ಹೊಸನಗರ ; ಕೆಟ್ಟು ಹೋಗಿರುವ ಮಳೆ ಮಾಪನಗಳನ್ನು ತಕ್ಷಣದಲ್ಲಿ ದುರಸ್ತಿಗೊಳಿಸುವಂತೆ ಆಗ್ರಹಿಸಿ ರೈತ ಮುಖಂಡರು ಇಲ್ಲಿನ ಗ್ರೇಡ್2 ತಹಸೀಲ್ದಾರ್ ರಾಕೇಶ್ ಫ್ರಾನ್ಸಿಸ್ ಬ್ರಿಟ್ಟೋರಿಗೆ ಮನವಿ ಸಲ್ಲಿಸಿದರು.
ಮಲೆನಾಡಿನಲ್ಲಿ ಇತ್ತೀಚಿನ ವರ್ಷದಲ್ಲಿ ಮಳೆ ಪ್ರಮಾಣ ಏರುಪೇರಾಗಿದ್ದು, ಇದು ಕೃಷಿಕರಿಗೆ ಮಾರಕವಾಗಿದೆ. ನಿರೀಕ್ಷಿತ ಪ್ರಮಾಣದಲ್ಲಿ ಬೆಳೆ ಬಾರದೇ ನಷ್ಟ ಅನುಭವಿಸುವುದನ್ನು ತಡೆಯಲು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಜಾರಿಗೊಳಿಸಿದ ಹವಾಮಾನಾಧಾರಿತ ಬೆಳೆ ವಿಮಾ ಸೌಲಭ್ಯ ಕೆಲ ವರ್ಷಗಳಿಂದ ರೈತರಿಗೆ ಸಹಕಾರಿಯಾಗಿತ್ತು. ಆದರೆ ಕಳೆದ ವರ್ಷ ತಾಲೂಕಿನ ಬಹುತೇಕ ರೈತರಿಗೆ ವಿಮಾ ಪರಿಹಾರ ಹಣ ಲಭ್ಯವಾಗಿಲ್ಲ. ನಿರಂತರ ಐದು ತಿಂಗಳು ಮಳೆಯಾಗಿದ್ದರೂ, ಇಲಾಖೆಯ ದಾಖಲೆಗಳಲ್ಲಿ ಮಳೆ ಪ್ರಮಾಣ ದಾಖಲಾಗಿಲ್ಲದಿರುವುದೇ ಇದಕ್ಕೆ ಕಾರಣ. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಳವಡಿಸಿರುವ ಮಳೆ ಮಾಪನಗಳು ಕೆಟ್ಟು ನಿಂತಿವೆ. ಅವುಗಳ ನಿರ್ವಹಣೆಯಲ್ಲಿ ಸಂಬಂಧಪಟ್ಟ ಇಲಾಖೆ ವಿಫಲವಾಗಿದೆ.

ಇತ್ತೀಚಿನ ವರದಿ ಪ್ರಕಾರ ತಾಲೂಕಿನಲ್ಲಿ 11 ಮಾಪನಗಳು ಕಾರ್ಯನಿರ್ವಹಿಸುತ್ತಿಲ್ಲ. ಜಿಲ್ಲಾ ಮಟ್ಟದಲ್ಲಿ ಸಭೆ ನಡೆದು ಸರಿಪಡಿಸಲು ಕ್ರಮ ವಹಿಸುವುದಾಗಿ ಅಧಿಕಾರಿಗಳು ಹೇಳಿದ್ದರು. ಆದರೆ ಮಳೆಗಾಲ ಆರಂಭವಾಗಿ ತಿಂಗಳು ಕಳೆದರೂ ಮಾಪನಗಳು ಮಾತ್ರ ದುರಸ್ತಿಗೊಂಡಿಲ್ಲ. ನಾವು ಬೆಳೆ ವಿಮೆ ಕಟ್ಟಬೇಕೋ ಬೇಡವೋ ಎಂದು ತಿಳಿಯುತ್ತಿಲ್ಲ. ಕಟ್ಟಿದರೂ ಮಳೆಮಾಪನ ಕೆಲಸ ಮಾಡದಿದ್ದರೆ ವಿಮಾ ಹಣ ದಂಡವಾಗುತ್ತದೆ. ರೈತರ ಹಿತ ಕಾಯುವ ನಿಟ್ಟಿನಲ್ಲಿ ತಕ್ಷಣದಲ್ಲಿ ಈ ಯಂತ್ರಗಳನ್ನು ಸರಿಪಡಿಸಬೇಕು ಎಂದು ಮನವಿಯಲ್ಲಿ ತಿಳಿಸಿದರು.
ಈ ವೇಳೆ ಪ್ರಮುಖರಾದ ಡಿ.ಆರ್.ವಿನಯ್ಕುಮಾರ್ ದುಮ್ಮ, ವಿನಾಯಕ ಚಕ್ಕಾರು, ರವಿ ಗುಬ್ಬಿಗ, ಎರಗಿ ಉಮೇಶ್, ಅರವಿಂದ, ರಮಾಕಾಂತ್, ಸಂದೀಪ್ ಮತ್ತಿತರರು ಇದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





