ಹೊಸನಗರ ; 2024-25ನೇ ಸಾಲಿನ ಹವಾಮಾನಾಧರಿತ ಬೆಳೆವಿಮೆ ಪರಿಹಾರ ನೀಡುವಲ್ಲಿ ಭಾರೀ ತಾರತಮ್ಯ ಕಂಡು ಬಂದಿದ್ದು, ಕೂಡಲೇ ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ರೈತರಿಗೆ ಆಗಿರುವ ನಷ್ಟವನ್ನು ಭರಿಸಲು ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿ ತಾಲೂಕಿನ ಮೂಡುಗೊಪ್ಪ – ನಗರ ಗ್ರಾಮದ ನೂರಾರು ರೈತರು ಒಗ್ಗೂಡಿ ಇಲ್ಲಿನ ನಾಡಕಛೇರಿ ಎದುರು ಅನಿರ್ಧಿಷ್ಟ ಕಾಲದ ಪ್ರತಿಭಟನೆಗೆ ಮುಂದಾದ ಘಟನೆ ಶುಕ್ರವಾರ ನಡೆಯಿತು.
ತಾಲೂಕು ಕೃಷಿ ಸಮಾಜದ ನಿರ್ದೇಶಕ ವಿನಾಯಕ ಚಕ್ಕಾರು ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನಗರ ಹೋಬಳಿಯ ಹಲವಾರು ರೈತರು ಪಾಲ್ಗೊಂಡು ಪ್ರತಿಭಟನೆಗೆ ವ್ಯಾಪಕ ಬೆಂಬಲ ವ್ಯಕ್ತಪಡಿಸಿದರು.
ಈ ವೇಳೆ ವಿನಾಯಕ ಚಕ್ಕಾರು ಮಾತನಾಡಿ, ರಾಜ್ಯಕ್ಕೆ ಬೆಳಕು ನೀಡಲು ಹಲವು ಜಲಾಶಯಗಳ ನಿರ್ಮಾಣದಿಂದ ಸರ್ವಸ್ವವನ್ನು ಕಳೆದುಕೊಂಡಿರುವ ಈ ಭಾಗದ ರೈತರಿಗೆ ಈ ಬಾರಿಯ ಬೆಳೆವಿಮೆ ಪರಿಹಾರದ ಮೊತ್ತ ಗಾಯದ ಮೇಲೆ ಬರೆ ಎಳೆದಂತಿದೆ. ಈ ಭಾಗದಲ್ಲಿ ಸಾಕಷ್ಟು ಮಳೆಯಾದರೂ ನಿರ್ಧಿಷ್ಟ ಪ್ರ‍್ರಮಾಣದ ಬೆಳೆ ರೈತರ ಕೈ ಸೇರುತ್ತಿಲ್ಲ. ಎಲೆಚುಕ್ಕಿ ರೋಗ, ಸುಳಿರೋಗದಿಂದ ಅಡಿಕೆ ಬೆಳೆಗಾರರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಆ ಕಾರಣಕ್ಕೆ ರೈತಾಪಿವರ್ಗ ಹವಾಮಾನಾಧಾರಿತ ಬೆಳೆವಿಮೆಗೆ ಮುಂದಾಗಿದ್ದು, ಈ ಬಾರಿಯ ಪರಿಹಾರದ ಮೊತ್ತ ರೈತರ ಭವಿಷ್ಯವನ್ನು ಡೋಲಾಯಮಾನವಾಗಿಸಿದೆ. ಮಳೆಮಾಪಕ ಯಂತ್ರಗಳ ಅಸಮರ್ಪಕ ನಿರ್ವಹಣೆ ಇದಕ್ಕೆ ಕಾರಣ ಎಂಬ ಸತ್ಯ ಬಹಿರಂಗಗೊಂಡರೂ ಅಧಿಕಾರಿ ನಿರ್ಲಕ್ಷ್ಯ ಎದ್ದು ತೋರಿದೆ ಎಂಬ ಗಂಭೀರ ಆರೋಪ ಮಾಡಿದರು.

ಮಾಮ್ಕೋಸ್ ಉಪಾಧ್ಯಕ್ಷ ಕೆ.ವಿ.ಕೃಷ್ಣಮೂರ್ತಿ ಮಾತನಾಡಿ, ಮಳೆಮಾಪಕಗಳ ದುಸ್ಥಿತಿ ಕುರಿತು ಈಗಾಗಲೇ ಜಿಲ್ಲಾ ಹಾಗೂ ರಾಜ್ಯ ಸರ್ಕಾರಗಳ ಗಮನ ಸೆಳೆಯಲಾಗಿತ್ತು. ರಾಜ್ಯ ವಿಪತ್ತು ನಿರ್ವಹಣೆ ಮಂಡಳಿ ಸಮಿತಿ ಜೊತೆ ಸುಸ್ಥಿತಿ ಕಾಪಾಡಲು ಮನವಿ ಮಾಡಿದ್ದರೂ ಯಾವುದೇ ಕ್ರಮಕ್ಕೆ ಮುಂದಾಗದಿರುವುದು ಈ ಎಲ್ಲಾ ಪ್ರಮಾದಕ್ಕೆ ಕಾರಣವೆಂದರು.
ಸ್ಥಳೀಯ ಮುಖಂಡ ಮಾಸ್ತಿಕಟ್ಟೆ ಸುಬ್ರಹ್ಮಣ್ಯ ಮಾತನಾಡಿ, ರೈತರ ಹೋರಾಟ ಪಕ್ಷಾತೀತವಾಗಿರಬೇಕು. ನಗರ ಹೋಬಳಿ ಗ್ರಾಮಸ್ಥರಿಗೆ ಜಲಾಶಯಗಳ ನಿರ್ಮಾಣವೇ ಶಾಪವಾಗಿ ಪರಿಣಮಿಸಿದೆ. ಇತ್ತ ಅರಣ್ಯದಲ್ಲೂ ವಾಸಿಸಲಾಗದೇ, ಅತ್ತ ಪಟ್ಟಣವನ್ನು ಸೇರಲಾಗದೇ ದಿನದೂಡುವ ಪರಿಸ್ಥಿತಿ ಈ ಭಾಗದ ಜನರದ್ದಾಗಿದ್ದು, ಬದುಕು ದುಸ್ತರ ಹಂತ ತಲುಪಿದೆ. ಬೆಳೆವಿಮೆಗೆ ಮಳೆಯ ದಾಖಲಾತಿ ಪ್ರಮಾಣ ಪ್ರಮುಖವಾಗಿದೆ. ಆದರೆ, ತಾಲೂಕಿನ 30 ಗ್ರಾಮ ಪಂಚಾಯತಿಗಳಲ್ಲಿ 25ರಲ್ಲಿ ಮಳೆಮಾಪಕಗಳಿದ್ದು 13 ಮಾತ್ರವೇ ಸೂಕ್ತ ರೀತಿಯಲ್ಲಿವೆ. ದೂರದ ಜೇನಿ ಗ್ರಾಮದ ಮಳೆಯ ಪ್ರಮಾಣವನ್ನು ನಿಟ್ಟೂರು, ಸಂಪೆಕಟ್ಟೆ, ಮತ್ತಿಮನೆ, ಅರಮನೆಕೊಪ್ಪ ಗ್ರಾಮದಲ್ಲಿ ಬಿದ್ದ ಮಳೆಗೆ ತಾಳೆ ಹಾಕಲಾಗಿದೆ. ಇದರಿಂದ, ರೈತರಿಗೆ ಸಿಗಬೇಕಿದ್ದ ಸೂಕ್ತ ಬೆಳೆವಿಮೆ ಪರಿಹಾರದ ಮೊತ್ತದಲ್ಲಿ ಸಾಕಷ್ಟು ತಾರತಮ್ಯ ಕಂಡುಬಂದಿದೆ. ಸಂಬಂಧಪಟ್ಟ ಇಲಾಖೆಗಳ ಅಧಿಕಾರಿ ವರ್ಗ ಈ ಕುರಿತು ನಿರ್ಲಕ್ಷ್ಯ ವಹಿಸಿರುವುದು ಎದ್ದು ಕಾಣುತ್ತಿದೆ. ಕೂಡಲೇ ಜಿಲ್ಲಾಡಳಿತ ಸೂಕ್ತಕ್ರಮಕ್ಕೆ ಮುಂದಾಗಬೇಕೆಂದರು.

ಈ ಮಧ್ಯೆ, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರೊಂದಿಗೆ ವಿಷಯ ಪ್ರಸ್ತಾಪಿಸಿದ್ದು, ರೈತರಿಗೆ ಯಾವುದೇ ರೀತಿಯಲ್ಲಿ ಅನ್ಯಾಯ ಆಗದಂತೆ ಅಧಿವೇಶನದಲ್ಲಿ ಚರ್ಚಿಸುವುದಾಗಿ ತಿಳಿಸಿದ್ದಾರೆ ಎಂದು ಪ್ರತಿಭಟನಕಾರರ ಗಮನಕ್ಕೆ ತಂದರು. ಅಲ್ಲದೆ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರೊಂದಿಗೆ ಫೋನ್ ಮೂಲಕ ಮಾತನಾಡಿ, ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರುವಂತೆ ಪ್ರತಿಭಟನಾಕಾರರು ಪಟ್ಟಹಿಡಿದಿದ್ದು, ತಾವುಗಳು ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಅಭಿಪ್ರಾಯ ವ್ಯಕ್ತಪಡಿಸುವಂತೆ ಕೋರಿದ ಬೆನ್ನಲ್ಲೆ, ಜಿಲ್ಲಾಧಿಕಾರಿಗಳು ಮಾತನಾಡಿ, ರೈತರ ಮನವಿ ಸ್ವೀಕರಿಸಿ, ಒಂದು ವಾರದೊಳಗೆ ರಾಜ್ಯ ಸರ್ಕಾರಕ್ಕೆ ಕಳುಹಿಸಿ, ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಿ, ರೈತರಿಗೆ ಅಗತ್ಯ ಪರಿಹಾರ ಕೊಡಿಸುವ ಭರವಸೆ ನೀಡಿದ ಹಿನ್ನಲೆಯಲ್ಲಿ ರೈತರು ತಮ್ಮ ಪ್ರತಿಭಟನೆಯನ್ನು ಹಿಂಪಡೆದರು.
ಪ್ರತಿಭಟನೆಯಲ್ಲಿ ಪ್ರಮುಖರಾದ ಕರುಣಾಕರ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ಮಂಜಾದ್ರಿಗೌಡ, ಸುನೀಲ್ ಉಡುಪ, ಸಾದಗಲ್ ಅಂಬರೀಷ್, ಹಲಸಿನಹಳ್ಳಿ ರಮೇಶ್, ಚಂದ್ರ ಬಸವನಬ್ಯಾಣ, ಹೆಚ್.ವೈ. ಸತೀಶ್, ರವಿಕುಮಾರ್ ಸುಳಗೋಡು, ಚಕ್ರವಾಕ ಸುಬ್ರಹ್ಮಣ್ಯ, ರಮಾಕಾಂತ್, ರವೀಚಿದ್ರ ಯಡೂರು, ನಗರ ನಿತೀನ್, ರಾಜೇಶ್ ಅಶ್ವಿನಿ, ಅಗರಗದ್ದೆ ನಾಗರಾಜ ಉಡುಪ, ಬೆಳ್ಳಕ್ಕಿ ಪುರುಷೋತ್ತಮ, ಎಂ.ವಿ.ಜಯರಾಂ, ಎಂ.ಪಿ.ರಮಾನಂದ್, ಸುಮಾ ಸುಬ್ರಹ್ಮಣ್ಯ, ಸುಧೀಂದ್ರ ಭಂಡಾರ್ಕರ್, ಬೈಸೆ ರಮೇಶ್, ನಾರಾಯಣ ಕಾಮತ್, ಬೈಸೆ ಮಹೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





