ರಕ್ತದಾನದಿಂದ ಯಾವುದೇ ಹಾನಿಯಿಲ್ಲ ; ಸಚಿವ ಮಧು ಬಂಗಾರಪ್ಪ

0 199

ಸೊರಬ: ರಕ್ತದಾನದ ಬಗ್ಗೆ ಜನರಿಗೆ ಅನೇಕ ತಪ್ಪು ಕಲ್ಪನೆಗಳಿವೆ. ಇದರಿಂದ ಅನೇಕರು ರಕ್ತದಾನದಿಂದ ಹಿಂದೆ ಸರಿಯುತ್ತಾರೆ. ರಕ್ತದಾನದಿಂದ ಯಾವುದೇ ಹಾನಿಯಿಲ್ಲ, ತಪ್ಪು ಕಲ್ಪನೆಗಳನ್ನು ತೆಗೆದುಹಾಕುವುದರೊಂದಿಗೆ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವುದು ಮಹತ್ತರ ಕಾರ್ಯವಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದರು.

ಬುಧವಾರ ತಾಲೂಕಿನ ಉದ್ರಿ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಯುವಕರ ಸಂಘ, ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ, ಗ್ರಾಮ ಪಂಚಾಯಿತಿ ಉದ್ರಿ, ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ನಾಲ್ಕನೇ ಬೃಹತ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ರಕ್ತ ಹೀನತೆ, ವಿವಿಧ ಕಾಯಿಲೆಗಳಿಂದ ಬಳಲುವವರು ಮತ್ತು ಅಪಘಾತದಂತಹ ತುರ್ತು ಸಂದರ್ಭಗಳಿಗೆ ರಕ್ತದ ಅಗತ್ಯವಿರುತ್ತದೆ. ಪ್ರತಿನಿತ್ಯ ಜನರು ಒಂದೆಲ್ಲಾ ಒಂದು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ರಕ್ತದ ಕೊರತೆಯಿಂದ ಸಾಕಷ್ಟು ಜನ ತೊಂದರೆಗೊಳಗಾಗುತ್ತಿದ್ದು, ಯುವಪೀಳಿಗೆ ರಕ್ತದಾನಕ್ಕೆ ಮುಂದಾಗುವುದರೊಂದಿಗೆ ತಮ್ಮ ಆರೋಗ್ಯವನ್ನು ಸುಸ್ತಿಯಲ್ಲಿ ಇಟ್ಟುಕೊಳ್ಳಿ. ರಕ್ತದಾನ ಮಾಡುವುದರಿಂದ ಮನುಷ್ಯನ ಆಯಸ್ಸು ವೃದ್ಧಿಯಾಗುವುದರೊಂದಿಗೆ ಉತ್ತಮ ಆರೋಗ್ಯ, ಚಟುವಟಿಕೆಯಿಂದ ಇರಬಹುದು. ಹೀಗಾಗಿ ಪರೋಪಕಾರದ ಉದ್ದೇಶ ಇಟ್ಟುಕೊಂಡು ರಕ್ತದಾನ ಶಿಬಿರಗಳು ಹೆಚ್ಚೆಚ್ಚು ನಡೆಯಬೇಕು’ ಎಂದು ಕರೆ ನೀಡಿದರು.

ಆಯುಷ್ ವೈದ್ಯಾಧಿಕಾರಿ ಡಾ|| ಮಹೇಶ್ ಎಂ. ಕೆ ಪ್ರಾಸ್ತಾವಿಕವಾಗಿ ಮಾತನಾಡಿ, ಬಹುತೇಕ ಜನರಲ್ಲಿ ರಕ್ತ ದಾನದ ಕುರಿತಾಗಿ ವಿವರವಾದ ಮಾಹಿತಿ ಇಲ್ಲ, ಹೀಗಾಗಿ ಹಣ ಕೊಟ್ಟರೆ ಸಿಗುವಂತಹ ವಸ್ತು ಎಂಬ ಭಾವನೆ ಬಹುತೇಕ ಜನರ ಮನಸ್ಸಿನಲ್ಲಿದೆ. ಹಣ ಕೊಟ್ಟ ಪಡೆದ ರಕ್ತವು ಸಹ ಇನ್ನೊಬ್ಬರ ದೇಹದಿಂದ ಬಂದ ದೇಣಿಗೆ ಎಂಬ ಬಗ್ಗೆ ವಿವರವಾದ ಮಾಹಿತಿಗಳು ಸಾರ್ವಜನಿಕರಲ್ಲಿ ರವಾನೆಯಾಗಬೇಕಾಗಿದೆ.

ರಕ್ತದಾನ ಶಿಬಿರಗಳೆಂದರೆ ಪ್ರಚಾರ ಗಿಟ್ಟಿಸಿಕೊಳ್ಳುವಂತಹ ಕಾರ್ಯಕ್ರಮ ಎಂದು ಭಾವಿಸಿಕೊಳ್ಳಬೇಡಿ. ಮನುಷ್ಯನ ಆರೋಗ್ಯದ ಎಲ್ಲ ಸಮಸ್ಯೆಗಳಿಗೆ ವೈದ್ಯರಿಂದಲೇ ಪರಿಹಾರ ಸಿಗುತ್ತದೆ ಎನ್ನುವುದು ತಪ್ಪು. ಮೂತ್ರಪಿಂಡ, ರಕ್ತ. ಕಣ್ಣು ಹೃದಯ ಇನ್ನಿತರ ಭಾಗಗಳನ್ನು ಇನ್ನೊಬ್ಬರ ದೇಹಕ್ಕೆ ವರ್ಗಾವಣೆ ಮಾಡಬಹುದಾಗಿದ್ದು ಅವುಗಳನ್ನು ದಾನರೂಪವಾಗಿ ನೀಡುವುದು ಪುಣ್ಯದ ಕೆಲಸ. ಈ ಕುರಿತು ಸಂಘ ಸಂಸ್ಥೆಗಳ ಸಹಕಾರ ವೈದ್ಯರಿಗೆ ಮತ್ತು ಆಸ್ಪತ್ರೆಗಳಿಗೆ ಅವಶ್ಯವಿದೆ. ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲು ಯಾರೇ ಮುಂದಾದರೂ ಸಹ ಅದಕ್ಕೆ ನಮ್ಮ ಸಂಪೂರ್ಣ ಸಹಕಾರ ಲಭಿಸಲಿದೆ. ಇಲ್ಲಿ ನಡೆದ ಈ ಕಾರ್ಯಕ್ರಮ ಅರ್ಥಪೂರ್ಣವಾಗಿದೆ ಎಂದರು.


ತಾ.ಪಂ ಇ ಓ ಡಾ|| ಪ್ರದೀಪ್ ಕುಮಾರ್ ಮಾತನಾಡಿ, ನಮ್ಮ ವೈದ್ಯರಿಂದ ಉತ್ತಮ ಕಾರ್ಯಕ್ರಮಗಳು ನಡೆಯುತ್ತಿದ್ದು ಪ್ರಶಂಶನೀಯವಾಗಿದೆ ಎಂದರು.

ಗ್ರಾಪಂ ಅಧ್ಯಕ್ಷೆ ಲಕ್ಷ್ಮಮ್ಮ, ಉಪಾಧ್ಯಕ್ಷೆ ತಾರ, ಸದಸ್ಯರುಗಳು, ಡಾ|| ಗಂಗಾ ಮುಖ್ಯಸ್ಥರು ರಕ್ತನಿಧಿ
ವೈದ್ಯಾಧಿಕಾರಿಗಳಾದ, ಡಾ|| ಪ್ರಭು ಸಾಹುಕಾರ್, ಮೆಗ್ಗಾನ್ ರಕ್ತ ನಿಧಿ ಕೇಂದ್ರದ ಹನುಮಂತಪ್ಪ ಶಾಲಾ ಶಿಕ್ಷಕ ರಮೇಶ ನಾಯ್ಕ, ನಾಗರಾಜ, ಗ್ರಾಮಸ್ಥರಾದ ಸದಾ ಪಾಟೀಲ್, ಚಾಲುಕ್ಯ ಪಾಟಿಲ್, ತಾರ್ಕೇಶ್ ಗೌಳಿ, ಸತೀಶ್ ಗೌಡ, ದೇಸಾಯಿ ಗೌಡ, ಸುರೇಂದ್ರ ಗೌಡ, ಹನುಮಂತಪ್ಪ, ದರ್ಶನ್ ಪ್ರದೀಪ್, ಮಹೇಶ್ ಗೌಡ, ಪುರುಷೋತ್ತಮ, ಸುರೇಶ, ಶ್ಯಾಮಣ್ಣ ಕ.ರ.ವೇ ಬಲಿಂದ್ರಪ್ಪ ಇತರರು ಇದ್ದರು.

Leave A Reply

Your email address will not be published.