RIPPONPETE ; ವೈಭವದೊಂದಿಗೆ ಆರಂಭಗೊಂಡಿದ್ದ ಇತಿಹಾಸ ಪ್ರಸಿದ್ಧ ಕೋಡೂರು ಸಮೀಪವಿರುವ ಅಮ್ಮನಘಟ್ಟ ಜೇನುಕಲ್ಲಮ್ಮ ದೇವಿ ಜಾತ್ರೋತ್ಸವ ಇಂದು ಸಂಪನ್ನಗೊಂಡಿತು.
ಹುಣ್ಣಿಮೆಯಿಂದ ಅಮಾವಾಸ್ಯೆವರೆಗೆ ಅಂದರೆ ಸೆ.20 ರಿಂದ ಆರಂಭಗೊಂಡ ಜಾತ್ರೆ 2 ಶುಕ್ರವಾರ ಮತ್ತು 2 ಮಂಗಳವಾರ ವಿಜೃಂಭಣೆಯಿಂದ ನೆರವೇರಿತು. ಪ್ರಧಾನ ಅರ್ಚಕ ಭಾಸ್ಕರ್ ಜೋಯ್ಸ್ ಅವರ ನೇತೃತ್ವದಲ್ಲಿ ಕುಂಕುಮಾರ್ಚನೆ, ಮಡಿಲು ತುಂಬುವುದು, ಮಂಗಳಾರತಿ ಸೇರಿ ವಿವಿಧ ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಾಯಿತು.
ಮುಂಜಾನೆಯಿಂದಲೇ ಜಗನ್ಮಾತೆ ಜೇನುಕಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವಕ್ಕೆ ವಿವಿಧೆಡೆಗಳಿಂದ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಜಮಾವಣೆಗೊಂಡು ದೇವಿಯ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಂತುಕೊಂಡಿದ್ದು ವಿಶೇಷವಾಗಿತ್ತು.
ಬೇಡಿ ಬಂದ ಭಕ್ತರ ಆಶೋತ್ತರಗಳನ್ನು ಈಡೇರಿಸುವ ತಾಯಿ ಜೇನುಕಲ್ಲಮ್ಮ ತಾಯಿಗೆ ಸಂತಾನ ಭಾಗ್ಯ, ಕಂಕಣ ಭಾಗ್ಯ ಹೀಗೆ ತಮ್ಮ ಕೌಟುಂಬಿಕ ಸಮಸ್ಯೆಗಳನ್ನು ಪರಿಹರಿಸುವಂತೆ ತಾಯಿಯಲ್ಲಿ ಹರಕೆ ಹಣ್ಣು, ಕಾಯಿ ಸಮರ್ಪಿಸುತ್ತಾ ಮಹಿಳೆಯರು ಮತ್ತು ಯುವತಿಯರು ದೇವಿಯ ಬಳಿ ಪ್ರಾರ್ಥಿಸುತ್ತಿದ್ದು ಸಾಮಾನ್ಯವಾಗಿತ್ತು.
ಇಂದು ಮಾಜಿ ಸಚಿವ ಹರತಾಳು ಹಾಲಪ್ಪ, ಜಿಪಂ ಮಾಜಿ ಸದಸ್ಯ ಸುರೇಶ್ ಸ್ವಾಮಿರಾವ್, ತಾಪಂ ಮಾಜಿ ಅಧ್ಯಕ್ಷ ವೀರೇಶ್ ಆಲವಳ್ಳಿ ಸೇರಿದಂತೆ ಹಲವು ಗಣ್ಯರು ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ, ಮಾಜಿ ಶಾಸಕ ಬಿ. ಸ್ವಾಮಿರಾವ್ ಸದಸ್ಯರಾದ ಸುಧೀರ್ ಭಟ್, ಶ್ರೀನಿವಾಸ ಹಿಂಡ್ಲೆಮನೆ, ಪುಟ್ಟಪ್ಪ, ಹರೀಶ್, ಸಂತೋಷ್, ರತ್ನಮ್ಮ, ಸರೋಜ ಇನ್ನಿತರರು ಹಾಜರಿದ್ದರು.