ರಿಪ್ಪನ್ಪೇಟೆ ; ಹೊಸನಗರ ವಿಧಾನಸಭಾ ಕ್ಷೇತ್ರ ಮರುಸ್ಥಾಪನೆ ಮಾಡುವುದರೊಂದಿಗೆ ತಾಲ್ಲೂಕು ಅಭಿವೃದ್ದಿಗೆ ಹೆಚ್ಚು ಸಹಕಾರಿಯಾಗುವುದು. ಮತ್ತೊಮ್ಮೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಮರುಪರಿಶೀಲನೆ ನಡೆಸಿ ಹೊಸನಗರ ವಿಧಾನಸಭಾ ಕ್ಷೇತ್ರವನ್ನಾಗಿ ಘೋಷಿಸುವಂತೆ ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಂ.ಬಿ.ಲಕ್ಷ್ಮಣಗೌಡ ಆಗ್ರಹಿಸುವುದರೊಂದಿಗೆ ಈಗಾಗಲೇ ಹೊಸನಗರ ಕ್ಷೇತ್ರ ಮರುಸ್ಥಾಪನೆ ಕೂಗಿಗೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದರು.
ರಿಪ್ಪನ್ಪೇಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೊಸನಗರ ತಾಲ್ಲೂಕು ರಾಜ್ಯಕ್ಕೆ ಬೆಳಕು ನೀಡುವ ಉದ್ದೇಶದಿಂದ ಸಾಕಷ್ಟು ರೈತಾಪಿ ವರ್ಗ ಮನೆ-ಮಠ ಕಳೆದುಕೊಂಡು ನಿರಾಶ್ರಿತರಾಗುವುದರೊಂದಿಗೆ ತಮ್ಮ ಜೀವನೋಪಾಯಕ್ಕಾಗಿ ಸರ್ಕಾರದಿಂದ ಶಾಶ್ವತ ಪರಿಹಾರವೂ ಇಲ್ಲದೆ ಪರದಾಡುವಂತಾಗಿದ್ದಾರೆ.
ಶರಾವತಿ, ಮಡೆನೂರು, ಚಕ್ರಾವರಾಹಿ ಯೋಜನೆಯಿಂದಾಗಿ ವೀರಶೈವ ಲಿಂಗಾಯಿತರು ಒಕ್ಕಲಿಗರು, ಈಡಿಗರು, ಕುಣಬಿ ಹೀಗೆ ಸಣ್ಣ-ಪುಟ್ಟ ಜನಾಂಗದವರು ಡ್ಯಾಂ ನಿರ್ಮಾಣದಿಂದಾಗಿ ಮುಳುಗಡೆಯಾಗಿ ಊರು ತೊರೆಯುವಂತಾಗಿದ್ದು ಈ ಸಮಸ್ಯೆಗೆ ಸಿಲುಕಿ ನಲುಗಿದ ಅದೆಷ್ಟೋ ಕುಟುಂಬಗಳು ಈ ತನಕ ಸೌಲಭ್ಯಗಳಲ್ಲಿದೆ ವಂಚಿತರನ್ನಾಗಿ ಮಾಡಿದೆ. ಆದರೂ ಕೆಲವರು ತಾಲ್ಲೂಕಿನ ವಿವಿದೆಢೆಯಲ್ಲಿ ಅಲ್ಪಸ್ವಲ್ಪ ಜಮೀನು ಸಾಗುವಳಿ ಮಾಡಿಕೊಳ್ಳಲಾಗಿದ್ದರೂ ಕೂಡಾ ಅಕ್ರಮ ಸಕ್ರಮ ಯೋಜನೆಯಡಿ ನಿರಾಶ್ರಿತ ಕುಟುಂಬದವರಿಗೆ ಸರ್ಕರ ಜಮೀನು ಮಂಜೂರು ಮಾಡುವಲ್ಲಿ ಸಂಪೂರ್ಣ ವಿಫಲಗೊಳಿಸಿವೆ.
ರಾಜಕೀಯವಾಗಿ ಧ್ವನಿಯಿಲ್ಲದಂತೆ ಹೊಸನಗರ ತಾಲ್ಲೂಕು ಭೌಗೋಳಿಕವಾಗಿ ವಿಸ್ತಾರವಾಗಿದ್ದರೂ ಕೂಡಾ ಜನಸಂಖ್ಯೆಯನ್ನಾದರಿಸಿ ವಿಧಾನಸಭಾ ಕ್ಷೇತ್ರವನ್ನು ಹರಿದು ಹಂಚಿ ಸಾಗರ-ತೀರ್ಥಹಳ್ಳಿ ಕ್ಷೇತ್ರಗಳಿಗೆ ವಿಭಾಗಿಸಿರುವ ಕ್ರಮವನ್ನು ನಮ್ಮ ಸರ್ಕಾರ ಹಾಗೂ ಆಧಿಕಾರಿಗಳು ರಾಜಕೀಯ ಮುಖಂಡರುಗಳು ಧ್ವನಿ ಎತ್ತದಂತೆ ಮಾಡಿದ್ದಾರೆಂದು ತೀವ್ರ ಅಸಮದಾನ ವ್ಯಕ್ತಪಡಿಸಿದ ಅವರು, ಇನ್ನಾದರೂ ಈ ಕ್ಷೇತ್ರವನ್ನು ಮರುಸ್ಥಾಪಿಸುವುದರೊಂದಿಗೆ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ಆದ್ಯತೆ ನೀಡುವಂತಾಗಲು ಸರ್ಕಾರ ಮುಂದಾಗಬೇಕು ಎಂದು ತಾಲ್ಲೂಕು ಪಂಚಾಯಿತ್ ಮಾಜಿ ಸದಸ್ಯ ಹಾಗೂ ತಾಲ್ಲೂಕು ಒಕ್ಕಲಿಗರ ಸಂಘದ ಆಧ್ಯಕ್ಷ ಎಂ.ಬಿ.ಲಕ್ಷ್ಮಣ ಗೌಡ ಸರ್ಕಾರವನ್ನು ಒತ್ತಾಯಿಸಿದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





