ಹೊಸನಗರ : ಪೊಲೀಸ್ ಠಾಣಾ ವ್ಯಾಪ್ತಿಯ ಪಟಗುಪ್ಪ ಸೇತುವೆ ಬಳಿ ನಡೆದ ಗೋಹತ್ಯೆ ಪ್ರಕರಣವನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ.
ಜೂನ್ 19ರಂದು ಹೊಸಕೊಪ್ಪ ಗ್ರಾಮದ ಪಟಗುಪ್ಪ ಸೇತುವೆ ಸಮೀಪದಲ್ಲಿ ದುಷ್ಕರ್ಮಿಗಳು ಮಾಂಸ ಮಾಡುವ ಉದ್ದೇಶದಿಂದ ಗೋಹತ್ಯೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದರು.
ಈ ಪ್ರಕರಣ ಸಂಬಂಧ ಹೊಸನಗರ ಪೊಲೀಸ್ ಠಾಣೆಯ ಸಿಪಿಸಿ ಗೋಪಾಲಕೃಷ್ಣ ಅವರ ವರದಿಯ ಮೇರೆಗೆ ಪ್ರಕರಣ ದಾಖಲಾಗಿದ್ದು, ಗೋಹತ್ಯೆ ನಿಷೇಧ ಮತ್ತು ಸಂರಕ್ಷಣಾ ಕಾಯ್ದೆ-2020ರ ಕಲಂ 4, 7, 12 ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯ ಕಲಂ 11(1)(ಡಿ) ಅಡಿಯಲ್ಲಿ ತನಿಖೆ ನಡೆಯುತ್ತಿತ್ತು.
ಹೊಸನಗರ ವೃತ್ತದ ಪೊಲೀಸ್ ವೃತ್ತ ನಿರೀಕ್ಷಕ ಎಂ.ಐ. ಗೌಡಪ್ಪಗೌಡ್ರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿ ಕಾರ್ಯಾಚರಣೆ ನಡೆಸಿ ಜುಲೈ 4ರಂದು ಹೊಸನಗರ, ರಿಪ್ಪನ್ಪೇಟೆ ಮತ್ತು ನಗರ ಠಾಣೆಗಳ ಪಿಎಸ್ಐಗಳು ಹಾಗೂ ಶಿವಮೊಗ್ಗ ಎಎನ್ಸಿ ವಿಭಾಗದ ಅಧಿಕಾರಿಗಳ ಸಹಕಾರದಿಂದ ಕೃತ್ಯಕ್ಕೆ ಬಳಸಿದ್ದ 02 ಬೈಕ್ ಸಹಿತ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಅಕ್ಕಿಆಲೂರು ಗ್ರಾಮದ ಮಹಮದ್ ಸಲೀಂ ಬಾಳೂರ್ (34), ಮಕಬುಲ್ ಅಹ್ಮದ್ ಬಡಿಗೇರ (22), ಸುಲೇಮಾನ್ ಕೋಲಾರಿ (26) ಮತ್ತು ಮಲ್ಲಿಕ್ ರಿಹಾನ್ (25) ಇವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆಗಳು ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಹೊಸನಗರ ಠಾಣೆಯ ಕಿರಣ್ ಕುಮಾರ್ ಡಿ.ವೈ., ಶಿವಕುಮಾರನಾಯ್ಕ್, ಮಾಯಪ್ಪ ಗೋಕಾವಿ, ರವಿಚಂದ್ರ, ಸುನಿಲ್, ಗೋಪಾಲಕೃಷ್ಣ, ಮಧುಸೂಧನ್, ಜಗದೀಶ್ ಹಾಗೂ ಶಿವಮೊಗ್ಗ ಎಎನ್ಸಿ ವಿಭಾಗದ ಗುರುರಾಜ್ ಮತ್ತು ಇಂದೇಶ್ ಭಾಗವಹಿಸಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





