ಶಿವಮೊಗ್ಗ ಸುದ್ದಿ

ಧರ್ಮ ಪರಿಪಾಲನೆಯಿಂದ ಬದುಕು ಉಜ್ವಲ ; ರಂಭಾಪುರಿ ಶ್ರೀ

ಸೊರಬ ; ಮಾನವ ಜೀವನದ ಉನ್ನತಿಗೆ ಮತ್ತು ಪ್ರಗತಿಗೆ ಧರ್ಮ ಪರಿಪಾಲನೆ ಮುಖ್ಯ. ಮಾತು ಮನ ಕೃತಿ ಒಂದಾಗಿ ಬಾಳಿದರೆ ಬದುಕಿಗೆ ಬಹಳಷ್ಟು ಬೆಲೆ ಬರುತ್ತದೆ. ಸತ್ಯ ಶುದ್ಧವಾದ ಧರ್ಮ ಪಾಲನೆಯಿಂದ ಜೀವನ ಉಜ್ವಲಗೊಳ್ಳುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

WhatsApp Group Join Now
Telegram Group Join Now
Instagram Group Join Now

ಅವರು ಮಂಗಳವಾರ ಸಂಜೆ ತಾಲೂಕಿನ ದುಗ್ಲಿ ಶ್ರೀ ಗುರು ರೇವಣಸಿದ್ಧೇಶ್ವರ ಮಠದಲ್ಲಿ ಜಾತ್ರಾ ಮಹೋತ್ಸವ ಹಾಗೂ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಹಾಗೂ ಲಿಂ. ಮುರುಘೇಂದ್ರ ಸ್ವಾಮಿಗಳವರ 7ನೇ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಮನುಷ್ಯ ವಿದ್ಯೆ ಸಂಪಾದಿಸುವಾಗ ಮತ್ತು ಸಂಪತ್ತು ಗಳಿಸುವಾಗ ಈ ಭೂಮಿಯ ಮೇಲೆ ಬಹಳಷ್ಟು ವರ್ಷ ಬದುಕುತ್ತೇವೆ ಎಂಬ ನಂಬಿಕೆ ಇರಬೇಕು. ಧರ್ಮಾಚರಣೆ ಮಾಡುವಾಗ ಯಾವ ಘಳಿಗೆಯಲ್ಲಿ ಮೃತ್ಯು ಬರುತ್ತದೆ ಎಂಬುದನ್ನು ಊಹಿಸಲಾಗದು. ದೇಹ ಗಟ್ಟಿಯಿರುವಾಗ ಉಸಿರು ಇರುವಾಗ ಧರ್ಮ ಪಾಲನೆ ಮಾಡಬೇಕು. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಧರ್ಮ ಸೂತ್ರಗಳು ಮತ್ತು ಶರಣರು ಆಚರಿಸಿಕೊಂಡು ಬಂದ ಧರ್ಮ ಸೂತ್ರಗಳು ಒಂದೇಯಾಗಿವೆ. ಮಠಾಧ್ಯಕ್ಷರಾದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ದುಗ್ಲಿ ಮಠವನ್ನು ಅದ್ಭುತವಾಗಿ ಅಭಿವೃದ್ಧಿಪಡಿಸಿದ್ದಾರೆಂದು ಹರುಷ ವ್ಯಕ್ತಪಡಿಸಿ ರೇಷ್ಮೆ ಮಡಿ ಸ್ಮರಣಿಕೆ ನೀಡಿ ಶುಭ ಹಾರೈಸಿದರು.

ಮಾಜಿ ಸಚಿವ ಹರತಾಳು ಹಾಲಪ್ಪ ಸಮಾರಂಭ ಉದ್ಘಾಟಿಸಿ ಮಾತನಾಡಿ, ಶಿಕ್ಷಣ ಆರೋಗ್ಯ ಧರ್ಮ ಕಾರ್ಯಗಳಲ್ಲಿ ಯಾರೂ ರಾಜಕೀಯ ಮಾಡಬಾರದು. ಧರ್ಮದ ಉಳಿವು ಮತ್ತು ಆಚರಣೆ ಜೀವನದ ಶ್ರೇಯಸ್ಸಿಗೆ ಕಾರಣ. ಗುರು ಕಾರುಣ್ಯ ಎಲ್ಲರ ಮೇಲೂ ಇರಬೇಕೆಂದರು. ಮಾಜಿ ಶಾಸಕ ವಿ.ಎಸ್.ಪಾಟೀಲ ಲಿಂ. ಮುರುಘೇದ್ರ ಶ್ರೀಗಳ ಭಾವಚಿತ್ರ ಬಿಡುಗಡೆ ಮಾಡಿ ಮಾತನಾಡಿದರು.

ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದ ಕಾನುಗೋಡಿನ ಕೃಷ್ಣಮೂರ್ತಿ, ಓಂಕಾರಪ್ಪ ಸ್ವಾಮಪ್ಪ, ಭಾಶಿಯ ಶಿವಪ್ಪ ಕೃಷ್ಣ ಬಡಿಗೇರ, ಸಂಗಪ್ಪ ಯು., ವನಮಾಲ ಶ್ರೀಪತಿ ಪತ್ರೆ, ಮಲ್ಲೇಶಪ್ಪ ಕೆ. ಸುರಹೊನ್ನೆ, ಡಾ|| ಶ್ರೀಧರ, ಡಾ|| ಪ್ರಭು ಸಾಹುಕಾರ ಬಾರಂಗಿ, ಲಿಂಗರಾಜ ಬಂಗಾರಪ್ಪ ಗೌಡ್ರು, ವಿನಯ ಪಾಟೀಲ್, ಶ್ರೀನಿವಾಸ ಹೆಬ್ಬಾರ್, ರೇಣುಕಮ್ಮ ಕೆ.ಆರ್. ಇವರಿಗೆ ಶ್ರೀ ಗುರು ರೇವಣಸಿದ್ಧೇಶ್ವರ ಸದ್ಭಾವನಾ ಸಿರಿ ಪ್ರಶಸ್ತಿಯಿತ್ತು ಜಗದ್ಗುರುಗಳು ಶುಭ ಹಾರೈಸಿದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ದುಗ್ಲಿ-ಕಡೇನಂದಿಹಳ್ಳಿ ರೇವಣಸಿದ್ಧೇಶ್ವರ ಶ್ರೀಗಳು ಮಾತನಾಡಿ, ಮಲೆನಾಡಿನಲ್ಲಿ ಧರ್ಮ ಪ್ರಸಾರ ತುಂಬಾ ಕಷ್ಟ. ಆದರೂ 12 ವರ್ಷದ ಅವಧಿಯಲ್ಲಿ ಭಕ್ತರ ನಿರೀಕ್ಷೆ ಮೀರಿ ಅಭಿವೃದ್ಧಿ ಕಾರ್ಯಗಳು ನಡೆದಿರುವುದು ತಮಗೆ ತೃಪ್ತಿ ತಂದಿವೆ ಎಂದರು.

ಸುಳ್ಳದ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮಿಗಳು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಚನ್ನಗಿರಿ ಕೇದಾರ ಶಿವಶಾಂತವೀರ ಶಿವಾಚಾರ್ಯರು, ಹಾರನಹಳ್ಳಿ ಶಿವಯೋಗಿ ಶಿವಾಚಾರ್ಯರು ಉಪಸ್ಥಿತರಿದ್ದರು. ಹಲವಾರು ರಾಜಕೀಯ ಧುರೀಣರು ಮತ್ತು ಗಣ್ಯರು ಪಾಲ್ಗೊಂಡು ಜಗದ್ಗುರುಗಳಿಂದ ಗುರುರಕ್ಷೆ ಸ್ವೀಕರಿಸಿದರು. ಸಮಾರಂಭದ ನಂತರ ಬಂದ ಎಲ್ಲಾ ಭಕ್ತರಿಗೆ ಅನ್ನ ದಾಸೋಹ ಜರುಗಿತು.

ಸಮಾರಂಭಕ್ಕೂ ಮುನ್ನ ಶ್ರೀ ಜಗದ್ಗುರು ರೇವಣಸಿದ್ಧೇಶ್ವರ ರಥೋತ್ಸವ ಸಂಭ್ರಮದಿಂದ ಜರುಗಿತು. ಸಮಾರಂಭದ ನಂತರ ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮಗಳು ಜರುಗಿದವು.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]

error: Content is protected !!