ಹೊಸನಗರ ; ರಾಜ್ಯ ಸರ್ಕಾರದಲ್ಲಿ ಮುಖ್ಯಮಂತ್ರಿ ಗದ್ದಿಗೆ ಬದಲಾವಣೆಯಾಗುತ್ತಿದ್ದಂತೆಯೇ ತಮ್ಮದೇ ಸರ್ಕಾರ ನೀಡಿರುವ ಗ್ಯಾರಂಟಿ ಯೋಜನೆಗಳಲ್ಲಿ ಅನೇಕ ಬದಲಾವಣೆ ಮಾಡುತ್ತಿರುವುದು ಜನಸಾಮಾನ್ಯರಲ್ಲಿ ಆತಂಕ ಮತ್ತು ಅಸಮಾಧಾನಕ್ಕೆ ಕಾರಣವಾಗಿದೆ.
ಸರ್ಕಾರವು ಅಧಿಕಾರಕ್ಕೆ ಬರುವ ಮುನ್ನ ರಾಜ್ಯದ ಜನತೆಗೆ ಪಂಚ ಗ್ಯಾರಂಟಿ ಯೋಜನೆಗಳ ಭರವಸೆಯನ್ನು ನೀಡುವುದರ ಮೂಲಕ ರಾಜ್ಯ ಸರ್ಕಾರದ ಆಡಳಿತ ಚುಕ್ಕಾಣಿಯನ್ನು ಹಿಡಿಯಿತು. ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ಕಳೆದ ಮೂರು ವರ್ಷಗಳ ಕಾಲ ಸಿದ್ದರಾಮಯ್ಯರವರು ಆಳ್ವಿಕೆ ನಡೆಸಿದರು. ಆದರೀಗ ಡಿ ಕೆ ಶಿವಕುಮಾರ್ ರಾಜ್ಯ ಸರ್ಕಾರದ ಆಡಳಿತ ಚುಕ್ಕಾಣಿಯನ್ನು ಹಿಡಿತಿದ್ದಂತೆಯೇ ಗೃಹಲಕ್ಷ್ಮಿ, ಗೃಹಜೋತಿ, ಅನ್ನಭಾಗ್ಯಕ್ಕೆ ಕನ್ನ ಹಾಕುವ ಹುನ್ನಾರ ನಡೆಯುತ್ತಿದೆ.
ಗೃಹಲಕ್ಷ್ಮಿ ಯೋಜನೆ ಪಡೆಯುತ್ತಿರುವ ಫಲಾನುಭವಿಗಳಲ್ಲಿ ಅನೇಕರು ಮೃತರಾಗಿದ್ದಾರೆ ಅವರಿಗೆ ಬರುವಂತಹ ಹಣವನ್ನು ಅವರ ಸಂಬಂಧಿಕರು ಪಡೆಯುತ್ತಿದ್ದಾರೆ ಇದರಿಂದಾಗಿ ಸರ್ಕಾರಕ್ಕೆ ಹೆಚ್ಚಿನ ಹೊರೆ ಆಗುತ್ತಿದೆ ಎಂಬ ಕಾರಣಕ್ಕಾಗಿ, ಅದೇ ರೀತಿ ಗೃಹಜ್ಯೋತಿಗೂ ಕೂಡ ಅನೇಕರು ತಮ್ಮ ತಮ್ಮ ಮನೆಗಳಲ್ಲಿಯೇ ವಿವಿಧ ರೀತಿಯಲ್ಲಿ ಅಂಗಡಿ ಮುಗ್ಗಟ್ಟು ಮಾಡಿಕೊಂಡಿದ್ದು, ಈ ರೀತಿ ಅಂಗಡಿಗಳನ್ನು ಮಾಡಿಕೊಂಡವರು ಬಳಕೆ ಮಾಡಿಕೊಳ್ಳುತ್ತಿರುವ ವಿದ್ಯುತ್ತನ್ನು ವಾಣಿಜ್ಯ ಸಂಪರ್ಕ ಹೊಂದುವ ಬದಲು ಗೃಹಬಳಕೆಯಲ್ಲಿಯೇ ವಿದ್ಯುತ್ತನ್ನು ಬಳಸಿಕೊಳ್ಳುತ್ತಿದ್ದಾರೆ ಎಂಬ ಕಾರಣಕ್ಕೆ ಸರ್ಕಾರವು ಈ ಯೋಜನೆಗೆ ಪುನಃ ಅರ್ಜಿ ಸಲ್ಲಿಸುವಂತೆ ಆದೇಶ ಹೊರಡಿಸಿರುವುದು ಸರಿಯಷ್ಟೇ. ಆದರೆ ಪಡಿತರ ಚೀಟಿಯಲ್ಲಿ ಆಹಾರ ಧಾನ್ಯ ಪಡೆಯುತ್ತಿರುವ ಬಡ ಜನತೆಗೆ ಪಡಿತರ ಚೀಟಿಗೆ ಜಾತಿ ಪ್ರಮಾಣ ಪತ್ರ ಲಗತಿಸಬೇಕು ಎಂಬ ಮಾತುಗಳು ಅನೇಕ ನ್ಯಾಯಬೆಲೆ ಅಂಗಡಿಗಳಲ್ಲಿ ಕೇಳಿ ಬರುತ್ತಿವೆ. ಗ್ರಾಹಕರು ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಏಕೆ ಈ ರೀತಿ? ಎಂದು ಪ್ರಶ್ನಿಸಿದರೆ ಆಹಾರ ಇಲಾಖೆಯಿಂದ ನಮಗೆ ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ನೀಡುತ್ತಿದ್ದಾರೆ. ಆಹಾರ ಇಲಾಖೆಯ ಅಧಿಕಾರಿಗಳಿಗೆ ಕೇಳಿದರೆ ಸರ್ಕಾರದ ಸೂಚನೆಯಂತೆ ಆಯುಕ್ತರು ನಮ್ಮ ಜಿಲ್ಲಾ ನಿರ್ದೇಶಕರಿಗೆ ಮಾಹಿತಿ ನೀಡಿದ್ದಾರೆ. ಜಿಲ್ಲಾ ನಿರ್ದೇಶಕರು ನಮಗೆ ಮಾಹಿತಿ ನೀಡಿದರೆ ಪರಿಣಾಮವಾಗಿ ನಾವು ನ್ಯಾಯಬೆಲೆ ಅಂಗಡಿಗಳ ಮಾಲೀಕರಿಗೆ ಗ್ರಾಹಕರ ಬಳಿ ಪಡಿತರ ಚೀಟಿಗೆ ಜಾತಿ ಪ್ರಮಾಣ ಪತ್ರ ಲಗತಿಸಬೇಕು ಎಂಬ ಸೂಚನೆ ನೀಡಿದ್ದೇವೆ ಎಂಬ ಮಾತು ಕೇಳಿ ಬರುತ್ತಿದೆ.
ಸರ್ಕಾರವು ಗ್ಯಾರಂಟಿ ಯೋಜನೆಯ ಗೃಹಲಕ್ಷ್ಮಿ ಹಾಗೂ ಗೃಹಜ್ಯೋತಿಗೆ ಹೊಸದಾಗಿ ಅರ್ಜಿ ಸಲ್ಲಿಸುವಂತೆ ಆದರ್ಶ ಹೊರಡಿಸಿರುವುದು ಏನೋ ಸ್ವಾಗತಾರ್ಹವಾಗಿದೆ. ಆದರೆ ಪಡಿತರ ಚೀಟಿಯಲ್ಲಿ ಆಹಾರ ಪಡೆಯುತ್ತಿರುವವರಿಗೆ ಜಾತಿ ಪ್ರಮಾಣ ಪತ್ರ ಲಗದಿಸಬೇಕು ಎಂಬ ಸೂಚನೆ ನೀಡಿರುವುದು ಅನೇಕರಿಗೆ ಆತಂಕ ಮತ್ತು ಅಸಮಾಧಾನಕ್ಕೆ ಕಾರಣವಾಗಿದೆಯಲ್ಲದೇ, ನುಂಗಲಾರದ ಬಿಸಿ ತುಪ್ಪವಾದಂತಾಗಿದೆ.
ರಾಜ್ಯ ಸರ್ಕಾರವು ಹೊರಡಿಸಿರುವ ಪಡಿತರ ಆಹಾರ ಪಡೆಯುವ ಗ್ರಾಹಕರಿಗೆ ಪಡಿತರ ಚೀಟಿಗೆ ಜಾತಿ ಪ್ರಮಾಣ ಪತ್ರ ಲಿಂಕ್ ಮಾಡಿಸಲು ಆದೇಶಿಸಿರುವುದರಿಂದ ಪಡಿತರ ಪಡೆಯುವ ಗ್ರಾಹಕರು ತಾಲ್ಲೂಕು ಕಚೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಜಾತಿ ಪ್ರಮಾಣ ಪತ್ರ ಮಾಡಿಸಲು ಆನ್‌ಲೈನ್‌ನಲ್ಲಿ ಅಥವಾ ವಿ.ಎ ಹಾಗೂ ಆರ್.ಐ ಮುಖಾಂತರ ಅರ್ಜಿ ಸಲ್ಲಿಸಲು ಹೋದರೆ ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, ಶಾಲಾ ದಾಖಲಾತಿ ಅಥವಾ ವರ್ಗಾವಣೆ ಪತ್ರ ಹೀಗೆ ಹಲವಾರು ದಾಖಲೆಗಳು ನೀಡಬೇಕಾಗುತ್ತದೆ. ಆಧಾರ್ ಕಾರ್ಡ್ ಚುನಾವಣಾ ಗುರುತಿನ ಚೀಟಿಗಳೇನೋ ನೀಡಬಹುದು. ಆದರೆ ಶಾಲಾ ದಾಖಲಾತಿ ಅಥವಾ ವರ್ಗಾವಣೆ ಪತ್ರ ಒದಗಿಸುವುದು ಕಷ್ಟಕರವಾದ ಪರಿಸ್ಥಿತಿಯಾಗಿದೆ. ಶಾಲೆಗಳಿಗೆ ಹೋಗದಿರುವ ಅನಕ್ಷರಸ್ಥರು ವಯೋವೃದ್ಧರು ಅಬಲರಾಗಿದ್ದು, ಇಂಥವರು ಜಾತಿ ಪ್ರಮಾಣ ಮಾತ್ರ ಮಾಡಿಸಲು ಅಸಾಧ್ಯವಾದಂತಾಗಿದೆ. ಬಡವರು ನಿರ್ಗತಿಕರು ಕೂಲಿ ಕಾರ್ಮಿಕರಿಗಾಗಿ ಪಡಿತರ ಆಹಾರವನ್ನು ವಿತರಿಸಲಾಗುತ್ತಿದ್ದು ಸರ್ಕಾರದ ಈ ನೂತನ ಆದೇಶವು ಅನೇಕರಿಗೆ ಹೆಚ್ಚಿನ ಹೊರೆಯಾಗಲಿದೆ. ಸರ್ಕಾರವು ಒಂದೊಮ್ಮೆ ಜಾತಿ ಸಮೀಕ್ಷೆ ನಡೆಸುವ ನೆಪವೇನಾದರು ಇದ್ದರೆ ಇತ್ತೀಚಿಗಷ್ಟೇ ಸರ್ಕಾರವು ಜಾತಿ ಗಣತಿ ಏಕೆ? ನಡೆಸಿದರು. ಪಡಿತರ ಆಹಾರವು ಪೋಲಾಗುತ್ತಿದೆ ಎಂಬುವುದಾದರೆ ನ್ಯಾಯಬೆಲೆ ಅಂಗಡಿಗಳಲ್ಲಿ ಬೆರಳಚ್ಚು ಕೊಟ್ಟು ಆಹಾರ ಪಡೆಯುತ್ತಿದ್ದೇವೆ ಹೀಗಿರುವಾಗ ಪಡಿತರ ಆಹಾರವು ಪೋಲಾಗುವುದಿಲ್ಲ. ಒಟ್ಟಾರೆಯಾಗಿ ಈಗಿನ ರಾಜ್ಯ ಸರ್ಕಾರವು ತಾನು ಅಧಿಕಾರಕ್ಕೆ ಬರುವ ಮುನ್ನ ನೀಡಿದ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಕ್ಕಾಗಿ ಒಂದಲ್ಲ ಒಂದು ರೀತಿಯಲ್ಲಿ ಜನರಲ್ಲಿ ಅಸಮಾಧಾನ ಹುಟ್ಟಿಸಿ ಜನರೇ ಇಷ್ಟು ಹಣವೆಸಿ ಕಷ್ಟಪಟ್ಟು ಸರ್ಕಾರದ ಯೋಜನೆಗಳನ್ನು ಕೈಬಿಟ್ಟು ಸುಮ್ಮನಿರುವುದೇ ಒಳ್ಳೆಯದು ಎಂಬ ಮನಸ್ಥಿತಿ ಅನೇಕರದ್ದಾಗಿದೆ.
ವರದಿ: ಪುಷ್ಪಾ ಜಾಧವ್, ಹೊಸನಗರ

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





