RIPPONPETE | ಸರ್ಕಾರ ಬಡವರ ಸೂರಿಗಾಗಿ ಅನುಷ್ಟಾನಗೊಳಿಸಿದ ಬಸವ ವಸತಿ ಯೋಜನೆಯಡಿ ಮನೆ ನಿರ್ಮಿಸಲು ಫಲಾನುಭವಿಗಳನ್ನು ಆಯ್ಕೆ ಮಾಡಿ ಫೌಂಡೇಷನ್ ಹಾಕಲಾದ ಫಲಾನುಭವಿಗಳಿಗೆ ಪ್ರಾರಂಭದ ಮೊದಲು ಕಂತು ಹಣ ಬಾರದೆ ಕಟ್ಟಡ ಮೇಲೇಳದೆ ಇರುವುದರ ಬಗ್ಗೆ ಫಲಾನುಭವಿಗಳು ಮತ್ತು ಗ್ರಾಮ ಪಂಚಾಯಿತಿ ಸದಸ್ಯ ಜಿ.ಡಿ.ಮಲ್ಲಿಕಾರ್ಜುನ ತೀವ್ರ ಆಕ್ರೊಶ ವ್ಯಕ್ತಪಡಿಸಿದ್ದಾರೆ.
ರಿಪ್ಪನ್‌ಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನೀಡಲಾದ ಬಸವ ವಸತಿ ಯೋಜನೆಯ ಫಲಾನುಭವಿಗಳ ಮನೆಗಳು ಇನ್ನೂ ಅಪೂರ್ಣವಾಗಿಯೆ ಉಳಿಯುವಂತಾಗಿದೆ. ಒಂದು ಕಡೆಯಲ್ಲಿ ಸರ್ಕಾರದಿಂದ ಫಲಾನುಭವಿಗೆ ಹಣ ನೀಡದೆ ಇರುವುದು ಫೌಂಡೇಷನ್ ಹಾಕಿ ಮೊದಲ ಕಂತಿನ ಹಣವನ್ನು ಪಡೆಯಲು ಪಂಚಾಯಿತಿ ಕಛೇರಿಗೆ ಫಲಾನುಭವಿಗಳು ಅಲೆಯುವಂತಗಿದೆ ಎಂದು ಆರೋಪಿಸಿದ ಅವರು, ಮಳೆಗಾಲವಾಗಿರುವ ಕಾರಣ ಮನೆಗಳು ಶಿಥಿಲಗೊಂಡು ಕುಸಿದು ಬೀಳುವಂತಾಗಿ ಬಡ ಕುಟುಂಬ ಬೀದಿಗೆ ಬಂದಿರುವ ಫಲಾನುಭವಿಗಳ ಬಗ್ಗೆ ಸರ್ಕಾರ ಇನ್ನೂ ನಿರ್ಲಕ್ಷ್ಯ ಧೋರಣೆ ತಾಳಿರುವುದರ ಬಗ್ಗೆ ತೀವ್ರ ಅಸಮದಾನಕ್ಕೆ ಕಾರಣವಾಗಿದೆ ಎಂದರು.
ಈ ಹಿಂದಿನ ಸರ್ಕಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಸವ ವಸತಿ ಯೋಜನೆ ಫಲಾನುಭವಿಗಳನ್ನು ಆಯ್ಕೆ ಮಾಡಿ ಎಲ್ಲಾ ದಾಖಲೆಗಳನ್ನು ಪಡೆದು ಸಬ್‌ರಿಜಿಸ್ಟಾರ್ ಕಛೇರಿಯಲ್ಲಿ ನೋಂದಣಿ ಮಾಡಿಸಿ ಮನೆಗೆ ಫೌಂಡೇಷನ್ ಮಾಡಿಸಲು ಸಾಲಸೋಲ ಮಾಡಿ ಫೌಂಡೇಷನ್ ಸಹ ಹಾಕಿಕೊಂಡು ಮೊದಲ ಕಂತಿನ ಹಣಕ್ಕಾಗಿ ಜಾತಕ ಪಕ್ಷಿಯಂತೆ ಬ್ಯಾಂಕ್‌ಗೆ ಮತ್ತು ಗ್ರಾಮ ಪಂಚಾಯಿತಿ ಕಛೇರಿಗೆ ಅಲೆಯುವಂತಾಗಿದೆ ಎಂದು ಫಲಾನುಭವಿಗಳು ತಮ್ಮ ಅಸಹಾಯಕತೆಯನ್ನು ನಮ್ಮ ಬಳಿಯಲ್ಲಿ ತೋಡಿಕೊಂಡಿದ್ದಾರೆಂದು ವಿವರಿಸಿದರು.
ಒಟ್ಟಾರೆಯಾಗಿ ಬಸವ ವಸತಿ ಯೋಜನೆಯ ಫಲಾನುಭವಿಗಳು ಅತ್ತ ಮನೆಯೂ ಇಲ್ಲದೆ, ಇತ್ತ ಮಾಡಿಕೊಂಡ ಸಾಲವನ್ನು ತಿರುವಳಿ ಮಾಡದೆ ಕೊರಗುವಂತಾಗಿದೆ ಎಂದು ತಮ್ಮ ಮನಸ್ಸಿನ ನೋವನ್ನು ಮಾಧ್ಯಮದವರ ಬಳಿ ಹಂಚಿಕೊಂಡರು.
ಇನ್ನಾದರೂ ಸರ್ಕಾರ ಕೂಡಲೇ ಬಸವ ವಸತಿ ಫಲಾನುಭವಿಗಳಿಗೆ ಅನುದಾನ ಬಿಡುಗಡೆಗೊಳಿಸಿ ಮನೆ ಪೂರ್ಣಗೊಳಿಸಲು ಮುಂದಾಗಬೇಕು ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.