ಶಿವಮೊಗ್ಗ

ಅಪ್ರಾಪ್ತನಿಗೆ KTM ಬೈಕ್ ಓಡಿಸಲು ನೀಡಿದ ಮಾಲೀಕನಿಗೆ ₹25 ಸಾವಿರ ದಂಡ

ಶಿವಮೊಗ್ಗ: ಅಪ್ರಾಪ್ತ ಬಾಲಕನಿಗೆ ಮೋಟಾರ್‌ಸೈಕಲ್ ಚಾಲನೆ ಮಾಡಲು ಅವಕಾಶ ನೀಡಿದ ಪ್ರಕರಣದಲ್ಲಿ ವಾಹನದ ಮಾಲೀಕನಿಗೆ ಶಿವಮೊಗ್ಗದ ನ್ಯಾಯಾಲಯ ₹25,000 ದಂಡ ವಿಧಿಸಿದೆ.

ನಗರದ ಸೋಮಿನಕೊಪ್ಪ ರಸ್ತೆಯಲ್ಲಿ ವಿನೋಬನಗರ ಪೊಲೀಸ್ ಠಾಣೆಯ ಸಿಬ್ಬಂದಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ, ಬಾಲಕನೊಬ್ಬ KTM ಡ್ಯೂಕ್ ಬೈಕ್ ಅನ್ನು ವಿರುದ್ಧ ದಿಕ್ಕಿನಲ್ಲಿ ವೇಗವಾಗಿ ಚಲಾಯಿಸಿಕೊಂಡು ಬಂದಿದ್ದಾನೆ ಎನ್ನಲಾಗಿದೆ.

ಪೊಲೀಸರು ಬೈಕ್ ತಡೆದು ಚಾಲಕನನ್ನು ವಿಚಾರಿಸಿದಾಗ, ಆತ ಅಪ್ರಾಪ್ತ ಎಂಬುದು ತಿಳಿದುಬಂದಿದೆ. ನಂತರ ವಾಹನದ ದಾಖಲೆಗಳನ್ನು ಪರಿಶೀಲಿಸಿ, ಅಪ್ರಾಪ್ತನಿಗೆ ಬೈಕ್ ಚಾಲನೆಗೆ ನೀಡಿದ ಆರೋಪದ ಮೇಲೆ ವಾಹನದ ಮಾಲೀಕನ ವಿರುದ್ಧ ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು.

ಪ್ರಕರಣದ ತನಿಖೆ ಪೂರ್ಣಗೊಳಿಸಿದ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ವಾಹನದ ಮಾಲೀಕನಿಗೆ ₹25,000 ದಂಡ ವಿಧಿಸಿ ಆದೇಶಿಸಿದೆ.

ಅಪ್ರಾಪ್ತರಿಗೆ ವಾಹನ ಚಾಲನೆ ಮಾಡಲು ಅವಕಾಶ ನೀಡುವುದು ಅವರ ಜೀವಕ್ಕೆ ಮಾತ್ರವಲ್ಲದೆ, ರಸ್ತೆಯಲ್ಲಿ ಸಂಚರಿಸುವ ಇತರರ ಸುರಕ್ಷತೆಗೂ ಅಪಾಯ ಉಂಟುಮಾಡುತ್ತದೆ. ಪೋಷಕರು ಮತ್ತು ವಾಹನ ಮಾಲೀಕರು ಚಾಲನಾ ಪರವಾನಗಿ ಇಲ್ಲದ ಮಕ್ಕಳಿಗೆ ವಾಹನ ನೀಡದಂತೆ ಎಚ್ಚರಿಕೆ ವಹಿಸಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.

Leave a Comment