ಬಾಳೆಹೊನ್ನೂರು ; ಮನುಷ್ಯ ಯಾವಾಗಲೂ ಸುಖವನ್ನೇ ಬಯಸುತ್ತಾನೆ. ಆದರೆ ಅದಕ್ಕೆ ಕಾರಣವಾಗಿರುವ ಅರಿವು ಆದರ್ಶಗಳಿಂದ ದೂರ ಇರುತ್ತಾನೆ. ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರೂ ಮೂಲ ಸಂಸ್ಕೃತಿ ಮರೆಯಬಾರದು. ಮೂಲ ಸಂಸ್ಕೃತಿ ನಿರ್ಲಕ್ಷಿಸಿದರೆ ಜೀವನದಲ್ಲಿ ಕಷ್ಟ ತಪ್ಪಿದ್ದಲ್ಲವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಮಂಗಳವಾರ ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವದ ಅಂಗವಾಗಿ ಜರುಗಿದ ಹುಣ್ಣಿಮೆ ವಸಂತೋತ್ಸವ ಮತ್ತು ಸುರಗಿ ಸಮಾರಾಧನಾ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಮನುಷ್ಯನಾಗಿ ಬಾಳುವುದು ಸುಲಭ. ಆದರೆ ಮಾನವೀಯತೆಯಿಂದ ನಡೆಯುವುದು ತುಂಬಾ ಕಷ್ಟ. ಜಾತಿ ಮತ ಭ್ರಾಂತಿಯಲ್ಲಿ ಶಾಂತಿ ಎಂದಿಗೂ ಸಿಗಲಾರದು. ಮೌಲ್ಯಗಳ ಉಳಿವು ಅಳಿವು ಮಾನವನ ಆಚರಣೆಯಲ್ಲಿದೆ. ನೀತಿವಂತರು ನಿರಾಶರಾಗದೇ ಧರ್ಮವಂತರಾಗಿ ನಡೆಯಬೇಕಾಗುತ್ತದೆ. ನೀತಿ ಸಂಹಿತೆಯನ್ನು ಅರಿತವನಿಗೆ ನೆಮ್ಮದಿಯ ಫಲ. ಬರುವ ಅಡ್ಡಿ ಆತಂಕಗಳನ್ನು ದಿಟ್ಟತನದಿಂದ ಎದುರಿಸಿ ಶುದ್ಧ ಮನಸ್ಸಿನಿಂದ ಮುನ್ನಡೆದರೆ ಶ್ರೇಯಸ್ಸು ಪ್ರಾಪ್ತವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಮನಸ್ಸನ್ನು ಕೂಡಿಸುವ ಮತ್ತು ಧರ್ಮ ಕಟ್ಟುವ ಕಾರ್ಯ ಅಮೋಘವಾದುದು. ಸಮಾಜ ಘಾತಕ ವ್ಯಕ್ತಿಗಳ ಮಾತಿಗೆ ಮರುಳಾಗಬಾರದು. ದೈವ ಸಾನ್ನಿಧ್ಯದಲ್ಲಿ ನಮ್ಮ ಭಕ್ತಿ ಶ್ರದ್ಧೆ ನಿಷ್ಠೆ ಗಟ್ಟಿಯಾಗಿದ್ದರೆ ಬದುಕು ಉಜ್ವಲಗೊಳ್ಳುತ್ತದೆ ಎಂದರು.
ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಕೊನೆಯ ದಿನ ಹುಣ್ಣಿಮೆ ವಸಂತೋತ್ಸವ ಆಚರಿಸಿ ಭದ್ರಾ ನದಿ ತೀರದಲ್ಲಿ ಸುರಗಿ ಸಮಾರಾಧನಾ ಅಂಗವಾಗಿ ಇಷ್ಟಲಿಂಗ ಮಹಾಪೂಜಾ ನೆರವೇರಿಸಿ ಶ್ರೀ ರಂಭಾಪುರಿ ಜಗದ್ಗುರುಗಳು ಭಕ್ತ ಸಂಕುಲಕ್ಕೆ ಶುಭ ಹಾರೈಸಿದರು. ಸಹಸ್ರಾರು ಜನರು ಪೂಜೆಯಲ್ಲಿ ಪಾಲ್ಗೊಂಡು ಧನ್ಯತೆ ಪಡೆದರು.

ಎಡೆಯೂರು, ಸಿದ್ಧರಬೆಟ್ಟ, ಮಳಲಿ, ಚಿಮ್ಮಲಗಿ, ಸುಳ್ಳ, ಸಗರ, ಮೈಸೂರು, ತೆಂಡೇಕೆರೆ ಶ್ರೀಗಳನ್ನು ಮೊದಲ್ಗೊಂಡು 25ಕ್ಕೂ ಹೆಚ್ಚು ಮಠಾಧೀಶರು ಪಾಲ್ಗೊಂಡಿದ್ದರು.
ಏಕಕಾಲದಲ್ಲಿ ಬಂದ ಎಲ್ಲ ಭಕ್ತರಿಗೆ ಅಬ್ಬಿಗೇರಿ ಹಿರೇಮಠದ ಭಕ್ತರಿಂದ ಅನ್ನ ದಾಸೋಹ ನೆರವೇರಿತು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





