ರಿಪ್ಪನ್‌ಪೇಟೆ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಭಾಗಿತ್ವದ ಮಹತ್ವಾಕಾಂಕ್ಷಿ ‘ಜಲ ಜೀವನ್ ಮಿಷನ್’ (ಜೆಜೆಎಂ) ಯೋಜನೆ ಹೊಸನಗರ ತಾಲೂಕಿನಲ್ಲಿ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಗ್ರಾಮೀಣ ಭಾಗದ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಹಮ್ಮಿಕೊಳ್ಳಲಾದ ಈ ಯೋಜನೆ, ಹಲವು ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಕಾಮಗಾರಿ ಅಪೂರ್ಣಗೊಂಡು ಹಳ್ಳ ಹಿಡಿದಿದೆ ಎಂದು ಸ್ಥಳೀಯರು ಹಾಗೂ ಜನಪ್ರತಿನಿಧಿಗಳು ಗಂಭೀರ ಆರೋಪ ಮಾಡಿದ್ದಾರೆ.
ಕೋಡೂರು:
ಬಿಳಿ ಆನೆಯಾದ ಓವರ್‌ಹೆಡ್ ಟ್ಯಾಂಕ್ ಹೊಸನಗರ ತಾಲೂಕಿನ ಚಕ್ರಾನಗರದಿಂದ ಸೂಡೂರುವರೆಗೆ ಸುಮಾರು ₹485 ಕೋಟಿ ವೆಚ್ಚದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಟೆಂಡರ್ ಪ್ರಕ್ರಿಯೆ ಮುಗಿದು ಕಾಮಗಾರಿಗಳು ನಡೆದಿದ್ದರೂ, ಇದುವರೆಗೂ ಗ್ರಾಮಗಳಿಗೆ ಒಂದು ಹನಿ ನೀರು ಸಹ ಸರಬರಾಜಾಗಿಲ್ಲ ಎಂದು ಕೋಡೂರು ಗ್ರಾಮ ಪಂಚಾಯಿತಿ ನಿಕಟಪೂರ್ವ ಅಧ್ಯಕ್ಷ ಜಯಪ್ರಕಾಶ್ ದೂರಿದ್ದಾರೆ.
ಕೋಡೂರು ಗ್ರಾಪಂ ವ್ಯಾಪ್ತಿಯ ಹೆಚ್.ಕುನ್ನೂರು, ಕೆ.ಕುನ್ನೂರು ಹಾಗೂ ಕಾಗೆಮರಡು ಗ್ರಾಮಗಳಿಗೆ ನೀರು ಪೂರೈಸಲು ಅಮ್ಮನಘಟ್ಟ ಬಳಿ ಓವರ್ ಹೆಡ್ ಟ್ಯಾಂಕ್ ನಿರ್ಮಿಸಲಾಗಿದೆ. ಆದರೆ, ಟ್ಯಾಂಕ್‌ಗೆ ನೀರು ತುಂಬಿಸಿಲ್ಲ ಮತ್ತು ಮಜರೆ ಗ್ರಾಮಗಳಿಗೆ ವಿತರಣಾ ಪೈಪ್‌ಲೈನ್ ಸಂಪರ್ಕವನ್ನೂ ನೀಡಿಲ್ಲ. ಈ ಮೂಲಕ ಯೋಜನೆ ಬಿಳಿ ಆನೆಯಂತಾಗಿದ್ದು, ಕಾಮಗಾರಿಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎಂದು ಅವರು ಆರೋಪಿಸಿದ್ದಾರೆ.
ಕಳಸೆ:
ಜಲಮೂಲಗಳು ಬತ್ತಿ ನೀರಿಗಾಗಿ ಹಾಹಾಕಾರ ಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಳಸೆ ಗ್ರಾಮದಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಇಲ್ಲಿ ಓವರ್‌ಹೆಡ್ ಟ್ಯಾಂಕ್ ನಿರ್ಮಾಣಗೊಂಡು ಏಳೆಂಟು ತಿಂಗಳು ಕಳೆದರೂ ಪೈಪ್‌ಲೈನ್ ಸಂಪರ್ಕ ಕಲ್ಪಿಸಿಲ್ಲ. ಕಳೆದ ಜುಲೈನಿಂದ ಮಳೆಯಿಲ್ಲದೆ ಅಂತರ್ಜಲ ಕುಸಿದಿದ್ದು, ಕೊಳವೆ ಬಾವಿ ಹಾಗೂ ತೆರೆದ ಬಾವಿಗಳು ಒಣಗಿ ಹೋಗಿವೆ. ಕಳೆದ 15 ದಿನಗಳಿಂದ ಕುಡಿಯುವ ನೀರಿನ ಅಭಾವ ತೀವ್ರಗೊಂಡಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಗ್ರಾಮದ ಮಹೇಂದ್ರಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಮಸ್ಯೆಯನ್ನು ತಕ್ಷಣ ಬಗೆಹರಿಸದಿದ್ದರೆ, ನಿರ್ಮಿಸಲಾಗಿರುವ ಟ್ಯಾಂಕ್‌ನ ಬೀಗ ಒಡೆದು ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಅವರು ಎಚ್ಚರಿಸಿದ್ದಾರೆ.
ಅಮೃತ (ಗರ್ತಿಕೆರೆ) :
ಹಬ್ಬದ ಸಂಭ್ರಮ ಮರೆಸಿ ನೀರಿಗಾಗಿ ಅಲೆದಾಟ ತಾಲೂಕಿನ ಅಮೃತ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ನೀರಿನ ಅಭಾವ ತೀವ್ರ ಸ್ವರೂಪ ಪಡೆದುಕೊಂಡಿದೆ. ವರ್ಷಕ್ಕೊಮ್ಮೆ ಬರುವ ಗಣೇಶ ಚತುರ್ಥಿ ಹಬ್ಬವನ್ನು ಸಂಭ್ರಮದಿಂದ ಆಚರಿಸುವ ಬದಲು, ಗ್ರಾಮಸ್ಥರು ಕುಡಿಯುವ ನೀರಿಗಾಗಿ ರಾತ್ರಿ-ಹಗಲೆನ್ನದೆ ಕೊಡ ಹಿಡಿದು ಅಲೆಯುವಂತಾಗಿದೆ ಎಂದು ಸ್ಥಳೀಯ ನಿವಾಸಿ ಗುರುಪಾದಪ್ಪ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಒಟ್ಟಾರೆಯಾಗಿ ಕೋಟ್ಯಂತರ ರೂಪಾಯಿ ವೆಚ್ಚದ ಜೆಜೆಎಂ ಯೋಜನೆ ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯದಿಂದಾಗಿ ನಿರೀಕ್ಷಿತ ಫಲ ನೀಡುವಲ್ಲಿ ವಿಫಲವಾಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

