ರಿಪ್ಪನ್ಪೇಟೆ : ಹುಂಚ ಗ್ರಾಮದ ಸ.ನಂ 89/1 ರಲ್ಲಿನ ಮಾದ್ಲಮನೆ ಪುಟ್ಟಮ್ಮ ಕೋಂ ನಾರಾಯಣಪ್ಪ ಎಂಬುವರಿಗೆ ಸೇರಿದ 1 ಎಕರೆ ಜಮೀನಿನಲ್ಲಿ ಬೆಳೆಯಲಾದ ಅಡಿಕೆ ಗಿಡಗಳನ್ನು ಕಡಿದು ತೋಟ ನಾಶ ಮಾಡುವ ಮೂಲಕ ದೌರ್ಜನ್ಯ ಎಸಗಿರುವ ಆರೋಪದ ಮೇಲೆ ಗ್ರಾಮದ ಚಂದ್ರ ಬಿನ್ ದೋಸೆರಾಮ ಎಂಬುವರ ವಿರುದ್ಧ ರಿಪ್ಪನ್ಪೇಟೆ ಠಾಣೆಯಲ್ಲಿ ದೂರು ನೀಡಲಾಗಿದ್ದರೂ ಕೂಡಾ ಪೊಲೀಸರು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆಂದು ಹೊಸನಗರ ತಾಲ್ಲೂಕು ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಚಿಟ್ಟೆಗದ್ದೆ ಪುರುಷೋತ್ತಮ್ ಆರೋಪಿಸಿ, ಕ್ರಮ ಜರುಗಿಸದಿದ್ದರೆ ಠಾಣೆಯ ಮುಂಭಾಗ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ರಿಪ್ಪನ್ಪೇಟೆ ಗ್ರಾ.ಪಂ. ಸಭಾಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಖಾತೆ ಜಮೀನಿಗೆ ಹೊಂದಿಕೊಂಡಿರುವ ಜಾಗದಲ್ಲಿ ಕಳೆದ ಹಲವಾರು ವರ್ಷಗಳಿಂದ ನೀಲಗಿರಿ ಮತ್ತು ಅಡಿಕೆ ಬಾಳೆ ಗಿಡಗಳನ್ನು ಬೆಳೆಸಿಕೊಂಡು ಜೀವನ ಸಾಗಿಸುತ್ತಿರುವ ರೈತ ಕುಟುಂಬ ಮಾದ್ಲಮನೆ ಪುಟ್ಟಮ್ಮ ಕೋಂ ನಾರಾಯಣಪ್ಪ ಮತ್ತು ರೇಣುಕಮ್ಮ ಮತ್ತು ನಾಗರಾಜಶೇಟ್ರನ್ನು ಒಕ್ಕಲೆಬ್ಬಿಸುವ ಹುನ್ನಾರದಿಂದ ಹುಂಚ ಗ್ರಾಮದ ಚಂದ್ರ ಬಿನ್ ದೋಸೆರಾಮ ಪದೇ ಪದೇ ಈ ಜಾಗಕ್ಕೆ ಬಂದು ಬೆಳೆಯನ್ನು ಕಿತ್ತು ಹಾಕಿ ಜಾತಿ ಹೆಸರಿನಲ್ಲಿ ರೈತ ಕುಟುಂಬದವರಿಗೆ ಬೆದರಿಕೆ ಹಾಕುತ್ತಿದ್ದಾನೆಂದು ಠಾಣೆಗೆ ಲಿಖಿತವಾಗಿ ದೂರು ನೀಡಲಾದರೂ ಕೂಡಾ ಪೊಲೀಸ್ ಇಲಾಖೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆಂದು ಆರೋಪಿಸಿದ್ದಾರೆ.

ಈ ಬಗ್ಗೆ ಕ್ರಮ ಜರುಗಿಸಲು ಮುಂದಾಗದಿದ್ದರೆ ಇನ್ನೂ ಎರಡು ದಿನಗಳಲ್ಲಿ ಠಾಣೆಯ ಮುಂಭಾಗ ಮಾದ್ಲಮನೆ ಪುಟ್ಟಮ್ಮ ರೈತ ಕುಟುಂಬದ ರೇಣುಕ ನಾಗರಾಜಶೇಟ್ರೊಂದಿಗೆ ಹೊಸನಗರ ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ಪ್ರತಿಭಟನೆಯನ್ನು ನಡೆಸಲಾಗುವುದೆಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡ ಹೆದ್ದಾರಿಪುರ ರಾಮಣ್ಣಗೌಡ, ಜಿಲ್ಲಾ ಬಿಜೆಪಿ ರೈತ ಮೋರ್ಚಾ ಮುಖಂಡ ಯೋಗೇಂದ್ರಪ್ಪಗೌಡ, ಬಿಜೆಪಿ ರೈತ ಮೋರ್ಚಾ ಖಜಾಂಚಿ ಕಲ್ಲೂರು ಆದರ್ಶ, ರೇಣುಕಮ್ಮ, ಹೆಚ್.ಎ.ನಾಗರಾಜಶೇಟ್, ಇನ್ನಿರರಿದ್ದರು.