RIPPONPETE ; ಮನುಷ್ಯ ದೊಡ್ಡ ದೊಡ್ಡ ಮಾತುಗಳನ್ನು ಆಡುತ್ತಾನೆ. ಆದರೆ ದೊಡ್ಡವನಾಗಿ ಬಾಳಲು ಯತ್ನಿಸುತ್ತಿಲ್ಲ. ದೊಡ್ಡ ಮನಸ್ಸು ದೊಡ್ಡ ಗುಣದಿಂದ ದೊಡ್ಡಸ್ತಿಕೆ ಸಿಗುತ್ತದೆ. ಸತ್ಯ ಧರ್ಮ ಅರಿತು ಬಾಳುವುದರಿಂದ ಜೀವನದಲ್ಲಿ ಸುಖ ಶಾಂತಿ ಪ್ರಾಪ್ತವಾಗುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರು ಸಮೀಪದ ಮಳಲಿ ಸಂಸ್ಥಾನ ಮಠದಲ್ಲಿ ಜರುಗಿದ ಕಾರ್ತೀಕ ದೀಪೋತ್ಸವ ಧರ್ಮಜಾಗೃತಿ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಮನುಷ್ಯನಲ್ಲಿ ಒಳ್ಳೆಯ ಮತ್ತು ಕೆಟ್ಟ ಗುಣಗಳೆರಡೂ ಇವೆ. ಒಳ್ಳೆಯವರ ನೆರಳಿನಲ್ಲಿ ಬಾಳಿದರೆ ಜೀವನ ವಿಕಾಸಗೊಳ್ಳುವುದು. ದುರ್ಜನರ ಒಡನಾಟದಿಂದ ಬದುಕು ಸರ್ವ ನಾಶವಾಗುತ್ತದೆ. ಮೌಢ್ಯ ಎಂಬ ಅಂಧಕಾರವನ್ನು ಕಳೆದು ಶಿವಜ್ಞಾನದ ಅರಿವನ್ನು ಶ್ರೀ ಗುರುವಿನಿಂದ ಪಡೆಯಲು ಸಾಧ್ಯ. ಶಿವಪಥವನರಿಯಲು ಗುರು ಬೋಧಾಮೃತ ಅವಶ್ಯಕ. ಹೊರಗಿನ ಕತ್ತಲೆ ಸೂರ್ಯ ಕಳೆಯುತ್ತಾನೆ. ಅಂತರಂಗದಲ್ಲಿ ಮನೆ ಮಾಡಿದ ಅಜ್ಞಾನ ಅನ್ನುವ ಕತ್ತಲೆಯನ್ನು ಗುರು ಕಳೆಯುತ್ತಾನೆ. ಪ್ರತಿ ವರುಷ ಮಳಲಿ ಸಂಸ್ಥಾನ ಮಠದಲ್ಲಿ ಕಾರ್ತೀಕ ದೀಪೋತ್ಸವ ಸಮಾರಂಭ ಅದ್ದೂರಿಯಾಗಿ ನಡೆಯಲು ಈ ಭಾಗದ ಭಕ್ತರ ಶ್ರದ್ಧಾ ಭಾವನೆಗಳೇ ಕಾರಣವೆಂದು ಹರುಷ ವ್ಯಕ್ತಪಡಿಸಿ ಮಳಲಿ ಮಠದ ಡಾ.ನಾಗಭೂಷಣ ಶಿವಾಚಾರ್ಯರಿಗೆ ರೇಶ್ಮೆ ಮಡಿ ಫಲ ಪುಷ್ಪವಿತ್ತು ಸ್ಮರಣಿಕೆ ನೀಡಿ ಆಶೀರ್ವದಿಸಿದರು.
ಸಮಾರಂಭ ಉದ್ಘಾಟಿಸಿದ ಮಾಜಿ ಸಚಿವ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಗುರಿಯಿಲ್ಲದ ಗುರಿ ಸಾಧಿಸದ ಬದುಕು ನಿರರ್ಥಕ. ಪ್ರಾಣ ಯೌವನ ಕಾಲ ಒಮ್ಮೆ ಕಳೆದರೆ ಮತ್ತೆಂದೂ ತಿರುಗಿ ಬರಲಾರವು. ಶ್ರಮದ ಬೆವರಿನ ಫಲ ಶಾಶ್ವತ ಮತ್ತು ಸುಖದಾಯಕ. ವೀರಶೈವ ಧರ್ಮದ ಪೀಠ ಮಠಗಳು ಭಕ್ತರ ಕಲ್ಯಾಣಕ್ಕಾಗಿ ಸದಾ ಶ್ರಮಿಸುತ್ತಿವೆ ಎಂದ ಅವರು ಸರ್ಕಾರ ಯಾವುದೇ ಇರಲಿ ತಪ್ಪು ನರ್ಧಾರವನ್ನು ಕೈಗೊಂಡಾಗ ಎಚ್ಚರಿಸುವ ಕೆಲಸವನ್ನು ಮಠಾಧಿಪತಿಗಳು ಮಾಡುವಂತಾಗಬೇಕು. ಇಂದಿನ ಸರ್ಕಾರ ರೈತರ ಜಮೀನಿನನ್ನು ವಕ್ಫ ಅಸ್ತಿಯನ್ನಾಗಿ ಮಾಡಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿ ರಂಭಾಪುರಿ ಶ್ರೀಗಳು ಈ ನಿರ್ಧಾರದ ಕುರಿತು ಸರ್ಕಾರ ಕೂಡಲೇ ಪರಿಶೀಲನೆ ನಡೆಸಿ ನಿರ್ಧಾರವನ್ನು ವಾಪಾಸ್ಸು ಪಡೆಯುವಂತೆ ಸಲಹೆ ನೀಡಿರುವ ಬಗ್ಗೆ ಶ್ರೀಗಳ ರೈತಪರ ಹೇಳಿಕೆಯಿಂದಾಗಿ ರೈತರಲ್ಲಿ ದೈರ್ಯ ತುಂಬಿದಂತಾಗಿದೆ ಎಂದರು.
ಮಳಲಿ ಸಂಸ್ಥಾನ ಮಠದ ಡಾ.ನಾಗಭೂಷಣ ಶಿವಾಚಾರ್ಯರು ಅಧ್ಯಕ್ಷತೆ ವಹಿಸಿ ಮಾತನಾಡಿ, ಜೀವನ ಸಮೃದ್ದಿಗೆ ಮತ್ತು ಶಾಂತಿಗೆ ದೈವಿ ಗುಣಗಳ ಅವಶ್ಯಕತೆಯಿದೆ. ನೀರು ಗಾಳಿ ಬೆಳಕು ನೆಲ ಇವೆಲ್ಲವುಗಳನ್ನು ಕೊಟ್ಟ ಭಗವಂತನನ್ನು ನೆನಪಿಸಿಕೊಂಡು ಬಾಳುವುದು ನಮ್ಮೆಲ್ಲರ ಗುರಿಯಾಗಬೇಕಾಗಿದೆ. ಕಾರ್ತೀಕ ದೀಪೋತ್ಸವ ಸಮಾರಂಭದಿಂದ ಭಕ್ತರ ಬಾಳಿನಲ್ಲಿ ಹೊಸ ಉತ್ಸಾಹ ಶಕ್ತಿ ಪ್ರಾಪ್ತವಾಗಲೆಂದು ಬಯಸಿದರು.
ಸವಣೂರಿನ ಡಾ.ಗುರುಪಾದಯ್ಯ ಸಾಲಿಮಠ ಅವರು ಶ್ರೀ ಗುರು ಮಹಿಮೆ ಬಗೆಗೆ ಉಪನ್ಯಾಸ ನೀಡಿದರು. ನೇತೃತ್ವವನ್ನು ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯರು ಮತ್ತು ಸಮ್ಮುಖವನ್ನು ಬಂಕಾಪುರ ರೇವಣಸಿದ್ದೇಶ್ವರ ಶಿವಾಚಾರ್ಯರು ವಹಿಸಿ ಮಾತನಾಡಿದರು. ಈ ಪವಿತ್ರ ಧರ್ಮ ಸಮಾರಂಭದಲ್ಲಿ ಕವಲೇದುರ್ಗದ ಮರುಳಸಿದ್ಧ ಶಿವಾಚಾರ್ಯ ಸ್ವಾಮಿಗಳು ವೀರಶೈವ ಹಿರಿಮೆ ಗುರು ಮಹಿಮೆ ಕುರಿತು ಉಪನ್ಯಾಸವನ್ನಿತ್ತರು.
ಶಾಸಕ ಬೇಳೂರು ಗೋಪಾಲಕೃಷ್ಣ, ವಿ.ಪ.ಸದಸ್ಯ ಡಾ.ಧನಂಜಯ ಸರ್ಜಿ, ಡಿಸಿಸಿ ಬ್ಯಾಂಕ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ, ಮಾಜಿ ಸಚಿವ ಕಿಮ್ಮನೆ ರತ್ನಾಕರ, ಬಿ.ಎ.ಇಂದೂಧರಗೌಡ್ರು, ಎಸ್.ಪಿ.ದಿನೇಶ್, ಹೆಚ್.ಎಸ್.ಜಗದೀಶ್, ಚನ್ನಬಸಪ್ಪಗೌಡ, ಬಿ.ಯುವರಾಜ್, ವೀರೇಶ್ ಆಲವಳ್ಳಿ, ಹೆಚ್.ವಿ.ಈಶ್ವರಗೌಡ್ರು ಮುಖ್ಯ ಅತಿಥಿಗಳಾಗಿದ್ದರು.
ಧರ್ಮ ಸಮಾರಂಭದಲ್ಲಿ ಪಾಲ್ಗೊಂಡ ಹಲವಾರು ಗಣ್ಯರಿಗೆ ಮತ್ತು ದಾನಿಗಳಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆ ನೀಡಿ ಶುಭ ಹಾರೈಸಿದರು.
ಶಾಂತಪುರ, ಬಿಳಕಿ, ಸಂಗೊಳ್ಳಿ, ತಾವರೆಕೆರೆ, ಕಡೇನಂದಿಹಳ್ಳಿ, ಹನಮಾಪುರ, ಹಾರನಹಳ್ಳಿ, ಸಿಂದಗಿ ಶ್ರೀಗಳು ಪಾಲ್ಗೊಂಡು ಜಗದ್ಗುರುಗಳಿಂದ ಆಶೀರ್ವಾದ ಪಡೆದರು.
ಶಿವಪ್ರಕಾಶ ಪಾಟೀಲ ಕಗ್ಗಲಿ ಸ್ವಾಗತಿಸಿದರು. ಆರ್.ಎಸ್.ಪ್ರಶಾಂತ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಮೊಗ್ಗದ ಶಾಂತಾ ಆನಂದ ನಿರೂಪಿಸಿದರು.ಎನ್.ವರ್ತೇಶ್ ವಂದಿಸಿದರು. ಬಿ.ಎಂ.ಸುರೇಶ, ನಾಗರತ್ನಮ್ಮ ಚಂದ್ರಶೇಖರಯ್ಯ ಅವರಿಂದ ಸಂಗೀತ ಸೌರಭ ಜರುಗಿತು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಪ್ರತಿಭಾ ಕಾರಂಜಿ ಕಾರ್ಯಕ್ರಮದಿಂದ ಮಕ್ಕಳ ಪ್ರತಿಭೆ ಅನಾವರಣ
RIPPONPETE ; ಮಕ್ಕಳಲ್ಲಿರುವ ವಿವಿಧ ಕಲಾಭಿರುಚಿಗಳನ್ನು ವ್ಯಕ್ತಪಡಿಸಲು ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದ್ದು ಕಲಾ ಪ್ರದರ್ಶನದಿಂದ ಮಕ್ಕಳ ಪ್ರತಿಭೆ ವ್ಯಕ್ತಿತ್ವ ಹೊರಹೊಮ್ಮುವುದು ಎಂದು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಧನಲಕ್ಷ್ಮಿ ಹೇಳಿದರು.
ರಿಪ್ಪನ್‌ಪೇಟೆಯ ಶಾರದ ರಾಮಕೃಷ್ಣ ವಿದ್ಯಾಲಯದಲ್ಲಿ ಆಯೋಜಿಸಿದ್ದ 2024-25ನೇ ಸಾಲಿನ ರಿಪ್ಪನ್‌ಪೇಟೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.
ಶಾರದ ರಾಮಕೃಷ್ಣ ವಿದ್ಯಾಲಯದ ಸಂಸ್ಥಾಪಕ ಡಿ.ಎಂ.ದೇವರಾಜ್ ಅಧ್ಯಕ್ಷತೆ ವಹಿಸಿದ್ದರು.
ಬಾಳೂರು ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀನಿವಾಸ ಆಚಾರ್, ಗ್ರಾಮ ಪಂಚಾಯತ್ ಸದಸ್ಯೆ ಸಾರಾಭಿ, ತಾಲ್ಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಶೇಷಾಚಲ ಜಿ.ನಾಯಕ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಗೌರವಾಧ್ಯಕ್ಷ ಜಗದೀಶ ಕಾಗಿನಲ್ಲಿ, ಟಿ.ದಾನೇಶಪ್ಪ, ದುಗ್ಗಪ್ಪ, ಸಿಆರ್‌ಪಿ ಕೆ.ನಾಗರಾಜ್, ಸಂತೋಷ, ಮಹೇಶ, ಶಾರದ ರಾಮಕೃಷ್ಣ ಶಾಲಾ ಮುಖ್ಯೋಪಾಧ್ಯಾಯ ರವಿ, ಸುಶ್ಮಿತಾ, ಇನ್ನಿತರರು ಹಾಜರಿದ್ದರು.