ಹೊಸನಗರ: ಪೊಲೀಸ್ ಇಲಾಖೆಯ ಕರ್ತವ್ಯದ ಒತ್ತಡದ ನಡುವೆಯೂ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವ, ‘ಖಾಕಿ ಕವಿ’ ಎಂದೇ ಖ್ಯಾತರಾಗಿರುವ ಹೊಸನಗರ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಮಂಜುನಾಥ್ ಅವರ 11ನೇ ಕವನ ಸಂಕಲನ ‘ಆಶಾಸುಂದರಿ’ ಇತ್ತೀಚೆಗೆ ಬಿಡುಗಡೆಯಾಯಿತು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸರಳ ಸಮಾರಂಭದಲ್ಲಿ ಸಾಗರ-ಹೊಸನಗರ ಕ್ಷೇತ್ರದ ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ಗೋಪಾಲಕೃಷ್ಣ ಅವರು ಈ ಕೃತಿಯನ್ನು ಲೋಕಾರ್ಪಣೆಗೊಳಿಸಿದರು.

ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಶಾಸಕ ಬೇಳೂರು ಗೋಪಾಲಕೃಷ್ಣ ಅವರು, “ಮುಖ್ಯಮಂತ್ರಿಗಳ ಚಿನ್ನದ ಪದಕ ಪುರಸ್ಕೃತರಾಗಿರುವ ಮಂಜುನಾಥ್ ಅವರು, ತಮ್ಮ ಬಿಡುವಿಲ್ಲದ ಪೊಲೀಸ್ ವೃತ್ತಿಯ ನಡುವೆಯೂ ಸಮಯ ಮಾಡಿಕೊಂಡು ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿರುವುದು ಅತ್ಯಂತ ಶ್ಲಾಘನೀಯ. ಅವರ ಬರಹಗಳಲ್ಲಿರುವ ದೇಶಪ್ರೇಮ, ಪರಿಸರ ಕಾಳಜಿ ಹಾಗೂ ಸಾಮಾಜಿಕ ಬಾಂಧವ್ಯದ ಕಳಕಳಿ ಅವರ ಸೇವೆಯ ಮಹತ್ವವನ್ನು ಸಾರುತ್ತದೆ” ಎಂದು ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕಳೂರು ಸಹಕಾರ ಬ್ಯಾಂಕ್ ಅಧ್ಯಕ್ಷ ದುಮ್ಮ ವಿನಯಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ ಚಂದ್ರಮೌಳಿ, ಕಾರ್ಯದರ್ಶಿ ಡಿಎಂ ಸದಾಶಿವಶೆಟ್ಟಿ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್ ಬಿ ಚಿದಂಬರ, ಎಂ.ಪಿ ಸುರೇಶ, ಶುಭಕರ ಪೂಜಾರಿ, ಉಬೆದುಲ್ಲಾಖಾನ್, ಡಿ.ಆರ್ ಮಂಜುನಾಥ್ ಶೆಟ್ಟಿ, ಸಾಕಮ್ಮ, ನೇತ್ರಾ ಸುಬ್ರಾಯ ಭಟ್, ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು ಮೊದಲಾದವರು ಉಪಸ್ಥಿತರಿದ್ದರು.

