ರಿಪ್ಪನ್‌ಪೇಟೆ: ಹಬ್ಬ-ಹರಿದಿನಗಳೆನ್ನದೆ ಸದಾ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ನಿರತರಾಗುವ ಪೊಲೀಸ್ ಸಿಬ್ಬಂದಿಗೆ ಹುಂಚದ ನಿವಾಸಿ ಯಶಸ್ವತಿ ವೃಷಭರಾಜ್ ಜೈನ್ ಅವರು ರಾಖಿ ಕಟ್ಟಿ ಹಾಗೂ ಮಹಿಳಾ ಪೊಲೀಸರಿಗೆ ಮುತ್ತೈದೆಯ ಸಂಕೇತವಾದ ಬಾಗಿನ ಅರ್ಪಿಸುವ ಮೂಲಕ ಸೌಹಾರ್ದತೆಯ ಸಂದೇಶ ಸಾರಿದ್ದಾರೆ.

ಗೌರಿ-ಗಣೇಶ ಹಬ್ಬದ ಶುಭಾಶಯ ಕೋರಲು ಠಾಣೆಗೆ ಆಗಮಿಸಿದ್ದ ಅವರು, ಕಳೆದ 15 ವರ್ಷಗಳಿಂದ ನಿರಂತರವಾಗಿ ಈ ಸಹೋದರತ್ವದ ಸಂಪ್ರದಾಯವನ್ನು ಪಾಲಿಸಿಕೊಂಡು ಬರುತ್ತಿರುವುದು ವಿಶೇಷವಾಗಿದೆ.
ಮಾನವೀಯ ಕಾರ್ಯಕ್ಕೆ ಪಿಎಸ್‌ಐ ಮೆಚ್ಚುಗೆ :

ಈ ಅರ್ಥಪೂರ್ಣ ಕಾರ್ಯದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಪಿಎಸ್‌ಐ ರಾಜುರೆಡ್ಡಿ, “ಹಬ್ಬಗಳ ಸಂದರ್ಭದಲ್ಲಿ ಕುಟುಂಬ, ಮನೆ-ಮಠದಿಂದ ದೂರ ಉಳಿದು ಕರ್ತವ್ಯ ನಿರ್ವಹಿಸುವ ಪೊಲೀಸರಿಗೆ ಇಂತಹ ಕಾರ್ಯಗಳು ಸಾಂತ್ವನ ನೀಡುತ್ತವೆ. ಶ್ರಾವಣ ಮಾಸದಲ್ಲಿ ಮುತ್ತೈದೆಯರಿಗೆ ಅರಿಶಿನ-ಕುಂಕುಮ ಹಾಗೂ ಬಾಗಿನ ನೀಡುವ ನಮ್ಮ ಪ್ರಾಚೀನ ಸಂಪ್ರದಾಯವನ್ನು ಯಶಸ್ವತಿ ಅವರು ಇಂದಿಗೂ ಜೀವಂತವಾಗಿರಿಸಿದ್ದು, ಇದು ಸಮಾಜಕ್ಕೆ ಉತ್ತಮ ಪ್ರೇರಣೆಯಾಗಿದೆ,” ಎಂದರು.

ತವರಿನ ಪ್ರೀತಿಯ ಸಂಕೇತ ಉತ್ತರ ಕರ್ನಾಟಕ ಭಾಗದಲ್ಲಿ ವಿವಾಹಿತ ಹೆಣ್ಣುಮಕ್ಕಳಿಗೆ ನಾಗರ ಪಂಚಮಿ ಹಬ್ಬದಂದು ತವರಿನಿಂದ ತೆಂಗಿನಕಾಯಿ ಹಾಗೂ ರವಿಕೆ ಕಣ ನೀಡುವುದು ವಾಡಿಕೆ. ಆದರೆ, ಬಿಡುವಿಲ್ಲದ ಕರ್ತವ್ಯದ ಒತ್ತಡದಿಂದಾಗಿ ಮಹಿಳಾ ಪೊಲೀಸರಿಗೆ ತವರಿಗೆ ತೆರಳಿ ಬಾಗಿನ ಪಡೆಯಲು ಸಾಧ್ಯವಾಗುವುದಿಲ್ಲ. ಈ ಕೊರತೆಯನ್ನು ನೀಗಿಸುವಂತೆ, ಠಾಣೆಗೇ ಆಗಮಿಸಿ ಬಾಗಿನ ನೀಡಿ ಅಣ್ಣ-ತಂಗಿಯರ ಬಾಂಧವ್ಯವನ್ನು ಗಟ್ಟಿಗೊಳಿಸುತ್ತಿರುವ ಅವರ ಕಾಯಕ ಅತ್ಯಂತ ಶ್ಲಾಘನೀಯ ಎಂದು ಅವರು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಎಎಸ್‌ಐಗಳಾದ ವಿನೋದ್, ಹಾಲಪ್ಪ, ಲಕ್ಷ್ಮಿ ಸೇರಿದಂತೆ ಠಾಣೆಯ ಇತರ ಸಿಬ್ಬಂದಿ ವರ್ಗ ಹಾಗೂ ಪ್ರಮುಖರಾದ ವೃಷಭರಾಜ್ ಜೈನ್, ಹುಂಚದ ನಾಗರಾಜರೆಡ್ಡಿ, ಪ್ರವೀಣ್ ಮಂಡಕ ಮುಂತಾದವರು ಉಪಸ್ಥಿತರಿದ್ದರು.



