ಹೊಸನಗರ ; ತಾಲೂಕಿನ ಮಾಜಿ ಶಾಸಕ, ಹಿರಿಯ ರಾಜಕೀಯ ಮುತ್ಸದ್ದಿ ಬಿ.ಸ್ವಾಮಿರಾವ್ ಅವರ ಧರ್ಮಪತ್ನಿ ಪುಣ್ಯವತಿ (86) ಭಾನುವಾರ ವಯೋಸಹಜ ನಿಧನರಾದ ಹಿನ್ನಲೆಯಲ್ಲಿ ಸೊನಲೆ ಗ್ರಾಮದ ಅವರ ಸ್ವಗೃಹದಲ್ಲಿ ಸಾವಿರಾರು ಜನರು ಮೃತರ ಆತ್ಮಕ್ಕೆ ಶಾಂತಿ ಕೋರಿ ಅಂತಿಮ ದರ್ಶನ ಪಡೆದರು.

ಮೃತರು ಸ್ವಾಮಿರಾವ್ ಅವರೊಂದಿಗೆ ಆರು ದಶಕಗಳಿಗೂ ಹೆಚ್ಚುಕಾಲ ಬಾಳಸಂಗಾತಿಯಾಗಿದ್ದರು. ಅವರಿಗೆ ಮೂವರು ಪುತ್ರಿಯರು ಹಾಗು ಇಬ್ಬರು ಪುತ್ರರು ಇದ್ದಾರೆ. ಜೇಷ್ಠ ಪುತ್ರ ಸುರೇಶ್ ಸ್ವಾಮಿರಾವ್ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರಾಗಿದ್ದು, ದ್ವಿತೀಯ ಪುತ್ರ ಸುಬ್ರಹ್ಮಣ್ಯ ಸ್ವಾಮಿರಾವ್ ಸೊನಲೆ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಮಾಜಿ ಸಚಿವ ಹರತಾಳು ಹಾಲಪ್ಪ, ಮಾಜಿ ಗೃಹ ಸಚಿವ, ಶಾಸಕ ಆರಗ ಜ್ಞಾನೇಂದ್ರ, ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್, ಮಾಜಿ ಶಾಸಕ ಜಿ.ಡಿ.ನಾರಾಯಣಪ್ಪ, ಮಾಜಿ ಶಾಸಕ ಕರಿಯಣ್ಣ, ವಿಧಾನ ಪರಿಷತ್ ಮಾಜಿ ಸದಸ್ಯ, ಬಿಜೆಪಿ ಜಿಲ್ಲಾ ಮುಖಂಡ ಟಿ.ಡಿ.ಮೇಘರಾಜ್, ಮಾಜಿ ಎಂಎಲ್ ಸಿ ಪ್ರಸನ್ನ ಕುಮಾರ್, ಶಾಸಕ ಗೋಪಾಲಕೃಷ್ಣ ಬೇಳೂರು ಆಪ್ತ ಸಹಾಯಕ ಸಣ್ಣಕ್ಕಿ ಮಂಜು, ಸಾಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಸೆ ಚಂದ್ರಪ್ಪ, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಆನಂದಪುರ ಮುರುಘಮಠದ ಪೀಠಾಧ್ಯಕ್ಷ ಜಗದ್ಗುರು ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು, ಮೂಲೆಗದ್ದೆ ಮಠದ ಶ್ರೀ ಅಭಿನವ ಚನ್ನಬಸವ ಮಹಾಸ್ವಾಮಿಗಳು, ಗರ್ತಿಕೆರೆ-ನಿಟ್ಟೂರು ನಾರಾಯಣಗುರು ಮಹಾಸಂಸ್ಥಾನದ ಪೀಠಾಧ್ಯಕ್ಷ ಶ್ರೀ ರೇಣುಕಾನಂದ ಸ್ವಾಮೀಜಿ ಸೇರಿದಂತೆ ಹಲವರು ಮೃತರ ಅಂತಿಮ ದರ್ಶನ ಪಡೆದರು.

ಅಕ್ಷರಶಃ ಬಡವರ ಪಾಲಿನ ಅನ್ನಪೂರ್ಣೇಶ್ವರಿ ಎಂದೇ ಹೆಸರಾಗಿದ್ದ ಮೃತ ಪುಣ್ಯವತಿ ಅವರ ಅಂತಿಮ ವಿಧಿವಿಧಾನಗಳು ಮಲೆನಾಡು ದೀವರ ಜನಾಂಗದ ಸಂಪ್ರದಾಯದಂತೆ ಭಾನುವಾರ ಮಧ್ಯಾಹ್ನ ಸೊನಲೆಯ ಅವರ ಜಮೀನಿನಲ್ಲಿ ನೆರವೇರಿತು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹಾಗು ಸಂಸದ ಬಿ.ವೈ.ರಾಘವೇಂದ್ರ ಮೊಬೈಲ್ ಕರೆ ಮಾಡುವ ಮೂಲಕ ಮಾಜಿ ಶಾಸಕ ಸ್ವಾಮಿರಾವ್ ಹಾಗು ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ್ದು ವಿಶೇಷವಾಗಿತ್ತು.


ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





