ಹೊಸನಗರ : ತಾಲ್ಲೂಕಿನಲ್ಲಿ ಆರೋಗ್ಯ ವ್ಯವಸ್ಥೆಯ ಗಂಭೀರ ಕೊರತೆಗಳನ್ನು ಎದುರಿಸುತ್ತಿರುವ ಪರಿಸ್ಥಿತಿಯನ್ನು ವಿರೋಧಿಸಿ, ಸಾಮಾಜಿಕ ಹೋರಾಟಗಾರ ನಿತಿನ್ ನಗರ ಅವರು ನಾಳೆ (ಜುಲೈ 18) ರಂದು ಬೆಳಿಗ್ಗೆ 9 ಗಂಟೆಯಿಂದ ಹೊಸನಗರ ಸಾರ್ವಜನಿಕ ಆಸ್ಪತ್ರೆ ಮುಂದೆ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಿದ್ದಾರೆ.
ತಾಲೂಕು ಕೇಂದ್ರದಲ್ಲಿ ಅತ್ಯುತ್ತಮ ಸೌಲಭ್ಯಗಳೊಂದಿಗೆ ಹೆರಿಗೆ ಆಸ್ಪತ್ರೆಯ ಕೊರತೆ ಇರುವುದರಿಂದ, ಪ್ರತಿ ವರ್ಷ ನೂರಾರು ಗರ್ಭಿಣಿಯರು ಸಾಗರ, ತೀರ್ಥಹಳ್ಳಿ, ಶಿವಮೊಗ್ಗ ಸೇರಿದಂತೆ ದೂರದ ಆಸ್ಪತ್ರೆಗಳಿಗೆ ಚಿಕಿತ್ಸೆ ಪಡೆಯಲು ಹೋಗುವ ಅನಿವಾರ್ಯತೆ ಎದುರಿಸುತ್ತಿದ್ದಾರೆ. ಈ ಕಾರಣದಿಂದಾಗಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ ಕೆಲವು ಗರ್ಭಿಣಿಯರು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಹೆರಿಗೆ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡದ ಕಾರಣ ಕೋಡೂರು ವ್ಯಾಪ್ತಿಯ ಸುಮಾ ಎಂಬ ಗರ್ಭಿಣಿಯ ಸಾವಿನ ಪ್ರಕರಣವು ಈ ಹೋರಾಟಕ್ಕೆ ಮತ್ತೊಂದು ಪ್ರೇರಣೆಯಾಗಿದೆ.
ಇದೇ ವೇಳೆ, ತಾಲ್ಲೂಕಿನ ಸುತ್ತಮುತ್ತಲಿನ ಸುಮಾರು 80% ಪ್ರಾಥಮಿಕ ಆರೋಗ್ಯ ಕೇಂದ್ರಗಳು ವೈದ್ಯರು ಮತ್ತು ಸಿಬ್ಬಂದಿಗಳ ಕೊರತೆಯಿಂದ ಬಳಲುತ್ತಿವೆ. ಹೊಸನಗರದ ಅನೇಕ ಗ್ರಾಮಗಳು ಮೊಬೈಲ್ ನೆಟ್‌ವರ್ಕ್ ಹಾಗೂ ಸಾರಿಗೆ ಸಂಪರ್ಕದ ಕೊರತೆಯಿಂದ ದುರ್ಗಮ ಪ್ರದೇಶಗಳಾಗಿ ಪರಿಗಣಿಸಲ್ಪಟ್ಟಿದ್ದು, ಹಾವು ಕಡಿತ, ಹೃದಯಾಘಾತ, ರಸ್ತೆ ಅಪಘಾತಗಳಂತಹ ತುರ್ತು ಪರಿಸ್ಥಿತಿಗಳಲ್ಲಿ ತಕ್ಷಣವೇ ಸೂಕ್ತ ಚಿಕಿತ್ಸೆ ದೊರಕದ ಕಾರಣ ಅನ್ಯಯವಾಗಿ ಅನೇಕ ಜೀವಗಳು ಬಲಿಯಾಗುತ್ತಿವೆ.
ಈ ಆರೋಗ್ಯ ವ್ಯವಸ್ಥೆಯ ವೈಫಲ್ಯವನ್ನು ಸರಿಪಡಿಸಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಈ ಉಪವಾಸ ಸತ್ಯಾಗ್ರಹದ ಮುಖ್ಯ ಉದ್ದೇಶವಾಗಿದೆ ಎಂದು ನಿತಿನ್ ತಿಳಿಸಿದ್ದಾರೆ.

