KOPPA ; ನೀರು ಸೇದುವಾಗ ಆಯತಪ್ಪಿ 60 ಅಡಿ ಆಳದ ಬಾವಿಗೆ ಬಿದ್ದ ವೃದ್ದೆಯನ್ನು ಅಗ್ನಿಶಾಮಕ ದಳ ಸಿಬ್ಬಂದಿಗಳು ರಕ್ಷಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಮರಕಟ್ಟೆ ಗ್ರಾಮದಲ್ಲಿ ಸೋಮವಾರ ನಡೆದಿದೆ.
90 ವರ್ಷ ಪ್ರಾಯದ ವೃದ್ಧೆ ಕಮಲ ಅವರು ಮನೆಯ ಪಕ್ಕದಲ್ಲೇ ಇದ್ದ ಬಾವಿಯಲ್ಲಿ ನೀರು ಸೇದುವಾಗ ಕಾಲು ಜಾರಿ 60 ಅಡಿ ಆಳದ ಬಾವಿಗೆ ಬಿದ್ದಿದ್ದರು. ಬಾವಿಯೊಳಗೆ ಪೈಪ್ ಹಿಡಿದು ಮುಳುಗದಂತೆ ಕಮಲ ಅವರು ಒಂದು ಗಂಟೆಗೂ ಹೆಚ್ಚು ಕಾಲ ಸಾವು ಬದುಕಿನ ನಡುವೆ ಹೋರಾಡಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕದಳ ಸಿಬ್ಬಂದಿಗಳು ಬಾವಿಯಲ್ಲಿದ್ದ ವೃದ್ದೆಯ ರಕ್ಷಣೆ ಮಾಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ವಿಶ್ವನಾಥ ಅವರು ಹಗ್ಗದ ಸಹಾಯದಿಂದ ವೃದ್ದೆಯನ್ನು ಮೇಲೆಕ್ಕೆತ್ತಿದ್ದಾರೆ.
ತೀವ್ರ ಅಸ್ತಸ್ಥಗೊಂಡಿದ್ದ ವೃದ್ದೆಯನ್ನು ಕೊಪ್ಪ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಅಗ್ನಿಶಾಮಕ ದಳದ ಕಾರ್ಯಕ್ಕೆ ಸ್ಥಳೀಯರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.