HOSANAGARA ; ಜನುಮಧಾತೆ, ಜನ್ಮಭೂಮಿಯಷ್ಟೇ ಮಾತೃಭಾಷೆ ಮೇಲಿನ ಪ್ರೇಮ ಕನ್ನಡ ನಾಡಿನ ಪ್ರತಿಯೊಬ್ಬ ನಾಗರೀಕನ ಜವಾಬ್ದಾರಿ ಆಗಿದೆ ಎಂದು ಮೇಲನಬೆಸಿಗೆ ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀನಿವಾಸ ರೆಡ್ಡಿ ತಿಳಿಸಿದರು.
ತಾಲೂಕಿನ ಜಯನಗರದಲ್ಲಿ ಶ್ರೀ ವರಸಿದ್ದಿವಿನಾಯಕ ಸಂಘ, ಕನ್ನಡ ರಾಜ್ಯೋತ್ಸವ ಆಚರಣಾ ಸಮಿತಿ ಸಂಯುಕ್ತ ಆಶ್ರಯದಲ್ಲಿ ನಡೆದ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ತ.ಮ.ನರಸಿಂಹ ಮಾತನಾಡಿ, ವಿಶ್ವದಲ್ಲಿ ಒಟ್ಟಾರೆ ಎಂಟು ಸಾವಿರ ಭಾಷೆಗಳಿದ್ದು, ಸುಮಾರು ಎರಡು ಸಾವಿರ ಭಾಷೆಗಳನ್ನು ಅಧಿಕೃತ ಎನ್ನಲಾಗಿದ್ದು. ಅವುಗಳಲ್ಲಿ ಇಪ್ಪತ್ತು ಭಾಷೆಗಳು ವಿಶ್ವವ್ಯಾಪ್ತಿ ಮನ್ನಣೆ ಪಡೆದಿವೆ. ಅದರಲ್ಲಿ ಕನ್ನಡ ಭಾಷೆ ಸಹ ಒಂದು ಎಂಬ ಹೆಗ್ಗಳಿಕೆ ನಮ್ಮದಾಗಿದೆ ಎಂಬ ಅಭಿಮತ ವ್ಯಕ್ತಪಡಿಸಿದರು.

ಕನ್ನಡ ಸಂಘದ ಅಧ್ಯಕ್ಷ ಧರ್ಮರಾವ್ ಸೇಡಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡಿಗರು ಭಾಷಾಭಿಮಾನ ಬೆಳೆಸಿಕೊಂಡು, ಯುವಪೀಳಿಗೆಗೆ ಹಸ್ತಾಂತರಿಸುವ ಕಾಯಕದಲ್ಲಿ ತೊಡಗುವಂತೆ ಕಿವಿಮಾತು ಹೇಳಿದರು.
ಕನ್ನಡ ಸಂಘದ ಗೌರವಾಧ್ಯಕ್ಷ ಸಿ.ಎಂ. ಚಂದ್ರಮೂರ್ತಿ ಮಾತನಾಡಿ, ಇತಿಹಾಸ ಹಾಗೂ ಮಾತೃಭಾಷೆ ಒಂದಕ್ಕೊಂದು ಪೂರಕವಾದಾಗ ಮಾತ್ರವೇ ಹೊಸಬೆಳಕು ಮೂಡಲು ಸಾಧ್ಯವೆಂದರು.
ಇದೇ ಸಂದರ್ಭದಲ್ಲಿ ತಾಲೂಕಿನ ಇತಿಹಾಸಕಾರ, ಸಾಹಿತಿ ಅಂಬ್ರಯ್ಯಮಠ ಅವರನ್ನು ಸಂಘ ಆತ್ಮೀಯವಾಗಿ ಸನ್ಮಾನಿಸಿತು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ, ಉದ್ಯಮಿ ಹಾಲಗದ್ದೆ ಉಮೇಶ್, ಶ್ರೀ ವಿದ್ಯಾಗಣಪತಿ ಸೇವಾ ಸಮಿತಿ ಅಧ್ಯಕ್ಷ ಸಾಲಗೇರಿ ಲಕ್ಷ್ಮಣ ಗೌಡ, ಶ್ರೀ ವರಸಿದ್ದಿವಿನಾಯಕ ಸಂಘದ ಅಧ್ಯಕ್ಷ ಬಿ.ಎ. ಅಕ್ಷಯ್ ಕುಮಾರ್, ಕನ್ನಡ ರಾಜ್ಯೋತ್ಸವ ಸಮಿತಿ ಅಧ್ಯಕ್ಷ ಟಿ. ಸುನೀಲ್, ಜಯನಗರ ಪ್ರಹ್ಲಾದ್, ಕಾರ್ಯದರ್ಶಿ ಶೇಟ್ ಉಪಸ್ಥಿತರಿದ್ದರು.
ನಿಶ್ಮಿತಾ ಎಸ್ ಪೂಜಾರಿ ಪ್ರಾರ್ಥಿಸಿ, ಜಯನಗರ ಗುರುಪ್ರಸಾದ್ ನಿರೂಪಿಸಿ, ಸುರೇಶ್ ಆಚಾರ್ಯ ವಂದಿಸಿದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.