ಹೊಸನಗರ : ವಿಧಾನಸಭಾ ಕ್ಷೇತ್ರದ ಮರು ಸ್ಥಾಪನೆಗಾಗಿ ಆಗ್ರಹ ತಾಲ್ಲೂಕಿನ 30 ಗ್ರಾಮ ಪಂಚಾಯತಿಗಳಿಗೆ ಸೈಕಲ್ ಮೂಲಕ ಜಾಥಾ ಕೈಗೊಂಡು ಯಶಸ್ವಿಯಾಗಿ ಪರ್ಯಟನೆ ಮುಗಿಸಿ ಪ್ರತಿ ಗ್ರಾಮ ಪಂಚಾಯತಿಯಿಂದ ಹಕ್ಕೊತ್ತಾಯ ಪತ್ರ ಪಡೆದು ಸರ್ಕಾರದ ಗಮನ ಸೆಳೆಯಲು ಪ್ರಾಮಾಣಿಕ ಪ್ರಯತ್ನ ಮಾಡಿದ ತಾಲ್ಲೂಕಿನ ಮೂಡುಗೊಪ್ಪ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ, ಯುವ ಹೋರಾಟಗಾರ ಕರುಣಾಕರ ಶೆಟ್ಟಿ ಅವರನ್ನು ಕ್ಷೇತ್ರದ ಮಾಜಿ ಶಾಸಕ, 95ರ ಹರೆಯದ ಹಿರಿಯ ಸಮಾಜವಾದಿ, ರಾಜಕೀಯ ಮುತ್ಸದಿ ಬಿ.ಸ್ವಾಮಿರಾವ್ ಸಮ್ಮುಖದಲ್ಲಿ, ಮೂಲೆಗದ್ದೆ ಮಠದ ಸದಾನಂದ ಶಿವಯೋಗಾಶ್ರಮ ಅಭಿನವ ಚನ್ನಬಸವ ಸ್ವಾಮೀಜಿ ಅವರು ಶೆಟ್ಟರಿಗೆ ಆತ್ಮೀಯವಾಗಿ ಸನ್ಮಾನಿಸಿ, ಆಶೀರ್ವದಿಸುವ ಮೂಲಕ ಸೈಕಲ್ ಜಾಥಾವನ್ನು ಗುರುವಾರ ಸಂಜೆ ಸಂಪನ್ನಗೊಳಿಸಿದರು.
ಮೇಲಿನಬೆಸಿಗೆ ಗ್ರಾಮ ಪಂಚಾಯತಿ ಆವರಣದಲ್ಲಿ ಸಂಪನ್ನಗೊಂಡ ಸೈಕಲ್ ಜಾಥವು ಸರ್ಕಾರಗಳಿಗೆ ಮುಂದೆ ವಿಧಾನಸಭಾ ಕ್ಷೇತ್ರದ ಮರು ಸ್ಥಾಪನೆಗೆ ಆಗ್ರಹ ಪೂರ್ವಕ ಹೋರಾಟದ ರೂಪುರೇಷೆಗಳಿಗೆ ಇದು ನಾಂದಿ ಹಾಡಿತು.
ಶೀಘ್ರದಲ್ಲೇ ಶ್ರೀಗಳ ನೇತೃತ್ವದಲ್ಲಿ ಹೊಸನಗರದಿಂದ ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿಗೆ ತಾಲೂಕಿನ ಜನತೆ ಜಾತಿ-ಮತ- ಧರ್ಮ ಹಾಗೂ ಪಕ್ಷ ಭೇದವಿಲ್ಲದೆ ಕಾಲ್ನಡಿಗೆ ಜಾಥ ನಡೆಸುವುದಾಗಿ ಒಕ್ಕೊರಲಿನ ಧ್ವನಿ ಕೇಳಿ ಬಂತು.
ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ ಕ್ಷೇತ್ರ ಮರು ಸ್ಥಾಪನೆಗೆ ತಾವು ಕಲೆ ಹಾಕಿರುವ ಅಗತ್ಯ ದಾಖಲೆಗಳನ್ನು ಪ್ರದರ್ಶಿಸಿ ಸ್ವಾಮೀಜಿ ಅವರಿಗೆ ಹಸ್ತಾಂತರ ಮಾಡಿದರು. ಅಲ್ಲದೇ ಹೋರಾಟಕ್ಕೆ ಎಲ್ಲಾ ಬಗೆಯ ಸಹಕಾರ ನೀಡುವ ಭರವಸೆ ನೀಡಿದರು.

ಶೀಘ್ರದಲ್ಲಿ ಪ್ರಮುಖರು ಮತ್ತೊಮ್ಮೆ ಸಭೆ ಸೇರಿ ಹೋರಾಟದ ಸಾಧಕ-ಬಾಧಕ ಕುರಿತು ಚರ್ಚಿಸಲು ತೀರ್ಮಾನ ಕೈಗೊಂಡರು.
ಈ ವೇಳೆ ಪ್ರಮುಖರಾದ ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀನಿವಾಸ್ ರೆಡ್ಡಿ, ಜಿ.ಎನ್. ಪ್ರವೀಣ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೋಡೂರು ಚಂದ್ರಮೌಳಿ, ಎನ್.ಆರ್. ದೇವಾನಂದ್, ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ಅರಸಾಳು ಸಾಕಮ್ಮ, ಗ್ರಾ.ಪಂ. ಸದಸ್ಯೆ ನಿರ್ಮಲ, ಮಹೇಂದ್ರ ಶೇಟ್, ಸದಾಶಿವ ಶ್ರೇಷ್ಠಿ, ಜಯನಗರ ಪ್ರಹ್ಲಾದ್, ಗುರು ಮೊದಲಾದವರು ಉಪಸ್ಥಿತರಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





