ರಿಪ್ಪನ್‌ಪೇಟೆ: ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ಸಮಿತಿ ವತಿಯಿಂದ ಭೂಪಾಳಂ ಚಂದ್ರಶೇಖರಯ್ಯ ಸಭಾಭವನದ ತಿಲಕ್ ಮಂಟಪದಲ್ಲಿ ಪ್ರತಿಷ್ಠಾಪಿಸಲಾಗಿದ್ದ 59ನೇ ವರ್ಷದ ಗಣಪತಿಯ ವಿಸರ್ಜನಾ ಪೂರ್ವ ರಾಜಬೀದಿ ಉತ್ಸವವು ಶ್ರದ್ಧಾಭಕ್ತಿ ಹಾಗೂ ಅದ್ಧೂರಿತನದಿಂದ ನಡೆಯುತ್ತಿದೆ. ಜನಸಾಗರದ ಸಮ್ಮುಖದಲ್ಲಿ ಜಗನ್ನಾಥ ಬಂಗೇರಾ ನಾಡಿನ ಪ್ರಸಿದ್ಧ ಕಲಾತಂಡಗಳ ಸಮ್ಮುಖದಲ್ಲಿ ಮೆರವಣಿಗೆಗೆ ಚಾಲನೆ ನೀಡಿದರು.

ತಿಲಕ್ ಮಂಟಪದಿಂದ ಆರಂಭವಾದ ಮೆರವಣಿಗೆ ಶಿವಮೊಗ್ಗ ರಸ್ತೆಯ ಶಿವಮಂದಿರದತ್ತ ಸಾಗುತ್ತಿದ್ದಂತೆ, ಸಹಸ್ರಾರು ಭಕ್ತರು “ಗಣಪತಿ ಬಪ್ಪ ಮೋರಯಾ, ಮಂಗಳ ಮೂರ್ತಿ ಮೋರಯಾ” ಎಂಬ ಜಯಘೋಷಗಳೊಂದಿಗೆ ಸ್ವಾಮಿಯನ್ನು ಬೀಳ್ಕೊಟ್ಟರು. ಡಿಜೆ ಸಂಗೀತ ಹಾಗೂ ಜಾನಪದ ಮೇಳಗಳ ತಾಳಕ್ಕೆ ತಕ್ಕಂತೆ ಮಕ್ಕಳು, ಯುವಕ-ಯುವತಿಯರು ಉತ್ಸಾಹದಿಂದ ಹೆಜ್ಜೆ ಹಾಕಿ ಸಂಭ್ರಮಿಸಿದರು.
ಸಂಸ್ಕೃತಿ-ಕಲೆಗಳ ಸಮಾಗಮ:
ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ತಮಟೆ ಬಡಿತ ಹಾಗೂ ನಗಾರಿ ವಾದನಗಳು ಜನಾಕರ್ಷಣೆಯಾಗಿದ್ದವು. ಪಾಂಡವಪುರದ ಅಜಯ್ ಮತ್ತು ತಂಡದವರ ಜಿಮ್ನಾಸ್ಟಿಕ್ಸ್, ಕತ್ತಿವರಸೆ, ದೊಣ್ಣೆವರಸೆ ಮತ್ತು ಬೆಂಕಿಯ ಆಟಗಳು ಸಾಹಸಮಯವಾಗಿದ್ದವು. ಇದರೊಂದಿಗೆ ಕಾರ್ಕಳದ ಕೀಲುಕುದುರೆ, ನವಿಲು ಕುಣಿತ, ಗೊಂಬೆ ಕುಣಿತ, ತಟ್ಟಿರಾಯ, ವೀರಗಾಸೆ ಹಾಗೂ ಉಡುಪಿಯ ಮಹಿಳೆಯರ ಭಜನೆ ಮತ್ತು ಕೋಲಾಟ ಮೆರವಣಿಗೆಯ ಶೋಭೆಯನ್ನು ಹೆಚ್ಚಿಸಿದವು.

ಮನೆಮನೆಗಳ ಮುಂದೆ ಭಕ್ತಿಪೂರ್ವಕ ಸ್ವಾಗತ:
ಗಣೇಶ ಸಾಗುವ ದಾರಿಯುದ್ದಕ್ಕೂ ಹಸಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಮಹಿಳೆಯರು ಮನೆಗಳ ಮುಂದೆ ನೀರು ಹಾಕಿ, ಬಣ್ಣ ಬಣ್ಣದ ರಂಗೋಲಿ ಬಿಡಿಸಿ ಗಣೇಶನನ್ನು ಆತ್ಮೀಯವಾಗಿ ಸ್ವಾಗತಿಸಿದರು.

ಮೆರವಣಿಗೆಯ ಹಾದಿಯಲ್ಲಿ ವಿದ್ಯಾನಗರ, ಬನ್ನಿನಗರ, ದೊಡ್ಡಿನಕೊಪ್ಪ, ಮಾರ್ವಾಡಿ ಹಾಗೂ ವರ್ತಕರ ಬಳಗ ಸೇರಿದಂತೆ ವಿವಿಧ ಸಂಘಟನೆಗಳಿಂದ ಪಲಾವು, ಸಿಹಿ ತಿಂಡಿ ಹಾಗೂ ಅನ್ನಸಂತರ್ಪಣೆ ಸೇವೆ ನೆರವೇರಿತು.

ವಿವಿಧ ಸಮಾಜಗಳಿಂದ ಗೌರವ:
ಮೆರವಣಿಗೆಯು ವಿದ್ಯಾನಗರದ ಶಿವಮಂದಿರ ವೃತ್ತ ತಲುಪುತ್ತಿದ್ದಂತೆ ಶ್ರೀ ಬಸವೇಶ್ವರ ವೀರಶೈವ ಸಮಾಜ, ವರಸಿದ್ದಿ ವಿನಾಯಕ ವ್ಯವಸ್ಥಾಪನಾ ಸಮಿತಿ, ಗ್ರಾಮ ಪಂಚಾಯಿತಿ ಹಾಗೂ ನಾಡಕಛೇರಿಯ ಆಡಳಿತ ಮಂಡಳಿ ವತಿಯಿಂದ ಬೃಹತ್ ಹಾರ ಹಾಕಿ ಸ್ವಾಮಿಗೆ ಗೌರವ ಸಲ್ಲಿಸಲಾಯಿತು.

ತದನಂತರ ವಿನಾಯಕ ವೃತ್ತಕ್ಕೆ ಆಗಮಿಸಿದ ಉತ್ಸವಕ್ಕೆ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು, ಜುಮ್ಮಾ ಮಸೀದಿ ಕಮಿಟಿ, ಮರಾಠ, ಒಕ್ಕಲಿಗ ಹಾಗೂ ಜಿಎಸ್‌ಬಿ ಸಮಾಜದ ಮುಖಂಡರು ಮಾಲಾರ್ಪಣೆ ಮಾಡಿ ಭಕ್ತಿ ಸಮರ್ಪಿಸಿದರು. ಈ ವೇಳೆ ಶಾಸಕರು ಜಾನಪದ ಕಲಾವಿದರೊಂದಿಗೆ ಹೆಜ್ಜೆ ಹಾಕಿ ಯುವಜನರನ್ನು ಹುರಿದುಂಬಿಸಿದ್ದು ಮೆರವಣಿಗೆಯ ವಿಶೇಷ ಕ್ಷಣವಾಗಿತ್ತು.

