ಹೊಸನಗರ ; ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಜನರ ಮಧ್ಯೆಯಿದ್ದು ಜನಪರ ಕೆಲಸ ಮಾಡಿದರೆ ಒಳ್ಳೆಯದು. ಅದು ಬಿಟ್ಟು ಕೇಂದ್ರ ಸರ್ಕಾರದ ಅನುದಾನದಲ್ಲಿ ನಾನು ಶಂಕುಸ್ಥಾಪನೆ ಮಾಡಿರುವ ಕಾಮಗಾರಿಯನ್ನು ಪುನಃ ಗುದ್ದಲಿ ಪೂಜೆ ಮಾಡುವುದು ರಾಜ್ಯ ಸರ್ಕಾರ ನೀಡಿರುವ 5 ಕೋಟಿ ರೂ. ಅನುದಾನದಲ್ಲಿ ಕೆಲಸ ಮಾಡಿಸುತ್ತಿದ್ದೇವೆ ಎಂದು ಪತ್ರಿಕೆಗಳಿಗೆ ಪೋಸ್ ಕೊಡುವುದನ್ನು ಬಿಟ್ಟು ತಾಲ್ಲೂಕಿಗೆ ಬೇಕಾಗುವ ಜನಪರ ಕೆಲಸ ಮಾಡಲಿ ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದರು.

ಇಲ್ಲಿನ ಪೊಲೀಸ್ ಠಾಣೆ ಮುಂಭಾಗ ಇಂದು ಹೊಸನಗರ ತಾಲ್ಲೂಕಿನಲ್ಲಿ ಅಧಿಕಾರಿಗಳು ಶಾಸಕರ ಕೈಗೊಂಬೆಯಾಗಿ ಕೆಲಸ ಮಾಡುವುದರ ಜೊತೆಗೆ ಬಿಜೆಪಿ ಕಾರ್ಯಕರ್ತರ ಮೇಲೆ ಶಾಸಕರ ಕುಮ್ಮಕ್ಕಿನಿಂದ ಸುಳ್ಳು ಕೇಸ್ ಹಾಕುತ್ತಿರುವುದರ ವಿರುದ್ಧ ಬಿಜೆಪಿ ಪಕ್ಷದ ವತಿಯಿಂದ ಮಾಜಿ ಶಾಸಕ ಹರತಾಳು ಹಾಲಪ್ಪ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಧರಣಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವುದೇ ಅಧಿಕಾರ ಶಾಶ್ವತವಲ್ಲ. ಕಾಲ ಬದಲಾದಂತೆ ಕುರ್ಚಿಯು ಬದಲಾವಣೆಯಾಗುತ್ತದೆ. ಇದ್ದಾಗ ಒಳ್ಳೆಯ ಕೆಲಸ ಮಾಡಿದರೆ ಜನರಮನದಲ್ಲಿ ಶಾಶ್ವತವಾಗಿ ಉಳಿಯುತ್ತದೆ. ಅದು ಬಿಟ್ಟು ಬೇರೆಯವರು ಮಾಡಿಸಿದ, ಮಾಡಿಸುತ್ತಿರುವ ಕೆಲಸ ನಾನೆ ಮಾಡಿದ್ದು ಎಂದು ಹೇಳುವುದು ಎಷ್ಟು ಸರಿ. ಅದು ಅಲ್ಲದೇ ಉಪಕಾರ ಮಾಡುವ ಮನಸ್ಸಿದ್ದರೆ ಪಕ್ಷ ಪಾರ್ಟಿ ಬರುವುದಿಲ್ಲ ಎಲ್ಲರಿಗೂ ಉಪಕಾರ ಮಾಡಬೇಕು. ಅದು ಬಿಟ್ಟು ಬಿಜೆಪಿ ಕಾರ್ಯಕರ್ತರನ್ನು ಗುರಿಯಾಗಿಸಿ ಕೇಸ್ ಹಾಕುವುದು. ಬೇರೆ ಬೇರೆ ಪ್ರಕರಣದಲ್ಲಿ ಸಿಕ್ಕಿಸಿ ತೊಂದರೆ ನೀಡಿದರೆ ಬಿಜೆಪಿ ಕಾರ್ಯಕರ್ತರು ಬಲಿಷ್ಠರಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಗೊಡ್ಡು ಬೆದರಿಕೆಗಳಿಗೆ ಹೆದರುವುದಿಲ್ಲ. ಇರುವಷ್ಟು ದಿನ ಒಳ್ಳೆಯ ಕೆಲಸ ಮಾಡಲಿ ಎಂದರು.

ಧರಣಿ ನೇತೃತ್ವ ವಹಿಸಿದ ಬಿಜೆಪಿ ರಾಜ್ಯ ಉಪಾಧ್ಯಕ್ಷ, ಮಾಜಿ ಸಚಿವ ಹರತಾಳು ಹಾಲಪ್ಪ ಮಾತನಾಡಿ, ಡಿಸೆಂಬರ್ 31ರ ರಾತ್ರಿ ಸುಮಾರು 2 ಗಂಟೆಯ ಸಂದರ್ಭದಲ್ಲಿ ಮಾಧವಶೆಟ್ಟಿಗೆ ಬಿಜೆಪಿ ಕಾರ್ಯಕರ್ತರು ಹೊಡೆದಿದ್ದಾರೆ. ಕೊಲೆ ಮಾಡಲು ಸಂಚು ನಡೆಸಿದ್ದಾರೆ ಎಂದು ಮೂರು ಜನ ಬಿಜೆಪಿ ಕಾರ್ಯಕರ್ತರನ್ನು ಜೈಲಿಗೆ ಅಟ್ಟಿದ್ದು, ಇದರ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು. ಇದರಲ್ಲಿ ಪೊಲೀಸ್ ಇಲಾಖೆಯ ಹಾಗು ಶಾಸಕರ ಹಿಂಬಾಲಕರ ಪಾತ್ರ ಬಹಳ ಮುಖ್ಯವಾಗಿದ್ದು ತಕ್ಷಣ ಉನ್ನತ ಮಟ್ಟದ ತನಿಖೆ ನಡೆಸಬೇಕು. ಇಲ್ಲವಾದರೆ ಜಿಲ್ಲಾ ರಕ್ಷಣಾಧಿಕಾರಿಗಳ ಮುಂದೆ ಬಿಜೆಪಿ ಪಕ್ಷದವರು ಧರಣಿ ನಡೆಸಲಿದ್ದಾರೆ. ಅದೇ ರೀತಿ ಕೆಲವು ಭ್ರಷ್ಠ ಸರ್ಕಾರಿ ಅಧಿಕಾರಿಗಳು ಶಾಸಕರ ಕೈಗೊಂಬೆಯಾಗಿ ಕೆಲಸ ನಿರ್ವಹಿಸುತ್ತಿದ್ದು ಬಿಜೆಪಿ ಕಾರ್ಯಕರ್ತರಿಗೆ ಹಿಂಸೆ ನೀಡುತ್ತಿದ್ದಾರೆ. ನಮ್ಮಲ್ಲಿ ವಿದ್ಯುತ್ ಕೊರತೆಯಿಲ್ಲ ಎಂದು ಸಭೆಯಲ್ಲಿ ಶಾಸಕರ ಮುಂದೆ ಹೇಳುತ್ತಿದ್ದಾರೆ. ಆದರೆ ಹೊಸನಗರ ತಾಲ್ಲೂಕಿನಲ್ಲಿ ದಿನಕ್ಕೆ ನಾಲ್ಕೈದು ಬಾರಿ ವಿದ್ಯುತ್ ನಿಲುಗಡೆ ಮಾಡುತ್ತಾರೆ. ಮುಂದೆ ಬೇಸಿಗೆ ದಿನಗಳು ಬರುತ್ತಿರುವುದರಿಂದ ರೈತರ ಬೆಳೆಗಳಿಗೆ ತೊಂದರೆಯಾಗಲಿದೆ. ತಕ್ಷಣ ವಿದ್ಯುತ್ ಸಮಸ್ಯೆ ಬಗೆಹರಿಯಬೇಕು ಎಂದು ಆಗ್ರಹಿಸಿದರು.

ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಸಾಗರ ಕ್ಷೇತ್ರದ ಶಾಸಕರು ಅಧಿಕಾರಿಗಳನ್ನು ಮುಂದೆ ಬಿಟ್ಟು ತಮ್ಮ ಕಾರ್ಯಕರ್ತರ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದ್ದಾರೆ. ಡಿಸೆಂಬರ್ 31ರ ರಾತ್ರಿ ಮಾಜಿ ಶಾಸಕ ಬಿ.ಸ್ವಾಮಿರಾವ್ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು ತಂದೆಯ ಜೊತೆಯಲ್ಲಿ ಸುರೇಶ್ ಸ್ವಾಮಿರಾವ್ ಮತ್ತು ಸ್ನೇಹಿತರು ಇದ್ದು ಅಲ್ಲಿಗೆ ಕಾಂಗ್ರೆಸ್ ಮುಖಂಡ ಶಾಸಕರ ಭಂಟ ಮಾಧವಶೆಟ್ಟಿಗೆ ರಾತ್ರಿ ಎರಡೂವರೆ ಗಂಟೆಗೆ ಸತ್ಯಾಗ್ರಹ ನಡೆಸುವ ಸ್ಥಳಕ್ಕೆ ಬರುವ ಅಗತ್ಯವೇನಿತ್ತು. ಅದು ಅಲ್ಲದೇ ಅಲ್ಲಿ ಸಣ್ಣಪುಟ್ಟ ಗಲಾಟೆ ನಡೆದಿದೆ ಪೊಲೀಸ್ ಕೇಸಿನಲ್ಲಿ ಕುಂದಾಪುರದಿಂದ ಬೆಂಗಳೂರಿಗೆ ಹೋಗುತ್ತಿದ್ದೆ ಬೆಲೆ ಬಾಳುವ ಚಿನ್ನ ಕದ್ದಿದ್ದಾರೆ ಎಂದು ದೂರು ದಾಖಲಿಸಿದ್ದು ಇದರ ಬಗ್ಗೆ ಸಮಗ್ರ ತನಿಖೆ ನಡೆಸದೆ ಪೊಲೀಸ್ ಇಲಾಖೆ ಬಿಜೆಪಿ ಕಾರ್ಯಕರ್ತರ ವಿರುದ್ಧ ಕೇಸ್ ಹಾಕಿದ್ದಾರೆ. ಸಮಗ್ರ ತನಿಖೆ ನಡೆಸಲಿ ನ್ಯಾಯ ಕೊಡಿಸುವವರೆಗೆ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದರು.

ಈ ಧರಣಿ ಪ್ರತಿಭಟನೆಯಲ್ಲಿ ಶಿವಮೊಗ್ಗ ಶಾಸಕ ಚನ್ನಬಸಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ಟಿ.ಡಿ ಮೇಘರಾಜ್, ಶಿವರಾಜ್, ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಭಾಗವಹಿಸಿ ರಾಜ್ಯದಲ್ಲಿ ಕಾಂಗ್ರೆಸ್‌ನ ಆಡಳಿತದ ವಿರುದ್ಧ ಮಾತನಾಡಿದರು.

ಎಎಸ್‌ಪಿ ಎ.ಡಿ ಕಾರಿಯಪ್ಪ, ಹೊಸನಗರ ತಹಸೀಲ್ದಾರ್ ಭರತ್‌ರಾಜ್, ಮೆಸ್ಕಾಂ ಇಂಜಿನಿಯರ್ ಮಾಯನಗೌಡ, ಆರ್.ಎಫ್.ಓ ಅನಿಲ್‌ಕುಮಾರ್, ಡಿಎಸ್‌ಪಿ ಅರವಿಂದ್ ಕಲ್ಗುಚ್ಚಿರವರಿಗೆ ಈ ಸಂದರ್ಭದಲ್ಲಿ ಮನವಿ ಪತ್ರ ಸಲ್ಲಿಸಿ ತನಿಖೆಗೆ ಆಗ್ರಹಿಸಿದರು.

ಬಿಜೆಪಿ ಮಂಡಲದ ಅಧ್ಯಕ್ಷ ಎನ್.ಸತೀಶ್, ಆರ್.ಟಿ ಗೋಪಾಲ್, ಬಿಜೆಪಿ ತಾಲ್ಲೂಕು ಪ್ರಭಾರಿ ಪದ್ಮಿನಿ, ಎನ್.ಆರ್ ದೇವಾನಂದ್, ಗಣಪತಿ ಬಿಳಗೋಡು, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ವರ್ತೆಶ್, ಕೆ.ವಿ. ಕೃಷ್ಣಮೂರ್ತಿ, ಆಲವಳ್ಳಿ ವೀರೇಶ್, ಉಮೆಶ್ ಕಂಚುಗಾರ್, ಎಂ.ಎನ್ ಸುಧಾಕರ್, ಯುವರಾಜ್, ಹಾಲಗದ್ದೆ ಉಮೇಶ್, ಶ್ರೀಪತಿರಾವ್, ಅಭಿಲಾಷ್, ಮಂಜುನಾಥ ಸಂಜೀವ, ಸತ್ಯನಾರಾಯಣ, ವಿಜಯಕುಮಾರ್, ಮಂಡಾನಿ ಮೋಹನ್, ನಾಗಾರ್ಜುನ ಇನ್ನೂ ಮುಂತಾದವರು ಉಪಸ್ಥಿತರಿದ್ದರು.


ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





