ಹೊಸನಗರ : ಏಕಾಂಗಿಯಾಗಿ ವಾಸಿಸುವ ಹಿರಿಯ ನಾಗರೀಕರಿಗೆ ವಿಶೇಷ ಭದ್ರತೆ ಒದಗಿಸುವ ರಾಜ್ಯ ಪೊಲೀಸ್ ಇಲಾಖೆಯ ಆಸರೆ ಕಾರ್ಯಕ್ರಮಕ್ಕೆ ಹಿರಿಯ ನಾಗರೀಕರಿಗೆ ಬಲ ಸಿಕ್ಕಿದಂತಾಗಿದೆ ಎಂದು ಹೊಸನಗರ ತಾಲ್ಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಡಾ. ದಿನಮಣಿ ಹೇಳಿದರು.
ಇಲ್ಲಿನ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಶಂಕರ ಗೌಡ ಪಾಟೀಲ್ ಹಾಗೂ ಪೊಲೀಸ್ ಇಲಾಖೆಯ ಎಲ್ಲ ಸಿಬ್ಬಂದಿಗಳಿಗೆ,, ಪೊಲೀಸ್ ಇಲಾಖೆಯ ಮಹಾ ನಿರ್ದೇಶಕರಿಗೆ ಅಭಿನಂದನಾ ಪತ್ರ ಸಲ್ಲಿಸಿ ಮಾತನಾಡಿದ ಅವರು, ಇತ್ತಿಚಿನ ದಿನಗಳಲ್ಲಿ ಹಳ್ಳಿಗಳಲ್ಲಿ ಅದರಲ್ಲೂ ನಮ್ಮ ಮಲೆನಾಡು ಭಾಗದ ಕುಗ್ರಾಮಗಳಲ್ಲಿ ಒಂಟಿ ಮನೆಗಳಲ್ಲಿ ವಾಸಿಸುವ ಹಿರಿಯ ನಾಗರೀಕರುಗಳು ಕಳ್ಳತನ, ಕೊಲೆ, ಸುಲಿಗೆ ಮೊಬೈಲ್ ವಂಚನೆ ಮೊದಲಾದ ಕುಕೃತ್ಯಗಳಿಗೆ ಒಳಗಾಗಿ ಭಯದಿಂದ ದಿನ ಕಳೆಯುವ ಸನ್ನಿವೇಶಗಳು ಹೆಚ್ಚುತ್ತಿದ್ದು ಈ ಬಗ್ಗೆ ಗಮನ ಹರಿಸಿರುವ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಪೊಲೀಸ್ ಇಲಾಖೆ ಆಸರೆ ಎಂಬ ವಿಶೇಷ ಆದೇಶವನ್ನು ಹೊರಡಿಸಿರುವುದು ಒಂದು ಆಶಾದಾಯಕ ಕ್ರಮವಾಗಿದೆ. ಇದಕ್ಕಾಗಿ ಪೊಲೀಸ್ ಇಲಾಖೆಗೆ ನಮ್ಮಂತ ಹಿರಿಯರು ಅಭಿನಂದಿಸಲು ಹೆಮ್ಮೆಯಾಗುತ್ತದೆ ಎಂದರು.
ಅಭಿನಂದನಾ ಪತ್ರ ಸ್ವಿಕರಿಸಿ ಮಾತನಾಡಿದ ಸಬ್ಇನ್ಸ್ಪೆಕ್ಟರ್ ಶಂಕರ ಗೌಡ ಪಾಟೀಲ್ ಮಹಾ ನಿರ್ದೇಶಕರ ಆದೇಶ ಹಿರಿಯ ನಾಗರೀಕರಿಗೆ ಮಹತ್ವದಾಗಿದೆ. ಏಕಾಂಗಿ ಹಿರಿಯ ನಾಗರೀಕರಿಗೆ ಖಾಕಿ ಆಸರೆ ಎಂದಿಗೂ ಇರುತ್ತದೆ. ಕೇವಲ ಯೋಗಕ್ಷೇಮ ಸುರಕ್ಷತೆ ಖಚಿತಪಡಿಸಿಕೊಳ್ಳುವುದಕ್ಕೆ ನಮ್ಮ ಇಲಾಖೆ ಸೀಮಿತವಾಗಿಲ್ಲ. ನಮ್ಮ ಹಿಂದಿನ ಕಾರ್ಯಕ್ರಮವಾದ ಮನೆ-ಮನೆ ಪೊಲೀಸ್ ಯಶಸ್ವಿಯಾಗಿದೆ. ಅದರಂತೆ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವುದು ನಮ್ಮ ಉದ್ಧೇಶವಾಗಿದೆ. ನಮ್ಮ ಪೋಲಿಸರು ಮನೆಗಳಿಗೆ ಭೇಟಿ ನೀಡಿದಾಗ ಹಿರಿಯರು ಮತ್ತು ಮಹಿಳೆಯರು ಏನಾದರೂ ಸಮಸ್ಯೆ ಎದುರಿಸುತ್ತಿದ್ದರೆ ಸಂಬಂಧಪಟ್ಟ ಕಲ್ಯಾಣ ಇಲಾಖೆ ಜೊತೆ ಸಮನ್ವಯ ಸಾಧಿಸಿ ಅವರ ಸಮಸ್ಯೆ ಪರಿಹರಿಸಬೇಕು. ಇವುಗಳಲ್ಲಿ ಆರೋಗ್ಯ ಸೇವೆ, ಅಂಬುಲೆನ್ಸ್ ಸೇವೆ ಸೇರಿದಂತೆ ಪ್ರತಿಯೊಂದು ನೆರವೂ ಒಳಗೊಂಡಿರುತ್ತದೆ. ಹಿರಿಯ ನಾಗರೀಕರಿಗೆ ಯಾವುದೇ ತೊಂದರೆಯಾದಲ್ಲಿ ತಕ್ಷಣ ನಮ್ಮ ಇಲಾಖೆಯ ಗಮನಕ್ಕೆ ತಂದರೆ ತುರ್ತು ಕ್ರಮ ಕೈಗೊಂಡು ಹಿರಿಯ ನಾಗರೀಕರಿಗೆ ಸ್ವಂದಿಸುತ್ತೇವೆಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ನಿವೃತ್ತ ನೌಕರರ ಸಂಘದ ಕಾರ್ಯದರ್ಶಿ ಅನಂತ ಪದ್ಮನಾಭ, ನಿರ್ದೆಶಕರಾದ ಮಹಾಬಲ, ರಂಗನಾಥ್, ಲೋಕೇಶ್, ಕುಬೇಂದ್ರಪ್ಪ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





