ಶಿವಮೊಗ್ಗ : ಐದು ವರ್ಷಗಳ ಹಿಂದೆ ಶಿವಮೊಗ್ಗ ನಗರದ ಹೊನ್ನಾಳಿ ರಸ್ತೆಯ ರಾಘವೇಂದ್ರ ಕ್ಲಾತ್ ಹತ್ತಿರ ನಡೆದ ದರೋಡೆ ಪ್ರಕರಣದಲ್ಲಿ ಒಬ್ಬ ಆರೋಪಿಗೆ 7 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 10,000 ರೂ. ದಂಡ ವಿಧಿಸಲಾಗಿದೆ.
2021 ರ ಮೇ 4ರಂದು ರಾತ್ರಿ ಸುಮಾರು 2:45ರ ಸಮಯದಲ್ಲಿ, ಮೊಹಮ್ಮದ್ ನೂರುಲ್ಲಾ, ಮೊಹಮ್ಮದ್ ತಬರಕ್ ಉಲ್ಲಾ ಹಾಗೂ ಸೈಯದ್ ಅಹಮ್ಮದ್ ಎಂಬ ಆರೋಪಿಗಳು ದೂರುದಾರರ ಬಳಿ ಚಾಕು ತೋರಿಸಿ ಬೆದರಿಕೆ ಹಾಕಿ 500 ರೂ. ನಗದು ಹಾಗೂ 12,000 ರೂ. ಮೌಲ್ಯದ ಮೊಬೈಲ್ ಫೋನ್ ಕದ್ದ ಘಟನೆ ನಡೆದಿತ್ತು. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆಯನ್ನು ಆಗಿನ ತನಿಖಾಧಿಕಾರಿ ಸಂಜೀವ್ ಕುಮಾರ್ ನಡೆಸಿ, ಆರೋಪಿಗಳ ವಿರುದ್ಧ ನ್ಯಾಯಾಲಯದಲ್ಲಿ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಮಮತಾ ಬಿ.ಎಸ್. ವಾದ ಮಂಡಿಸಿದ್ದರು.
ಓರ್ವ ಆರೋಪಿ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ 1ನೇ ಹೆಚ್ಚುವರಿ ಮತ್ತು ಸತ್ರಾ ನ್ಯಾಯಾಲಯದ ನ್ಯಾಯಾಧೀಶ ಅಭಯ್ ಧನಪಾಲ್ ಚೌಗಲ್ ಆರೋಪಿ ಮೊಹಮ್ಮದ್ ನೂರುಲ್ಲಾಗೆ 7 ವರ್ಷಗಳ ಜೈಲು ಶಿಕ್ಷೆ ಮತ್ತು 10,000 ರೂ. ದಂಡ ವಿಧಿಸುವ ಮೂಲಕ ತೀರ್ಪು ನೀಡಿದ್ದಾರೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





