ಹೊಳೆಹೊನ್ನೂರು, ಆಗಸ್ಟ್ 3: ಕೌಟುಂಬಿಕ ಕಲಹದ ವೇಳೆ ಮಗನೇ ತಂದೆಯ ಕತ್ತು ಹಿಸುಕಿ ಹತ್ಯೆ ಮಾಡಿರುವ ಆರೋಪ ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ಅರಿಶಿಣಘಟ್ಟ ತಾಂಡಾದಲ್ಲಿ ಕೇಳಿಬಂದಿದೆ.
ಮೃತರನ್ನು ಶಿವಗನಾಯ್ಕ (55) ಎಂದು ಗುರುತಿಸಲಾಗಿದೆ. ಕಳೆದ ರಾತ್ರಿ ಮನೆಯಲ್ಲಿ ನಡೆದ ಕೌಟುಂಬಿಕ ಕಲಹದ ವೇಳೆ ಪುತ್ರ ಮಂಜುನಾಥ ನಾಯ್ಕ ತಂದೆಯ ಕತ್ತು ಹಿಸುಕಿದ್ದಾನೆ ಎಂದು ಆರೋಪಿಸಲಾಗಿದೆ.
ಘಟನೆಯ ಬಳಿಕ ಶಿವಗನಾಯ್ಕ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಘಟನೆಗೆ ಕಾರಣವಾದ ನಿಖರ ಪರಿಸ್ಥಿತಿ ಹಾಗೂ ಕೌಟುಂಬಿಕ ಕಲಹದ ಹಿನ್ನೆಲೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೇಟಿ
ಘಟನೆಯ ಮಾಹಿತಿ ತಿಳಿದ ತಕ್ಷಣ ಹೊಳೆಹೊನ್ನೂರು ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ನಿಖಿಲ್ ಅರಿಶಿಣಘಟ್ಟ ತಾಂಡಾಗೆ ತೆರಳಿ ಘಟನಾ ಸ್ಥಳವನ್ನು ಪರಿಶೀಲಿಸಿದರು.
ತನಿಖಾಧಿಕಾರಿಗಳಿಂದ ಪ್ರಕರಣದ ಪ್ರಾಥಮಿಕ ಮಾಹಿತಿ ಪಡೆದ ಅವರು, ಮುಂದಿನ ತನಿಖೆಗೆ ಅಗತ್ಯ ಸೂಚನೆ ನೀಡಿರುವುದಾಗಿ ತಿಳಿದುಬಂದಿದೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಅದರ ವರದಿ ಮತ್ತು ಪೊಲೀಸ್ ತನಿಖೆಯ ಬಳಿಕ ಸಾವಿನ ನಿಖರ ಕಾರಣ ಹಾಗೂ ಘಟನೆಯ ಸಂಪೂರ್ಣ ವಿವರ ಸ್ಪಷ್ಟವಾಗಲಿದೆ.