ರಿಪ್ಪನ್‌ಪೇಟೆ ; ಹುಂಚ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊನ್ನೆಬೈಲು ಸ.ನಂ 99 ರಲ್ಲಿ ಅಕ್ರಮವಾಗಿ ಮರ ಕಡಿತಲೆ ಮಾಡಿ ಸುಮಾರು 10 ಎಕರೆ ಜಮೀನು ಸಾಗುವಳಿ ಮಾಡಲಾಗುತ್ತಿದ್ದೆ ಎಂದು ಆರೋಪಿಸಿ ಕಳೆದ ಕೆಲ ದಿನಗಳಿಂದ ಸಮಟಗಾರು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದು ಅಕ್ರಮ ಜಮೀನು ತೆರವುಗೊಳಿಸಿ ಗ್ರಾಮಾಭಿವೃದ್ದಿಗೆ ಮೀಸಲಿಡುವುದಾಗಿ ಹೊಸನಗರ ತಹಸೀಲ್ದಾರ್ ತಿಳಿಸಿ ಸಾಕಷ್ಟು ದಿನಗಳು ಕಳೆದರೂ ಕೂಡಾ ವಿಳಂಬ ಧೋರಣೆ ಅನುಸರಿಸಿದ್ದಾರೆಂದು ಆರೋಪಿಸಿ ಗ್ರಾಮದ ಹಲವರು ದಿಢೀರ್ ಪ್ರತಿಭಟನೆ ನಡೆಸಿರುವ ಘಟನೆ ಭಾನುವಾರ ನಡೆದಿದೆ.
ಹುಂಚ ಗ್ರಾಮ ಪಂಚಾಯಿತ್ ವ್ಯಾಪ್ತಿಯ ಹೊನ್ನೆಬೈಲು ಗ್ರಾಮದ ಸ.ನಂ 99 ರಲ್ಲಿ ಭೂ ಕಬಳಿಕೆಯ ನೆಪದಲ್ಲಿ ಲಕ್ಷಾಂತರ ರೂ. ಮೌಲ್ಯದ ಬೀಟೆ, ಸಾಗುವಾನಿ, ಹೊನ್ನೆ, ಭರಣಿಗೆ ಇನ್ನಿತರ ಕಾಡುಜಾತಿಯ ಮರಗಳನ್ನು ಅಕ್ರಮವಾಗಿ ಕಡಿತಲೆ ಮಾಡುವ ಮೂಲಕ ಅರಣ್ಯ ನಾಶಗೊಳಿಸಿರುವುದು ಇತ್ತೀಚೆಗೆ ಮಲೆನಾಡಿನ ವ್ಯಾಪ್ತಿಯಲ್ಲಿ ಅಕ್ರಮ ಭೂ ಒತ್ತುವರಿ ಅವ್ಯಾಹತವಾಗಿ ನಡೆಯುತ್ತಿದ್ದು ಅರಣ್ಯ ಇಲಾಖೆಯವರೆ ತಮ್ಮ ಕಿಸೆಯನ್ನು ತುಂಬಿಸಿಕೊಳ್ಳುವ ನೆಪದಲ್ಲಿ ತಮಗೆ ಗೊತ್ತಿದ್ದರೂ ಆ ಕಡೆ ಮುಖ ಸಹ ಹಾಕದೆ ಒತ್ತುವರಿಗೆ ಬೆಂಗಾವಲಾಗಿ ನಿಂತಿರುವಾಗ ಅರಣ್ಯ ಉಳಿಯುವುದಾದರು ಹೇಗೆ? ಎಂದು ಪ್ರತಿಭಟನಾನಿರತರು ಪ್ರಶ್ನಿಸಿದರು.
ಈ ಕುರಿತು ಸಮಟಗಾರು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದು ಸ್ಥಳಕ್ಕೆ ಹೊಸನಗರ ತಹಸೀಲ್ದಾರ್ ಭೇಟಿ ನೀಡಿ ಪ್ರತಿಭಟನಾ ನಿರತರ ಮನವಿ ಸ್ವೀಕರಿಸಿ ಸ್ಥಳದಲ್ಲಿದ್ದ ಹುಂಚ ನಾಡಕಛೇರಿಯ ಉಪತಹಸೀಲ್ದಾರ್ ಮೂಲಕ ವರದಿ ತರಿಸಿಕೊಂಡ ತಹಸೀಲ್ದಾರ್, ಕೂಡಲೇ ತೆರವುಗೊಳಿಸಿ ಎಂದು ಆದೇಶಿಸಲಾದರೂ ಕೂಡಾ ತೆರವು ಕಾರ್ಯಾಚರಣೆ ವಿಳಂಬಗೊಂಡಿರುವುದರ ಹಿಂದೆ ಗ್ರಾಮಸ್ಥರಲ್ಲಿ ಸಾಕಷ್ಟು ಅನುಮಾನಗಳಿಗೆ ಎಡೆಮಾಡಿದಂತಾಗಿದೆ.
ಯಾವುದೇ ಕಾರಣಕ್ಕೂ ಈ ಸರ್ಕಾರಿ ಜಾಗವನ್ನು ಅಕ್ರಮ ಒತ್ತುವರಿ ಜಮೀನು ಉಳಿಸುವ ಮೂಲಕ ಅರಣ್ಯ ಬೆಳೆಸಿ ಪರಿಸರ ರಕ್ಷಣೆ ಮಾಡುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸೂಕ್ತ ತನಿಖೆ ನಡೆಸುವುದರೊಂದಿಗೆ ಖಾಸಗಿಯವರ ಪಾಲಾಗದಂತೆ ನೋಡಿಕೊಳ್ಳುವಂತೆ ತಹಸೀಲ್ದಾರ್‌ರಿಗೆ ಒತ್ತಾಯಿಸಿದ್ದಾರೆ.
ಈ ಬಗ್ಗೆ ತಹಸೀಲ್ದಾರ್ ಕ್ರಮ ಜರುಗಿಸುವಲ್ಲಿ ವಿಳಂಬ ಮಾಡಿದರೆ ಬರುವ ಮೂರ್ನಾಲ್ಕು ದಿನಗಳ ನಂತರ ತಹಸೀಲ್ದಾರ್ ಕಛೇರಿ ಮುಂಭಾಗ ಸಮಟಗಾರು ಗ್ರಾಮಸ್ಥರು ಪ್ರತಿಭಟನೆ ನಡೆಸುವುದಾಗಿ ಘೋಷಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಆಶಾ ರವೀಂದ್ರ, ಬಿಜೆಪಿ ಮಹಾಶಕ್ತಿ ಕೇಂದ್ರದ ಮುಖಂಡ ಹರೀಶ ಹೊನ್ನೆಬೈಲು, ವಿಷು ಹೊನ್ನಬೈಲು, ರಾಜೇಂದ್ರ ಸಮಟಗಾರು, ದಲಿತ ಮುಖಂಡ ಶಿವರಾಜ್ ಸಮಟಗಾರು, ನಟೇಶ್ ಬಿಲ್ಲೇಶ್ವರ, ಗಿರೀಶ್ ಜಂಬಳ್ಳಿ, ಧರ್ಮರಾಜ್, ಸದಾನಂದ, ಈಶ್ವರ, ಶಿವಕುಮಾರ, ಸದಾಶಿವಾ, ನಾಗರತ್ನ, ಯಶೋಧ ಬಸಪ್ಪಗೌಡ, ಕೃಷ್ಣನಾಯ್ಕ್, ನಾಗಭೂಷಣ, ಪೂರ್ಣೇಶ್, ಮೀನಾಕ್ಷಿ ನಾಗೇಂದ್ರ, ರಾಜಣ್ಣ, ಇನ್ನಿತರರು ಪಾಲ್ಗೊಂಡಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





