ಕಳಪೆ ಕಾಮಗಾರಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ ; ಹಿರಿಯ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳಿಂದ ಸಮಗ್ರ ತನಿಖೆ ಅಗತ್ಯ

Written by Mahesha Hindlemane

Published on:

ರಿಪ್ಪನ್‌ಪೇಟೆ ; ರಾಜ್ಯ ಹೆದ್ದಾರಿ–1ರ ಹುಂಚ–ಕೋಣಂದೂರು ನಡುವಿನ ತಿರುವು ರಸ್ತೆ ಅಗಲೀಕರಣ ಕಾಮಗಾರಿ ಕಳಪೆ ಗುಣಮಟ್ಟದಿಂದ ನಡೆಯುತ್ತಿದ್ದು, ನೂತನ ನಿರ್ಮಾಣಕ್ಕಾಗಿ ಹಳೆಯ ರಸ್ತೆಯ ಕಿತ್ತು ಡಾಂಬರ್ ಮತ್ತು ಜಲ್ಲಿಗಳನ್ನು ಮರುಬಳಕೆ ಮಾಡುತ್ತಿದ್ದು ಇದಕ್ಕೆ ಕಾರಣರಾದವರ ವಿರುದ್ಧ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಕಾಂಗ್ರೆಸ್ ಹಿಂದುಳಿದ ವರ್ಗಗಳ ಸಮಿತಿಯ ಸಂಚಾಲಕ ಮಂಜುನಾಥ್ ಆಗ್ರಹಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ರಾಜ್ಯ ಸರ್ಕಾರವು ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಸ್ಪಷ್ಟ ಸೂಚನೆ ನೀಡಿದ್ದರೂ, ಗುತ್ತಿಗೆದಾರರು ಹಾಗೂ ಇಂಜಿನಿಯರ್‌ಗಳು ಪರಸ್ಪರ ಒಳಒಪ್ಪಂದದ ಮೂಲಕ ಕಳಪೆ ಕಾಮಗಾರಿಗೆ ಮುಂದಾಗಿದ್ದಾರೆ ಎಂಬ ಗಂಭೀರ ಆರೋಪವನ್ನು ಮಂಜುನಾಥ್ ಮಾಡಿದ್ದಾರೆ.

ಈ ನಿರ್ಲಕ್ಷ್ಯದಿಂದ ರಸ್ತೆ ಗುಣಮಟ್ಟ ಹದಗೆಟ್ಟು ಸಾರ್ವಜನಿಕರ ಸುರಕ್ಷತೆಗೆ ಅಪಾಯ ಉಂಟಾಗುವಷ್ಟೇ ಅಲ್ಲದೆ, ಸರ್ಕಾರದ ಮೇಲೆಯೂ ಜನರಲ್ಲಿ ತಪ್ಪು ಭಾವನೆ ಮೂಡುತ್ತಿದೆ ಎಂದು ಅವರು ತೀವ್ರವಾಗಿ ಟೀಕಿಸಿದರು.

ಕಾಮಗಾರಿಯಲ್ಲಿ ಬಳಸುತ್ತಿರುವ ಸಾಮಗ್ರಿಗಳ ಗುಣಮಟ್ಟ, ವಿನ್ಯಾಸ ಅನುಷ್ಠಾನ, ಮೇಲ್ವಿಚಾರಣೆಯ ಲೋಪ ಹಾಗೂ ಪ್ರಮಾಣಪತ್ರಗಳ ಪಾರದರ್ಶಕತೆ ಎಲ್ಲಾ ವಿಚಾರಗಳನ್ನೂ ಒಳಗೊಂಡಂತೆ ಸಮಗ್ರ ತನಿಖೆ ನಡೆಸಬೇಕು. ತಪ್ಪಿತಸ್ಥ ಗುತ್ತಿಗೆದಾರರು ಮತ್ತು ಸಂಬಂಧಿತ ಇಂಜಿನಿಯರ್‌ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಈ ಕಳಪೆ ಕಾಮಗಾರಿಯ ಬಗ್ಗೆ ಸಂಬಂಧಪಟ್ಟ ಇಲಾಖೆಗೆ, ಮಂತ್ರಿಗಳಿಗೆ ಹಾಗೂ ಜಿಲ್ಲಾ ಮುಖ್ಯ ಅಧಿಕಾರಿಗಳಿಗೆ ಅಧಿಕೃತ ದೂರು ಸಲ್ಲಿಸಲಾಗುವುದೆಂದು ಮಂಜುನಾಥ್ ಮಾಧ್ಯಮಗಳ ಮೂಲಕ ತಿಳಿಸಿದ್ದಾರೆ.

ಸಾರ್ವಜನಿಕ ಹಣದ ದುರ್ಬಳಕೆಗೆ ಅವಕಾಶ ನೀಡದಂತೆ ಸರ್ಕಾರ ತಕ್ಷಣ ಮಧ್ಯ ಪ್ರವೇಶಿಸಬೇಕು ಎಂದು ಅವರು ಆಗ್ರಹಿಸಿದರು.

Leave a Comment