RIPPONPETE ; ಅತಿಶಯ ಶ್ರೀಕ್ಷೇತ್ರದಲ್ಲಿ ಭಗವಾನ ಶ್ರೀ 1008 ಪಾರ್ಶ್ವನಾಥ ಸ್ವಾಮಿ, ಶ್ರೀ ನೇಮಿನಾಥ ಸ್ವಾಮಿ, ಶ್ರೀ ಆದಿನಾಥ ಸ್ವಾಮಿ, ಶ್ರೀ ಮಹಾವೀರ ಸ್ವಾಮಿ ಹಾಗೂ ಜಗನ್ಮಾತೆ ಅಭೀಷ್ಠಚರ ಪ್ರದಾಯಿನಿ ಯಕ್ಷಿ ಶ್ರೀ ಪದ್ಮಾವತಿ ದೇವಿ, ಶ್ರೀ ಕೂಷ್ಮಾಂಡಿನಿ ದೇವಿ, ಶ್ರೀ ಸರಸ್ವತಿ ದೇವಿ, ಶ್ರೀ ಕ್ಷೇತ್ರಪಾಲ ಜಟ್ಟಿಂಗರಾಯ, ಶ್ರೀ ನಾಗ ಸನ್ನಿಧಿಯಲ್ಲಿ ಪೂರ್ವ ಪರಂಪರೆಯ ಜಿನಾಗಮೋಕ್ತ ಪೂಜಾ ಆರಾಧನಾ ವಿಧಿಯಂತೆ ಶರನ್ನವರಾತ್ರಿ ಉತ್ಸವವು ಘಟಸ್ಥಾಪನಾಪೂರ್ವಕ ಆರಂಭಗೊಳ್ಳಲಿದೆ ಎಂದು ಮಠದ ಆಡಳಿತಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
ವಿವಿಧ ಪುಷ್ಪ, ಫಲ, ಧಾನ್ಯ ಸಮರ್ಪಣೆ, ಮಹಾನೈವೇದ್ಯ ಪೂಜೆ, ದೇವಿಗೆ ವಿಶೇಷ ಅಲಂಕಾರ ಪೂಜೆಯು ಹೊಂಬುಜ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರ ದಿವ್ಯ ನೇತೃತ್ವ, ಸಾನಿಧ್ಯ ಮತ್ತು ಮಾರ್ಗದರ್ಶನದಲ್ಲಿ ವಿಧಿವತ್ತಾಗಿ ನೆರವೇರಲಿದೆ. ಆರ್ಯಿಕಾರತ್ನ ಶ್ರೀ ಶಿವಮತಿ ಮಾತಾಜಿಯವರು ಉಪಸ್ಥಿತರಿರುವರು.
ಅಕ್ಟೋಬರ್ 3 (ಆಶ್ವಯುಜ ಪಾಡ್ಯ) ರಿಂದ 12 (ಆಶ್ವಯುಜ ದಶಮಿ) ವರೆಗೆ ಶ್ರೀಕ್ಷೇತ್ರದಲ್ಲಿ ಭಕ್ತರು ತಮ್ಮಿಷ್ಟಾರ್ಥ ಸಿದ್ಧಿಗಾಗಿ ಪೂಜೆ, ಉತ್ಸವಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಶ್ರೀಮಠದ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಅ.03 ಗುರುವಾರದಂದು-ಶರನ್ನವರಾತ್ರಿ ಪ್ರಾರಂಭ (ಘಟಸ್ಥಾಪನೆ) ಅ. 09 ಬುಧವಾರ-ಸರಸ್ವತಿ ಪೂಜೆ, (ಮೂಲಾ ನಕ್ಷತ್ರ) ಅ. 10 ಗುರುವಾರ-ಜೀವದಯಾಷ್ಟಮಿ ಪೂಜೆ, ಅ. 11 ಶುಕ್ರವಾರ-ಮಹಾನವಮಿ (ಆಯುಧಪೂಜೆ) ಅ. 12 ಶನಿವಾರ-ವಿಜಯದಶಮಿ, ಬನ್ನಿಮಂಟಪಕ್ಕೆ ಶ್ರೀದೇವಿ ಪಲ್ಲಕ್ಕಿ ಉತ್ಸವ, ಸ್ವಸ್ತಿಶ್ರೀಗಳವರ ಸಿಂಹಾಸನಾರೋಹಣ ಹಾಗೂ ಶ್ರೀಗಳವರ ಪಾದಪೂಜೆ, ಆಶೀರ್ವಚನ, ಅಶ್ವ ಮಾನವಿ ಮತ್ತು ಗಜರಾಣಿ ಐಶ್ವರ್ಯ, ವಾದ್ಯಗೋಷ್ಠಿಗಳೊಂದಿಗೆ ಭಕ್ತಸಮೂಹದೊಂದಿಗೆ ಬನ್ನಿಮಂಟಪದತ್ತ ಶೋಭಾಯಾತ್ರೆ ನೆರವೇರಲಿದೆ. ಪೂಜ್ಯ ಶ್ರೀಗಳವರು ಬನ್ನಿ, ಶ್ರೀ ಮಂತ್ರಾಕ್ಷತೆ ದಯಪಾಲಿಸಲಿರುವರು.
ಹೊಂಬುಜ ಜೈನ ಮಠದ ಅಧೀನ ಕ್ಷೇತ್ರಗಳಾದ ಶ್ರೀಕ್ಷೇತ್ರ ಕುಂದಾದ್ರಿ, ವರಂಗ ಹಾಗೂ ಹಟ್ಟಿಯಂಗಡಿ ಜಿನಮಂದಿರಗಳಲ್ಲಿ ಶರನ್ನವರಾತ್ರಿ ಧಾರ್ಮಿಕ ಪೂಜಾ ವಿಧಿ-ವಿಧಾನಗಳು ನೆರವೇರಲಿವೆ. ಭಕ್ತವೃಂದದವರು ಶರನ್ನವರಾತ್ರಿ ಉತ್ಸವಗಳಲ್ಲಿ ಪಾಲ್ಗೊಂಡು ಪುಣ್ಯಭಾಗಿಗಳಾಗುವಂತೆ ಆಡಳಿತಾಧಿಕಾರಿಗಳು ವಿನಂತಿಸಿದ್ದಾರೆ.