ಹೊಸನಗರ

ಮಲೆನಾಡಿನ ಹಳ್ಳಿಗಳನ್ನು ಪರಿಸರ ಸೂಕ್ಷ್ಮ ಪ್ರದೇಶದ ಪಟ್ಟಿಗೆ ಸೇರಿಸಲು ಕೇಂದ್ರ ಸರ್ಕಾರ ಮುಂದಾಗಿರುವುದು ಸರಿಯಲ್ಲ ; ಬಿ.ಜಿ. ಚಂದ್ರಮೌಳಿ

ಹೊಸನಗರ ; ಮಲೆನಾಡು ಪ್ರದೇಶದ ಹಳ್ಳಿಗಳನ್ನು ಕಸ್ತೂರಿ ರಂಗನ್ ವರದಿ ಅನ್ವಯ ಪರಿಸರ ಸೂಕ್ಷ್ಮ ಪ್ರದೇಶದ ಪಟ್ಟಿಗೆ ಸೇರಿಸಬೇಕೆಂದು ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆ ಸ್ಥಳೀಯರ ಅಭಿಪ್ರಾಯ ಪಡೆಯದೇ ಏಕಪಕ್ಷಿಯ ನಿರ್ಣಾಯವಾಗಿದ್ದು ಇದು ಮಲೆನಾಡಿನ ಹಳ್ಳಿಗರ ಮೇಲೆ ಹೇರಿರುವ ಕೇಂದ್ರ ಸರ್ಕಾರದ ದೌರ್ಜನ್ಯವಾಗಿದೆ ಎಂದು ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ. ಚಂದ್ರಮೌಳಿ ಹೇಳಿದರು.

ಇಲ್ಲಿನ ಕಾಂಗ್ರೆಸ್ ಕಛೇರಿ (ಗಾಂಧಿಮಂದಿರ) ಯಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, 2013ರಿಂದ ಕಸ್ತೂರಿ ರಂಗನ್ ವರದಿ ಅನುಷ್ಠಾನ ವಿರೋಧಿಸಿ ಮಲೆನಾಡು ಜಿಲ್ಲೆಗಳ ರೈತರು ನಿರಂತರವಾಗಿ ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಆದಾಗ್ಯೂ ಪಶ್ಚಿಮ ಘಟ್ಟದ ವ್ಯಾಪ್ತಿಗೆ 1576 ಗ್ರಾಮಗಳನ್ನು ಪರಿಸರ ಸೂಕ್ಷ್ಮ ಪ್ರದೇಶ ಪಟ್ಟಿಗೆ ಸೇರಿಸಲು ಕೆಂದ್ರ ಸರ್ಕಾರ ಮುಂದಾಗಿರುವುದು ಜನ ವಿರೋಧಿ ನೀತಿಯ ಜೊತೆಗೆ ಮಲೆನಾಡು ರೈತರ ಕಗ್ಗೂಲೆಯಾಗಿದೆ ಎಂದರು.

ಯಾವುದೇ ಒಂದು ಗ್ರಾಮವನ್ನು ಪರಿಸರ ಸೂಕ್ಷ್ಮ ಪ್ರದೇಶ ಪಟ್ಟಿಗೆ ಸೇರಿಸಿದರೆ ಆ ಜಾಗಕ್ಕೆ ಅನೇಕ ನಿರ್ಬಂಧ ಹೇರಲಾಗುತ್ತದೆ. ಕೃಷಿ ಚಟುವಟಿಕೆ ಯಂತ್ರೋಪಕರಣಗಳನ್ನು ಬಳಸಲು ಕಡಿವಾಣ ಹಾಕಲಾಗುತ್ತದೆ. ಜಾನುವಾರುಗಳ ಓಡಾಟಕ್ಕೆ ಕಡಿವಾಣ ಹಾಕಲಾಗುತ್ತದೆ. ಜನ, ಜಾನುವಾರು ಹಾಗೂ ಅಭಿವೃದ್ಧಿಗೆ ತಡೆಗೋಡೆ ನಿರ್ಮಿಸಲಾಗುತ್ತದೆ. ಈಗಾಗಲೇ ಅರಣ್ಯ ಇಲಾಖೆಯವರು ಅತಿರೇಕದ ಕ್ರಮಗಳಿಂದ ಮಲೆನಾಡಿನ ಹಳ್ಳಿಗಳ ಜನರು ಹೈರಾಣಾಗಿದ್ದಾರೆ. ಜನರ ಭಾವನೆಗಳ ಜೊತೆ ಕೇಂದ್ರ ಸರ್ಕಾರ ಚೆಲ್ಲಾಟವಾಡುವುದನ್ನು ನಿಲ್ಲಿಸಿ ಕಸ್ತೂರಿ ರಂಗನ್ ವರದಿಯ ಬಗ್ಗೆ ರೈತರ ಜನಗಳ ಜೊತೆಗೆ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಿ ಎಂದರು.

ಹರತಾಳು ಹಾಲಪ್ಪ ಗಾಳಿಯಲ್ಲಿ ಗುಂಡು ಹೊಡೆಯುವುದನ್ನು ನಿಲ್ಲಿಸಲಿ :

ಮಾಜಿ ಸಚಿವ ಹರತಾಳು ಹಾಲಪ್ಪ ಸಾಗರದಲ್ಲಿ ಪ್ರತಿಭಟನೆ ನಡೆಸುವಾಗ ಶಾಸಕ ಬೇಳೂರು ಗೋಪಾಲಕೃಷ್ಣ ಬಿಜೆಪಿ ಪಕ್ಷಕ್ಕೆ ಬರಲೂ ತುದಿಗಾಲಿನಲ್ಲಿ ನಿಂತಿದ್ದಾರೆ. ಬಿಜೆಪಿಯ ಮುಖಂಡರನ್ನು ಸಂಪರ್ಕಿಸಿದ್ದಾರೆ ಎಂದು ಗಾಳಿಯಲ್ಲಿ ಗುಂಡು ಹೊಡೆದಿದ್ದಾರೆ. ಗಾಳಿಯಲ್ಲಿ ಗುಂಡು ಹೊಡೆಯುವುದು ನಿಮ್ಮ ವ್ಯಕ್ತಿತ್ವಕ್ಕೆ ಸರಿ ಹೊಂದುವುದಿಲ್ಲ ಅದನ್ನು ಸಾಬೀತುಪಡಿಸಲಿ ಎಂದರು.

ಎಲ್ಲ ಶಾಸಕರಿಗೂ ಸಚಿವರಾಗುವ ಆಸೆ ಇರುತ್ತದೆ :

ಎಲ್ಲ ಶಾಸಕರಿಗೂ ಸಚಿವರಾಗುವ ಆಸೆ ಇರುತ್ತದೆ. ಬೇಳೂರು ಗೋಪಾಲಕೃಷ್ಣ ಒಂದೂವರೆ ತಿಂಗಳಿಂದ ಕ್ಷೇತ್ರಕ್ಕೆ ಬರದೇ ಸಚಿವರಾಗುವ ಲಾಬಿಯಲ್ಲಿ ಬೆಂಗಳೂರು, ಡೆಲ್ಲಿಯಲ್ಲಿ ಕುಳಿತಿದ್ದಾರೆ ಎಂದು ಮಾಜಿ ಶಾಸಕರು ಹೇಳಿದ್ದು ಒಂದೂವರೆ ತಿಂಗಳಿಂದ ಶಾಸಕರು ಕ್ಷೇತ್ರಕ್ಕೆ ಬಂದು ಹೋಗುವುದರ ಜೊತೆಗೆ ಕಾಂಗ್ರೆಸ್ ಪಕ್ಷದ ಕಾಯಕರ್ತರಿಗೆ ಹಾಗೂ ಆಪ್ತ ಕಾರ್ಯದರ್ಶಿಗಳಿಗೆ ಅಧಿಕಾರಿಗಳೊಂದಿಗೆ ಪ್ರತಿ ದಿನ ಚರ್ಚಿಸುವುದರ ಜೊತೆಗೆ ಕ್ಷೇತ್ರದ ಜನತೆಗೆ ತೊಂದರೆಯಾಗದ ರೀತಿಯಲ್ಲಿ ನೋಡಿಕೊಂಡಿದ್ದಾರೆ. ಕ್ಷೇತ್ರದ ಜನರಿಗೆ ತೊಂದರೆಯಾದ ತಕ್ಷಣದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸ್ಪಂದಿಸಿದ್ದಾರೆ. ಅದು ಅಲ್ಲದೇ ಶಾಸಕರು ತಮ್ಮ ಸ್ವಂತ ಹಣವನ್ನು ಶಾಸಕರ ಆಪ್ತ ಕಾರ್ಯದರ್ಶಿಗಳ ಮೂಲಕ ನೊಂದವರ ಕುಟುಂಬಕ್ಕೆ ತಲುಪಿಸುವ ಕೆಲಸ ಮಾಡಿದ್ದಾರೆ. ಶಾಸಕರು ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದು ಅಧಿಕಾರಿಗಳು ಕ್ಷೇತ್ರದ ಜನರಿಗೆ ಸ್ಪಂದಿಸಿ ಎಲ್ಲ ಕೆಲಸವನ್ನು ಮಾಡಿದ್ದಾರೆ. ಯಾವ ಶಾಸಕರು ಮಾಡದ ಕೆಲಸವನ್ನು ನಮ್ಮ ಶಾಸಕರು ಮಾಡಿ ತೋರಿಸಿದ್ದಾರೆ ಎಂದರು.

ಭಾರತ್ ಜೋಡೋ ಯುವಕ ಸಂಘಕ್ಕೆ ಸೇರ್ಪಡೆಯಾಗಿ:

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಭಾರತ್ ಜೋಡೋ ಯುವಕ ಸಂಘವನ್ನು ನೂತನ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಗಾಮ ಪಂಚಾಯತಿ ಮಟ್ಟದಲ್ಲಿ ತೆರೆಯುತ್ತಿದ್ದು ಒಂದು ಗ್ರಾಮಕ್ಕೆ 100 ಕ್ಕಿಂತ ಹೆಚ್ಚು ಯುವಕರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ 10 ರೂಪಾಯಿ ಪೇ ಮಾಡಿ ಒಂದೊಂದು ಗ್ರಾಮಕ್ಕೆ ₹ 10 ಲಕ್ಷದವರೆಗೆ ಸರ್ಕಾರ ಮೂರು ಕಂತುಗಳಲ್ಲಿ ಗ್ರಾಮದ ಅಭಿವೃದ್ಧಿಗೆ ನೀಡುವ ಭರವಸೆ ಹೊಂದಿದ್ದು ಈ ಹಣವನ್ನು ಗ್ರಾಮ ಪಂಚಾಯತಿ ಅಭಿವೃದ್ಧಿಗೆ ಯುವಕ ಸಂಘದ ಮೂಲಕ ವ್ಯಯ ಮಾಡಬಹುದು ಅದು ಅಲ್ಲದೇ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಗ್ರಾಮದಲ್ಲಿ ಉತ್ತಮ ಕೆಲಸ ಮಾಡಲು ಯುವಕ ಸಂಘದ ಮೂಲಕ ಅನುಕೂಲವಾಗಲಿದ್ದು ಸದಸ್ಯತ್ವ ಇಂದಿನಿಂದಲೇ ಪಡೆಯಿರಿ ಯೋಜನೆಯನ್ನು ಎಲ್ಲ ಯುವಕರು ಸದುಪಯೋಗಪಡಿಸಿಕೊಳ್ಳಿ ಎಂದರು.

ಹಿಂದಿನ ಸರ್ಕಾರ ಗುತ್ತಿಗೆದಾರರಿಗೆ ಹಣ ಸಂದಾಯ ಮಾಡಿಲ್ಲ :

ಹಿಂದಿನ ಬಿಜೆಪಿ ಸರ್ಕಾರ ಗುತ್ತಿಗೆದಾರರಿಂದ ಕೆಲಸ ಮಾಡಿಸಿಕೊಂಡು ಗುತ್ತಿಗೆದಾರರಿಗೆ ಹಣ ನೀಡಲ್ಲ. ನಾವು 2023ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಿಕ್ಕೆ ಬಂದಾಗ ನೂರಾರು ಕೋಟಿ ಗುತ್ತಿಗೆದಾರರಿಗೆ ಬಾಕಿ ಇದ್ದು ಆ ಸಾಲ ತೀರಿಸುತ್ತಿದ್ದೇವೆ. ಹಾಗಾಗಿ ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತಿಲ್ಲ. ನಮ್ಮ ಕಾಂಗ್ರೆಸ್ ಸರ್ಕಾರ ಹಿಂದಿನ ಗುತ್ತಿಗೆದಾರರ ಸಾಲ ತೀರಿಸುತ್ತಿದ್ದು ಜೊತೆಗೆ 5 ಗ್ಯಾರಂಟಿ ಯೋಜನೆಯನ್ನು ಜನರಿಗೆ ತಲುಪಿಸುತ್ತಿದ್ದೇವೆ. ನಮ್ಮ ಸರ್ಕಾರದ ಬಗ್ಗೆ ದೂರುವ ಹಕ್ಕು ಯಾರಿಗೂ ಯಾವ ಪಕ್ಷದವರಿಗೂ ಇಲ್ಲ ಎಂದು ಖಾರವಾಗಿ ಹೇಳಿದರು.

ಬುದ್ಧಿವಂತ ಮಾಜಿ ಸಚಿವರ ಬಾಯಲ್ಲಿ ಇಂತಹ ಮಾತುಗಳು ಸಲ್ಲ : ಚಿದಂಬರ

ನಾನೇ ಬುದ್ಧಿವಂತ ನನ್ನನ್ನೂ ಬಿಟ್ಟರೇ ಈ ರಾಜ್ಯದಲ್ಲಿ ದೇಶದಲ್ಲಿ ಯಾರು ಇಲ್ಲ ಎಂಬ ರೀತಿಯಲ್ಲಿ ಮಾತನಾಡುತ್ತಿರುವ ಮಾಜಿ ಸಚಿವ ಹಾಲಪ್ಪನವರೇ ನೀವು ಮೂರು ಬಾರಿ ಶಾಸಕರಾಗಿ ಸಾಗರ-ಹೊಸನಗರ ಕ್ಷೇತ್ರಕ್ಕೆ ಏನೂ ಅಭಿವೃದ್ಧಿ ಮಾಡಿದ್ದೀರಿ? ಅಂದು ಮಳೆಮಾಪನ ಸರಿಯಿತ್ತೆ? ನೀವು ಯಾವಾಗಲಾದರೂ ಬಡ ಜನರ ಪರವಾಗಿ ಕೆಲಸ ಮಾಡಿದ್ದೀರಾ? ನಿಮ್ಮ ಆಡಳಿತ ನಾವು ನೋಡಿದ್ದೇವೆ. ನೀವು ಶಾಸಕ ಬೇಳೂರು ಗೋಪಾಲಕೃಷ್ಣರಿಗೆ ಸುಳ್ಳುಗಾರ ಎಂದು ಹೇಳುವ ಯಾವುದೇ ನೈತಿಕತೆ ನಿಮಗಿಲ್ಲ ಎಂದು ಗ್ಯಾರಂಟಿ ಯೋಜನೆಗಳ ತಾಲ್ಲೂಕು ಅಧ್ಯಕ್ಷ ಹೆಚ್.ಬಿ ಚಿದಂಬರ ಮಾಜಿ ಶಾಸಕರ ಬಗ್ಗೆ ಮಾತನಾಡಿದರು.

ಈ ಸುದ್ಧಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸದಾಶಿವ ಶ್ರೇಷ್ಠಿ, ಎಂ.ಪಿ ಸುರೇಶ್, ಪ್ರಭಾಕರ್, ಜಯಶೀಲಪ್ಪ ಗೌಡ, ಉಬೇದುಲ್ಲಾ, ಬೃಂದಾವನ ಪ್ರವೀಣ್, ನೇತ್ರಾ ಸುಬ್ರಾಯ ಭಟ್, ರಾಧಿಕ ರತ್ನಾಕರ್ ಶ್ರೇಷ್ಠಿ, ಬಾಳೆಕೊಪ್ಪ ಗಣೇಶ್, ಲೋಕೇಶ್, ಸಂತೋಷ್, ಚಂದ್ರಮೂರ್ತಿ, ಇಕ್ಬಾಲ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave a Comment