ಸೌಮ್ಯ ಕೊಲೆ ಕೇಸ್, ಪ್ರಿಯಕರನ ಸಮ್ಮುಖದಲ್ಲಿ ಹೂತಿಟ್ಟ ಶವ ಹೊರತೆಗೆದ ಪೊಲೀಸರು !

Written by malnadtimes.com

Published on:

SAGARA | ಪ್ರಿಯತಮೆ ಸೌಮ್ಯಳನ್ನು ಕೊಲೆ ಮಾಡಿ ಆನಂದಪುರ ರೈಲ್ವೆ ಹಳಿ ಸಮೀಪದ ಮುಂಬಾಳು ಗ್ರಾಮದ ಮದ್ಲೆಸರ ರಸ್ತೆಯ ಕಾಲುವೆಯಲ್ಲಿ ಹೂತಿದ್ದ ಪ್ರಕರಣ ಸಂಬಂಧ ಪ್ರಿಯತಮ ಸೃಜನ್ ಸಮ್ಮುಖದಲ್ಲಿ ಸಾಗರ ಉಪವಿಭಾಗಾಧಿಕಾರಿ ಯತೀಶ್ ನೇತೃತ್ವದಲ್ಲಿ ಇಂದು ಪೊಲೀಸರು ಶವ ಹೊರತೆಗೆದಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಬಂಧಿತ ಆರೋಪಿ ಸೃಜನ್ (25) ನೀಡಿದ ಮಾಹಿತಿ ಆಧಾರದ ಮೇಲೆ, ಹೂಳಲಾಗಿದ್ದ ಶವವನ್ನು ಪೊಲೀಸರು ಹೊರತೆಗೆದಿದ್ದಾರೆ. ಈ ವೇಳೆ ಸ್ಥಳದಲ್ಲಿ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಸರ್ಕಾರಿ ವೈದ್ಯರ ಮೂಲಕ ಮರಣೋತ್ತರ ಪರೀಕ್ಷೆ ನಡೆಸಿ, ಶವವನ್ನು ಕುಟುಂಬದವರಿಗೆ ಹಸ್ತಾಂತರಿಸಿದ್ದಾರೆ.

ಘಟನೆ ವಿ‌ವರ : 

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಮೂಲದ ಯುವತಿ ಸೌಮ್ಯ (27) ಹಾಗೂ ಸಾಗರ ತಾಲೂಕು ತಾಳಗುಪ್ಪದ ಯುವಕ ಸೃಜನ್ (25) ಕಳೆದ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ತೀರ್ಥಹಳ್ಳಿಯ ಫೈನಾನ್ಸ್ ವೊಂದರಲ್ಲಿ ಸೃಜನ್ ಕೆಲಸ ಮಾಡುತ್ತಿದ್ದ. ಈ ಫೈನಾನ್ಸ್ ನಲ್ಲಿಯೇ ಸೌಮ್ಯ ತಾಯಿ ಕೂಡ ಸಾಲ ಪಡೆದುಕೊಂಡಿದ್ದರು ಎನ್ನಲಾಗಿದೆ.

ಈ ವೇಳೆ ಸೌಮ್ಯ ಪರಿಚಯವಾಗಿದೆ. ಇದು ಪ್ರೇಮಕ್ಕೆ ತಿರುಗಿದೆ. ನಂತರ ಆರೋಪಿ ಫೈನಾನ್ಸ್ ನಲ್ಲಿನ ಕೆಲಸ ಬಿಟ್ಟು ತನ್ನ ಊರಿಗೆ ಹಿಂದಿರುಗಿದ್ದ. ಕೆಲ ಕಾರಣಗಳಿಂದ ಇವರಿಬ್ಬರ ನಡುವೆ ವೈಮನಸ್ಸು ಸೃಷ್ಟಿಯಾಗಿತ್ತು. ಈ ನಡುವೆ ಯುವತಿಯು ಮದುವೆಯಾಗುವಂತೆ ಒತ್ತಾಯಿಸಲಾರಂಭಿಸಿದ್ದಳು.

ಜುಲೈ 2 ರಂದು ಯುವತಿಯು ಕೊಪ್ಪದಿಂದ ಸಾಗರಕ್ಕೆ ಆಗಮಿಸಿದ್ದಳು. ಆರೋಪಿಯು ತನ್ನ ಬೈಕಿನಲ್ಲಿ ಯುವತಿಯನ್ನು ರಿಪ್ಪನ್‌ಪೇಟೆ ಸಮೀಪದ ಹೆದ್ದಾರಿಪುರಕ್ಕೆ ಕರೆತಂದಿದ್ದ. ಮನೆಗೆ ಹೋಗುವಂತೆ ಸೂಚಿಸಿದ್ದ. ಆದರೆ ಇದಕ್ಕೆ ಯುವತಿ ಒಪ್ಪಿಕೊಂಡಿರಲಿಲ್ಲ. ಮದುವೆಯಾಗುವಂತೆ ಪಟ್ಟು ಹಿಡಿದಿದ್ದಳು ಎನ್ನಲಾಗಿದೆ.

ಈ ವೇಳೆ ಇವರಿಬ್ಬರ ನಡುವೆ ಜಗಳವಾಗಿದೆ. ಆರೋಪಿ ಸೃಜನ್ ಯುವತಿಯ ಮೇಲೆ ಹಲ್ಲೆ ನಡೆಸಿದ್ದ. ಕೆಳಕ್ಕೆ ಬಿದ್ದ ಯುವತಿ ಕುತ್ತಿಗೆ ಮೇಲೆ ಕಾಲಿಟ್ಟು, ಉಸಿರುಗಟ್ಟಿಸಿ ಸಾಯಿಸಿದ್ದ. ಹೆದ್ದಾರಿಪುರ ಅರಣ್ಯದಲ್ಲಿ ಶವವಿಟ್ಟು, ಬೈಕ್ ನಲ್ಲಿ ಸಾಗರಕ್ಕೆ ಆಗಮಿಸಿ ಕಾರು ತಂದಿದ್ದ.

ಯುವತಿಯ ಶವವನ್ನು ಕಾರಿನಲ್ಲಿ ತಂದು, ಆನಂದಪುರದ ರೈಲ್ವೆ ಹಳಿ ಸಮೀಪ ಜೆಜೆಎಂ ಕಾಮಗಾರಿಗೆ ತೆಗೆದಿದ್ದ ಕಾಲುವೆಯಲ್ಲಿ ಹಾಕಿ ಹೂತ್ತಿದ್ದ. ಈ ನಡುವೆ ಯುವತಿಯ ಪೋಷಕರು ಜು. 3 ರಂದು ಕೊಪ್ಪ ಪೊಲೀಸ್ ಠಾಣೆಯಲ್ಲಿ ಯುವತಿ ನಾಪತ್ತೆ ದೂರು ದಾಖಲಿಸಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಯುವತಿಯ ಮೊಬೈಲ್ ಫೋನ್ ಕರೆಗಳ ಮಾಹಿತಿ ಸಂಗ್ರಹಿಸಿದ್ದರು. ಆರೋಪಿಯನ್ನು ವಿಚಾರಣೆಗೊಳಪಡಿಸಿದ್ದರು. ಈ ವೇಳೆ ಸೌಮ್ಯಳನ್ನು ಕೊಲೆ ಮಾಡಿದ್ದ ವಿಷಯ ಬಾಯ್ಬಿಟ್ಟಿದ್ದಾನೆ‌‌.

ಈ ಪ್ರಕರಣವನ್ನು ಕೊಪ್ಪ ಪೊಲೀಸರು, ಯುವತಿಯ ಹತ್ಯೆ ನಡೆದಿದ್ದ ಸ್ಥಳದ ಠಾಣಾ ವ್ಯಾಪ್ತಿಯಾದ ರಿಪ್ಪನ್‌ಪೇಟೆ ಠಾಣೆಗೆ ವರ್ಗಾಯಿಸಿದ್ದಾರೆ. ತೀರ್ಥಹಳ್ಳಿ ಡಿವೈಎಸ್ಪಿ ಗಜಾನನ ವಾಮನ ಸುತಾರ ಅವರು ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದಾರೆ.

ಎಸ್ಪಿ ಏನಂದ್ರು ?

ಸುದ್ದಿಗಾರರೊಂದಿಗೆ ಮಾತನಾಡಿದ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್, ಹತ್ಯೆಗೀಡಾದ ಸೌಮ್ಯಳನ್ನು ಫೈನಾನ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಯುವಕ ಸೃಜನ್ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ, ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂರು ವರ್ಷದಿಂದ ಹಿಂದೆ ಇಬ್ಬರ ನಡುವೆ ಪರಿಚಯವಾಗಿ, ಸಲುಗೆಯಿಂದ ಪ್ರೀತಿ ಬೆಳೆದಿತ್ತು’ ಎಂದು ತಿಳಿಸಿದ್ದಾರೆ.

ಇತ್ತೀಚೆಗೆ ಸಾಗರಕ್ಕೆ ವರ್ಗಾವಣೆಗೊಂಡಿದ್ದ ಸೃಜನ್ ಗೆ ಬೇರೆ ಹುಡುಗಿ ಜೊತೆ ಸಲುಗೆ ಬೆಳೆದಿತ್ತು. ಆ ಕಾರಣದಿಂದ ಸೌಮ್ಯ ಮದುವೆ ಆಗುವಂತೆ ಒತ್ತಾಯಿಸುತ್ತಿದ್ದಳು. ಸೌಮ್ಯ ಕೊಪ್ಪದಿಂದ ಸಾಗರಕ್ಕೆ ಬಂದು ಹೋಗುತ್ತಿದ್ದಳು. ಸೃಜನ್ ಬೇರೆ ಹುಡುಗಿಯೊಂದಿಗೆ ಸ್ನೇಹ ಬೆಳೆಸಿದ್ದಕ್ಕೆ ಸೌಮ್ಯ ವಿರೋಧಿಸಿದ್ದಳು. ಸೃಜನ್ ಸಾಗರದಿಂದ ಸೌಮ್ಯಳನ್ನು ಬೈಕ್ ನಲ್ಲಿ ಕರೆದುಕೊಂಡು ಹೋಗಿದ್ದಾನೆ. ದಾರಿ ಉದ್ದಕ್ಕೂ ಜಗಳ ಮಾಡಿಕೊಂಡು ಬಂದಿದ್ದಾರೆ. ಕೋಪದಿಂದ ಸೌಮ್ಯಳಿಗೆ ಹೊಡೆದಿದ್ದು ಆಕೆ ಕೆಳಕ್ಕೆ ಬಿದ್ದ ನಂತರ ಕಾಲಿನಿಂದ ಕುತ್ತಿಗೆಗೆ ತುಳಿದಿದ್ದಾನೆ. ಸಾವನ್ನಪ್ಪಿದ ನಂತರ ಸಾಗರಕ್ಕೆ ಬಂದು ಕಾರು ತೆಗೆದುಕೊಂಡು ಹೋಗಿದ್ದಾನೆ. ಕಾರಿನಲ್ಲಿ ಮೃತದೇಹ ತಂದು ಜಲಜೀವನ್ ಕಾಮಗಾರಿಯ ಕಾಲುವೆಯಲ್ಲಿ ಹೂತಿಟ್ಟಿದ್ದಾನೆ. ಈಗ ಕುಟುಂಬಸ್ಥರು, ಎಸಿ ಸಮ್ಮುಖದಲ್ಲಿ ಮೃತದೇಹ ಹೊರತೆಗೆಯಲಾಗಿದೆ’ ಎಂದು ತಿಳಿಸಿದರು.

ಸೌಮ್ಯ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಗುಣವಂತೆ ಸಮೀಪ ಹಚ್ಚರಡಿ ಗ್ರಾಮದವಳಾಗಿದ್ದು, ಆರೋಪಿ ಭರತ್ ಕೂಡ ಕೊಪ್ಪ ಮೂಲದವನು. ನರ್ಸಿಂಗ್ ಕಲಿಯುತ್ತಿದ್ದ ಸೌಮ್ಯ ಜು.2 ರಂದು ಕಾಣೆಯಾಗಿದ್ದಳು.

Leave a Comment