ರಿಪ್ಪನ್‌ಪೇಟೆ ; ಬಿಎಸ್‌ಎನ್‌ಎಲ್ (BSNL) ನೆಟ್‌ವರ್ಕ್ ಸಮಸ್ಯೆಯಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಂಚ ಗ್ರಾಮದ ಸಾರ್ವಜನಿಕರು ತಮ್ಮ ಆಕ್ರೋಶವನ್ನು ವಿಭಿನ್ನ ರೀತಿಯಲ್ಲಿ ವ್ಯಕ್ತಪಡಿಸಿದ್ದಾರೆ.
ಬಿಎಸ್‌ಎನ್‌ಎಲ್ ಪ್ರತಿಕೃತಿಯ ಮೇಲೆ ‘ಬಿಎಸ್‌ಎನ್‌ಎಲ್‌ಗೆ ಭಾವಪೂರ್ಣ ಶ್ರದ್ಧಾಂಜಲಿ’ ಎಂಬ ಪ್ಲೆಕ್ಸ್ ಅನ್ನು ಹೊಂಬುಜ ಮಠಕ್ಕೆ ತೆರಳುವ ರಸ್ತೆಯಲ್ಲಿ ಅಳವಡಿಸಿದ್ದಾರೆ.

ಇಲ್ಲಿ ಬಳಸಿರುವ “ನೆಟ್‌ವರ್ಕ್‌ಗೆ ಭಾವಪೂರ್ಣ ಶ್ರದ್ಧಾಂಜಲಿ” ಎಂಬ ಪದಬಳಕೆ ನಿಜವಾದ ಶ್ರದ್ಧಾಂಜಲಿ ಅಲ್ಲ, ಬದಲಾಗಿ ಇಂಟರ್‌ನೆಟ್, ಮೊಬೈಲ್ ಹಾಗೂ ಇತರೆ ಸಂವಹನ ಸೇವೆಗಳ ಸಂಪೂರ್ಣ ವೈಫಲ್ಯಕ್ಕೆ ಜನರು ವ್ಯಕ್ತಪಡಿಸುವ ವ್ಯಂಗ್ಯಮಿಶ್ರಿತ ನಿರಾಸೆಯ ಪ್ರತಿಬಿಂಬವಾಗಿದೆ.
ನೆಟ್‌ವರ್ಕ್ ಸಂಪೂರ್ಣ ಸ್ಥಗಿತಗೊಂಡಂತೆಯೇ ಇರುವ ಪರಿಸ್ಥಿತಿಯಿಂದ ದಿನನಿತ್ಯದ ಕೆಲಸಗಳು, ಆನ್‌ಲೈನ್ ಸೇವೆಗಳು, ವಿದ್ಯಾರ್ಥಿಗಳ ಅಧ್ಯಯನ ಹಾಗೂ ರೈತರ ಸಂಪರ್ಕ ವ್ಯವಸ್ಥೆ ತೀವ್ರವಾಗಿ ಅಸ್ತವ್ಯಸ್ತಗೊಂಡಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿ ಈ ಪ್ಲೆಕ್ಸ್ ಅಳವಡಿಸಿದ್ದಾರೆ.

ಹುಂಚ ವ್ಯಾಪ್ತಿಯ ಗ್ರಾಮಗಳಿಗೆ ಸಂಪರ್ಕ ಸೇತು ಆಗಿದ್ದ BSNL ಟವರ್ ಕಾರ್ಯ ಮಾಡದೆ ತಿಂಗಳುಗಳು ಕಳೆದಿದೆ. ಯಾರಿಗೆ ದೂರು ನೀಡಿದರು ಏನೂ ಪ್ರಯೋಜನವಾಗದ ಕಾರಣ BSNL ನೆಟ್‌ವರ್ಕ್‌ಗೆ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಸಲಾಗಿದೆ ಎಂದು ಗ್ರಾಮಸ್ಥರು ಹುಂಚ ಟವರ್ ನೆನೆದು ನೋವಿನ ಮಾತುಗಳನ್ನು ಮಾಧ್ಯಮದವರ ಮುಂದೆ ಆಡಿದ್ದಾರೆ.
ಕೊನೆಯದಾಗಿ BSNL ನೆಟ್‌ವರ್ಕ್‌ಗೆ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಸಿ 2 ನಿಮಿಷದ ಮೌನಾಚರಣೆ ಮಾಡಿದರು. ಇನ್ನಾದರೂ ಸರ್ಕಾರಿ ಸಂಸ್ಥೆ ಉಳಿಸಿ ಮತ್ತು ಗ್ರಾಹಕರ ಸಮಸ್ಯೆ ಅಳಿಸಿ ಎಂದು ಘೋಷಣೆಗಳನ್ನು ಈ ವೇಳೆ ನೊಂದ ಗ್ರಾಮಸ್ಥರು ಕೂಗಿದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





