ರಿಪ್ಪನ್ಪೇಟೆ : ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ಕೆಸರು ಗದ್ದೆಯಂತಾಗಿದ್ದ ಹುಂಚ ಹೋಬಳಿ ಹೆದ್ದಾರಿಪುರ ಗ್ರಾಮ ಪಂಚಾಯಿತ್ ವ್ಯಾಪ್ತಿಯ ಕಣಬಂದೂರು, ಕೊಳವಳ್ಳಿ, ಯಡಗುಡ್ಡೆ, ಕರಡಿಗ, ಸಂಪಳ್ಳಿ ಮಾರ್ಗವಾಗಿ ಗವಟೂರು ಸೇರುವ ಬೈಪಾಸ್ ರಸ್ತೆ ದುಸ್ಥಿಯ ಓಡಾಡದಂತಾಗಿದೆ.
ಕಣಬಂದೂರು, ಕೊಳವಳ್ಳಿ, ಯಡಗುಡ್ಡೆ, ಕರಡಿಗ, ಸಂಪಳ್ಳಿ ಮಾರ್ಗದ ಬೈಪಾಸ್ ರಸ್ತೆಯಲ್ಲಿ ನಿತ್ಯ ಸುಮಾರು 30-40 ವಿದ್ಯಾರ್ಥಿಗಳು ಗವಟೂರು ಮಾರ್ಗವಾಗಿ ರಿಪ್ಪನ್ಪೇಟೆ ಶಾಲಾ, ಕಾಲೇಜ್ಗಳಿಗೆ ಮಕ್ಕಳು ಓಡಾಡುವ ಸಂಪರ್ಕದ ರಸ್ತೆಯಾಗಿದ್ದು ಸುಮಾರು 60-70 ಕುಟುಂಬಗಳ ವಾಸ ಮಾಡುವ ಈ ಮಾರ್ಗದಲ್ಲಿನ ಗ್ರಾಮಗಳಲ್ಲಿನ ಗ್ರಾಮಗಳಲ್ಲಿನ ರೈತಾಪಿ ವರ್ಗ ಹಾಗೂ ಸಾರ್ವಜನಿಕರು ಸಾಕಷ್ಟು ಭಾರಿ ಕ್ಷೇತ್ರದ ಜನಪತ್ರಿನಿಧಿಗಳ ಗಮನಕ್ಕೆ ತರಲಾದರೂ ಕೂಡಾ ಯಾವುದೇ ಪ್ರಯೋಜನವಾಗಿಲ್ಲ. ಮಳೆಗಾಲದಲ್ಲಿ ಇಲ್ಲಿನ ಸಂಪರ್ಕ ರಸ್ತೆ ಕೆಸರು ಗದ್ದೆಯಂತಾಗಿ ಶಾಲೆ, ಕಾಲೇಜ್ಗಳಿಗೆ ಬರುವ ವಿದ್ಯಾರ್ಥಿಗಳು ಆಕಸ್ಮಿಕವಾಗಿ ಜಾರಿ ಬಿದ್ದರೆ ಅಂದು ಶಾಲೆಗೆ ರಜೆ ಹಾಕಿ ಮನೆ ಸೇರಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಈ ಭಾಗದ ಸಾರ್ವಜನಿಕರು, ಶಾಲಾ ಮಕ್ಕಳು ತಮ್ಮ ಅಸಹಾಯಕತೆಯನ್ನು ಮಾಧ್ಯಮದವರ ಮುಂದೆ ತೋಡಿಕೊಂಡರು.
‘ಸ್ವಾಮಿ… ನಮ್ ಗೋಳು ಯಾರ್ ಹತ್ರ ಹೇಳಲ್ರಿ ಇಲ್ಲಿನ ಜನಪ್ರತಿನಿಧಿಗಳಿಗೆ ನಮ್ ಕೂಗ್ ಕೇಳಿಸಲ್ರಿ, ನೀವುಗಳಾದ್ರು ಬಂದ್ ನೋಡ್ರಿ’ ಎಂದು ತಮ್ಮ ಅಹವಾಲನ್ನು ಮಾಧ್ಯಮದವರ ಮುಂದೆ ತೋಡಿಕೊಂಡು ಹೆದ್ದಾರಿಪುರ ಗ್ರಾಮ ಪಂಚಾಯಿತ್ ಆಡಳಿತ ವರ್ಗದ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಇನ್ನೂ ಕ್ಷೇತ್ರದ ಶಾಸಕ ಅರಗ ಜ್ಞಾನೇಂದ್ರರವರಿಗೂ ಹೇಳಿಯಾಯಿತು. ಇನ್ನೂ ಜನಪ್ರತಿನಿಧಿಗಳಂತೆ ಅಧಿಕಾರಿ ವರ್ಗ ಸಹ ನಮ್ಮ ಸಮಸ್ಯೆಯನ್ನು ಕೇಳುವಷ್ಟು ಪುರಸೋತ್ತಿಲ್ಲದವರಂತೆ ವರ್ತಿಸುತ್ತಿದ್ದಾರೆ. ಹಾಗಾದರೆ ನಾವು ಯಾರನ್ನು ಕೇಳಬೇಕು ಹೇಳಿ ಸ್ವಾಮಿ ಎಂದು ತಮ್ಮ ಅಳಲನ್ನು ತೋಡಿಕೊಂಡರು.

ಚುನಾವಣೆ ಬಂತು ಅಂದರೆ ಸಾಕು ಐರಾವತವನ್ನು ಭೂವಿಗೆ ತಂದು ಇಳಿಸುತ್ತೇವೆ. ಏನಾದರೂ ಮಾಡಿ ನಮಗೆ ಮತಹಾಕಿ ಎಂದು ಅಸೆ ತೋರಿಸಿ ಕಡೆಗೆ ಬೈ ಹೇಳುವವರೇ ಇರುವಾಗ ನಮ್ಮ ಈ ಗೋಳು ಅವರಿಗೆ ಕೇಳಿಸುವುದಿಲ್ಲ ಎಂದು ಅಲ್ಲಿನ ವಿದ್ಯಾರ್ಥಿ ಸಮೂಹ ದೂರುತ್ತಿದ್ದು ಇನ್ನೂ ಮುಂಬರುವ ಸ್ಥಳೀಯ ಸಂಸ್ಥೆಯ ಚುನಾವಣೆಗೆ ಮೀಸಲಾತಿ ಪ್ರಕಟಗೊಂಡಿದ್ದು ಹುರಿಯಾಳುಗಳು ಮನೆಮನೆಗೆ ಬಂದು ಹೋಗುತ್ತಿದ್ದರೂ ನಮ್ಮ ಸಂಪರ್ಕದ ರಸ್ತೆಯ ದುಸ್ಥಿತಿ ಅವರಿಗೆ ಕಾಣಿಸಿದಂತ್ತಿಲ್ಲವಾಗಿದೆ. ಹೀಗೆ ಮುಂದುವರಿದರೆ ಈ ಭಾಗದ ಗ್ರಾಮಗಳ ರೈತಾಪಿವರ್ಗ ಚುನಾವಣೆ ಬಹಿಷ್ಕಾರ ಮಾಡುವುದರೊಂದಿಗೆ ಮತ ಕೇಳಲು ಬಾರದಂತೆ ಗ್ರಾಮದ ಸಂಪರ್ಕ ರಸ್ತೆಯಲ್ಲಿ ನಾಮಫಲಕ ಅಳವಡಿಸುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ.