ಸಾಹಿತಿ ಎಂ.ಎಂ.ಪ್ರಭಾಕರ ಕಾರಂತರ ‘ಮುಳುಗಡೆ ಒಡಲಾಳ’ ಕೃತಿ ಬಿಡುಗಡೆ ಸಮಾರಂಭ, ವಾರಾಹಿ ದಡದಲ್ಲಿ ಸಂತ್ರಸ್ತರ ಕುರಿತ ಪುಸ್ತಕ ಲೋಕಾರ್ಪಣೆ | ಒಂದು ಸಂಸ್ಕೃತಿಯನ್ನು ಮುಳುಗಿಸಿದ ‘ಮುಳುಗಡೆ’ ಒಂದು ದೊಡ್ಡ ಶಾಪ ; ಸಾಹಿತಿ ಗಜಾನನ ಶರ್ಮ

0 239

ಹೊಸನಗರ: ಮುಳುಗಡೆ ಎಂಬುದು ಕೇವಲ ತೋಟ, ಮನೆ ಮುಳುಗಿಸಿಲ್ಲ. ಇದು ಅಲ್ಲಿನ ಸಂಸ್ಕೃತಿ, ಜನಪದ, ನಂಬಿದ ದೇವರು ದೈವ ಹಾಗೂ ಸಂಬಂಧಗಳನ್ನು ಮುಳುಗಿಸಿ ಅನಾಥ ಭಾವ ಮೂಡಿಸಿದೆ ಎಂದು ಸಾಹಿತಿ ಡಾ.ಗಜಾನನ ಶರ್ಮ ವಿಷಾಧಿಸಿದರು.

ತಾಲೂಕಿನ ಮೇಲುಸುಂಕ ದುರ್ಗಾ ಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ಸಾಹಿತಿ ಅಂಕಣಕಾರ, ಪತ್ರಕರ್ತ ಎಂ.ಎಂ.ಪ್ರಭಾಕರ ಕಾರಂತ ಇವರ ವಾರಾಹಿ ಸಂತ್ರಸ್ತರ ಬದುಕು, ಬವಣೆ ಕುರಿತ ‘ಮುಳುಗಡೆ ಒಡಲಾಳ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

70ರ ದಶಕದಲ್ಲಿ ಜಲವಿದ್ಯುತ್ ಅನಿವಾರ್ಯವಾಗಿತ್ತು. ಆದರೆ ಯೋಜನೆಯ ಸಂತ್ರಸ್ತರನ್ನು ಸರ್ಕಾರ ಹಾಗೂ ಅಧಿಕಾರಿ ವರ್ಗ ನೋಡಿಕೊಂಡ ರೀತಿ ಸರಿ ಇಲ್ಲ. ಭೌತಿಕವಾಗಿ ಕನಿಷ್ಟ ಪರಿಹಾರ ನೀಡಿದ ಹೊರತು ಅವರ ಜನ-ಜೀವನ ಬಗ್ಗೆ ಕಾಳಜಿ ವಹಿಸಿಲ್ಲ ಎಂದು ದೂರಿದರು.

ವರಾಹಿ ನೀರಿನ ಮುಳುಗಡೆ ಸಂತ್ರಸ್ತರ ಸಾಮಾಜಿಕ, ಜಾನಪದ, ನೋವು, ನಲಿವು ಕುರಿತಂತೆ ‘ಮುಳುಗಡೆ ಒಡಲಾಳ’ ಹೆಚ್ಚು ಬೆಳಕು ಚೆಲ್ಲಿದೆ. ಇದೊಂದು ದಾಖಲೆ ಹಾಗೂ ಉಲ್ಲೇಖನೀಯ ಕೃತಿ ಆಗಿದೆ ಎಂದರು.

ಪರಿಸರ ಸಾಹಿತಿ ಶಿವಾನಂದ ಕಳವೆ ಮಾತನಾಡಿ, ಇಂದಿನ ತಲೆಮಾರಿಗೆ ನಿಸರ್ಗ ಜ್ಞಾನ ಇಲ್ಲದಂತೆ ಆಗಿದೆ. ನಿಸರ್ಗ ಶಿಕ್ಷಣವನ್ನು ಕೇವಲ ಪುಸ್ತಕಕ್ಕೆ ಮೀಸಲಿಡಬಾರದು. ನಿಸರ್ಗದಲ್ಲಿರುವ ಕಾಡು, ತೊರೆ, ಪ್ರಾಣಿ, ಪಕ್ಷಿ ಗುರುತಿಸುವಿಕೆಯ ಮೂಲಕ ರಕ್ಷಣೆಯ ಕೆಲಸ ಆಗಬೇಕು ಎಂದು ಆಶಿಸಿದರು.

ಹೊಸ ತಲೆ ಮಾರಿನ ಮಾಹಿತಿಯಾಗಿ ಮುಳುಗಡೆ ಸಂತ್ರಸ್ತರ ಕುರಿತಂತೆ ಈ ಕೃತಿ ಬಿಂಬಿಸುತ್ತದೆ. ಇಲ್ಲಿನ ಮರ, ಗಿಡ, ಬಳ್ಳಿ, ಹೂವು-ಹಣ್ಣು-ಹಂಪಲುಗಳ ಮರು ನೆನಪು ಹಾಗೂ ದಾಖಲೆಯ ರೂಪದಲ್ಲಿ ನೋಡಬಹುದು ಎಂದು ಅಭಿಪ್ರಾಯಪಟ್ಟರು.

ಹಿರಿಯ ಸಾಹಿತಿ, ಪತ್ರಕರ್ತ ಶರತ್ ಕಲ್ಕೋಡ್ ಮಲೆನಾಡಿನ ಸ್ಥಿತ್ಯಂತರ ಕುರಿತಂತೆ ಮಾತನಾಡಿ, ಮುಳುಗಡೆಯ ಕಾರಣ ಮನುಷ್ಯ ಸಂಬಂಧಗಳು ದೂರ ಆಗಿದೆ. ಹಳ್ಳಿಯಲ್ಲಿ ಒಟ್ಟಾಗಿದ್ದ ಕೂಡು ಕುಟುಂಬ ಈಗ ಇಲ್ಲದಂತೆ ಆಗಿದೆ ಎಂದು ವಿಷಾಧಿಸಿದರು.

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಸಭಾ ಕಾರ್ಯಕ್ರಮ ಉದ್ಘಾಟಿಸಿದರು.
ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಸಭೆಯ ಅಧ್ಯಕ್ಷತೆ ವಹಿಸಿ, ಅಡಿಕೆ ಕೃಷಿ, ದರ ವಹಿವಾಟು ಬಗ್ಗೆ ಮಾತನಾಡಿ, ಮಲೆನಾಡಿನ ಸಾಂಪ್ರದಾಯಿಕ ಬೆಳೆ ಅಡಿಕೆ ಬೇರೆ ರಾಜ್ಯಗಳಿಗೆ ಗುಳೆ ಹೋಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕೃತಿಯ ಸಮಕಾಲೀನ ಮಹತ್ವ ಕುರಿತಂತೆ ಪತ್ರಕರ್ತೆ ಗಿರಿಜಾ ಶಂಕರ್ ಮಾತನಾಡಿದರು.

ಕೃತಿಯನ್ನು ಸಾಹಿತಿಗಳಾದ ರೂಪಕಲಾ, ಅಂಕಣಕಾರ್ತಿ ಪೂರ್ಣಿಮಾ ನರಸಿಂಹ, ಹಿರಿಯ ಪತ್ರಕರ್ತರಾದ ಜಯರಾಮ ಅಡಿಗ, ಮುರಳೀಕೃಷ್ಣ ಮಡ್ಡಿಕೇರಿ, ಸಾಹಿತಿಗಳಾದ ಡಾ.ಜಯಪ್ರಕಾಶ್ ಮಾವಿನಕುಳಿ, ತಿರುಪತಿ ನಾಯಕ್, ಡಾ.ಮಂಜುಳಾ ಹುಲ್ಲಹಳ್ಳಿ, ಜಿ.ವಿ.ಗಣೇಶಯ್ಯ ಹಾಗೂ ಕಿಶೋರ್ ಶೀರ್ನಾಳಿ ಜೊತೆಯಾಗಿ ಲೋಕಾರ್ಪಣೆ ಮಾಡಿದರು.

ಚಿತ್ರ ನಟಿ ನಾಗಶ್ರೀ ಬೇಗಾರ್ ಇವನ್ನು ಸನ್ಮಾನಿಸಲಾಯಿತು. ಸುಜಾತ ರಾವ್ ಪ್ರಾರ್ಥಿಸಿದರು. ಚಂದ್ರಶೇಖರ ಶಾಸ್ತ್ರಿ ಸ್ವಾಗತಿಸಿದರು. ಚಿತ್ರ ನಿರ್ದೇಶಕ ರಮೇಶ ಬೇಗಾರ್ ನಿರೂಪಿಸಿದರು. ಕೃತಿಯ ಲೇಖಕ ಎಂ.ಎಂ.ಪ್ರಭಾಕರ್ ಕಾರಂತ್ ಪ್ರಾಸ್ತಾವಿಕ ಮಾತನಾಡಿದರು. ತಾರಾ ನಾಗರಾಜ್ ವಂದಿಸಿದರು.

Leave A Reply

Your email address will not be published.