗಗನಕ್ಕೇರಿಸುವ ವೇದಿಕೆ. ಈ ಪ್ರವಾಸವು ನಿಮ್ಮ ಜೀವನದ ಗುರಿ ಮುಟ್ಟಲು ಸಹಕಾರಿ ಆಗಲಿದೆ ಎಂದರು.

ನವೋದಯ ಮತ್ತು ಮೊರಾರ್ಜಿ ಉಚಿತ ತರಬೇತಿ ಶಿಬಿರದ ಸಹ-ಸಂಸ್ಥಾಪಕರಾದ – ಪುನೀತ್ ಹೆಚ್ ಎನ್ ಮಕ್ಕಳನ್ನು ಕುರಿತು ಉಚಿತ ನವೋದಯ ತರಬೇತಿ ಶಿಬಿರದ ಕಲ್ಪನೆ – ಗ್ರಾಮೀಣ ಭಾಗದ ಮಕ್ಕಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲಿ ಎಂದು, ಮಕ್ಕಳ ಪ್ರೇರಣೆಗೆ ಇಂತಹ ಒಂದು ಪ್ರವಾಸ ಆಯೋಜಿಸಿದ್ದೇವೆ, ಇದರ ಸಂಪೂರ್ಣ ಉಪಯೋಗ ಮಕ್ಕಳು ಪಡೆದು, ನವೋದಯ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಬೇಕು ಎಂದು ಆಶಿಸಿದರು.
ಮಕ್ಕಳ ಸಂವಾದ ಕಾರ್ಯಕ್ರಮದಲ್ಲಿ, ನವೋದಯ ಪರೀಕ್ಷೆ ಬಗ್ಗೆ ತಯಾರಿ, ಸಮಯ ನಿರ್ವಹಣೆ, ಮಾನಸಿಕ ಸಾಮರ್ಥ್ಯ, ಗಣಿತ, ಕನ್ನಡ ವಿಷಯಗಳ ಬಗ್ಗೆ ಸುಧೀರ್ಘ ಚರ್ಚೆ ನಡೆಸಿ ನವೋದಯಶಾಲೆಯ 6ನೇ ತರಗತಿ ಮಕ್ಕಳಿಂದ ಪ್ರತ್ಯುತ್ತರ ಪಡೆಯಲಾಯಿತು.

ಈ ಕಾರ್ಯಕ್ರಮದಲ್ಲಿ ಹಳೆ ನವೋದಯ ವಿದ್ಯಾರ್ಥಿ ಬಳಗ ಹಾಗೂ ಶಿಬಿರದ ಸಂಚಾಲಕರಾದ ಡಾ. ಕೆ ಎಂ ಸುನಿಲ್ ಕುಮಾರ್, ಶ್ರೀನಾಥ್ ನಾಡಿಗ್ ಮತ್ತು ಶಿಬಿರದ ಶಿಕ್ಷಕರಾದ ರಂಗನಾಥ್, ಇಮ್ರಾನ್ ಉಪಸ್ಥಿತರಿದ್ದರು. ಜೊತೆಗೆ ನವೋದಯ ಶಾಲೆಯ ಶಿಕ್ಷಕರ ಬಳಗದ ನವೀನ್ ನಾಯ್ಕ್, ರಾಮಚಂದ್ರ, ಶರಣಪ್ಪ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು.

ಈ ಶೈಕ್ಷಣಿಕ ಪ್ರವಾಸವನ್ನು ಹಳೆ ವಿದ್ಯಾರ್ಥಿಗಳ ಬಳಗ ಮಿಲನ ಮತ್ತು ನವೋದಯ ಮತ್ತು ಮೊರಾರ್ಜಿ – ಉಚಿತ ತರಬೇತಿ ಶಿಬಿರ ಸಂಸ್ಥೆ ಕಡೆಯಿಂದ ಹಮ್ಮಿಕೊಳ್ಳಲಾಗಿತ್ತು.
ನವೋದಯ ಹಳೆ ವಿದ್ಯಾರ್ಥಿ ಪ್ರಕಾಶ್ ಜೋಯ್ಸ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಸಂಸ್ಥೆಯಿಂದ ಕಳೆದ ಮೂರು ವರ್ಷಗಳಿಂದ 375 ಮಕ್ಕಳು ಉಚಿತ ತರಬೇತಿ ಪಡೆದು, ಒಟ್ಟು 12 ಮಕ್ಕಳು ನವೋದಯ ಶಾಲೆಗೆ, 2 ಏಕಲವ್ಯ ಶಾಲೆಗೆ ಮತ್ತು 78 ಮಕ್ಕಳು ಮೊರಾರ್ಜಿ ವಸತಿ ಶಾಲೆಗಳಿಗೆ ತೇರ್ಗಡೆ ಆಗಿರುತ್ತಾರೆ.

ಖುಷಿಯಾದ ವಿಚಾರ ಏನಂದರೆ ಈ ಸಂಸ್ಥೆಯಿಂದ ಗ್ರಾಮೀಣ ಭಾಗದ ಮಕ್ಕಳು 2.98 ಕೋಟಿ ರೂಪಾಯಿ ಮೌಲ್ಯದ, ಶೈಕ್ಷಣಿಕ ಉಪಯೋಗ ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ಪಡೆದುಕೊಂಡಿದ್ದಾರೆ.
ಪ್ರಸಕ್ತ ವರ್ಷದಲ್ಲಿ ಈ ಸಂಸ್ಥೆ ಹೊಸನಗರ ತಾಲ್ಲೂಕಿನ ಹುಂಚ, ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರು, ಶಿಕಾರಿಪುರ ತಾಲ್ಲೂಕಿನ ನೆಲವಾಗಿಲು ಮತ್ತು ಸಾಗರ ತಾಲ್ಲೂಕಿನ ತ್ಯಾಗರ್ತಿ ಗ್ರಾಮಗಳಲ್ಲಿ ಕಾರ್ಯ ನಡೆಸುತ್ತಿದೆ.

ಈ ಕಾರ್ಯಕ್ರಮವು ಮಕ್ಕಳಲ್ಲಿ ತಮ್ಮ ಗುರಿಯನ್ನು ಸಾಧಿಸಲು ಮತ್ತಷ್ಟು ಪ್ರೇರಣೆ ನೀಡಿ, ನವೋದಯ ಶಾಲೆಗಳ ವೈಶಿಷ್ಟ್ಯಗಳನ್ನು ಕಂಡು ಕಲಿಯುವ ಒಂದು ಅವಕಾಶ ಮತ್ತು ವೇದಿಕೆ ಮಾದರಿಯಾಯಿತು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





